More

    ಕಾಲೇಜು ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ

    ಮುಂಡಗೋಡ: ತಾಲೂಕಿನ ಕರಗಿನಕೊಪ್ಪ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪಿಯುಸಿ ಕಾಲೇಜು ನೂತನ ಕಟ್ಟಡ ಹಾಗೂ ವಸತಿ ನಿಲಯದ ಕಟ್ಟಡಗಳು ನಿರ್ಮಾಣಗೊಂಡು ಒಂದು ವರ್ಷ ಕಳೆದರೂ ಉದ್ಘಾಟನೆ ಮಾಡದಿರುವುದು ಸಾರ್ವಜನಿಕರಿಗೆ ಸಂಶಯ ಮೂಡುವಂತೆ ಮಾಡಿದೆ.
    ಮಕ್ಕಳಿಗೆ ಶಿಕ್ಷಣ ಹಾಗೂ ಮೂಲ ಸೌಲಭ್ಯಗಳನ್ನು ಸಮರ್ಪಕ ವಾಗಿ ಒದಗಿಸುವಲ್ಲಿ ಹಿನ್ನಡೆ ಸಾಧಿಸಿರುವ ಕರಗಿನಕೊಪ್ಪ ಮುರಾರ್ಜಿ ಶಾಲೆಯೂ ಇದೀಗ ಸರ್ಕಾರದ ಯೋಜನೆ ಅನುಷ್ಠಾನ ಗೊಳಿಸುವಲ್ಲಿಯೂ ವಿಫಲಗೊಂಡಿದೆ.
    ಹೊಸ ಕಟ್ಟಡ ಮಂಜೂರಿ: ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕೆಲ ವರ್ಷಗಳ ಹಿಂದೆ ಸರ್ಕಾರ ಹತ್ತನೇ ತರಗತಿಯಿಂದ ಪಿಯುಸಿ ವಿಜ್ಞಾನ ವಿಭಾಗದವರೆಗೆ ಮೇಲ್ದರ್ಜೆಗೇರಿಸಿತು. ಇದರಿಂದ ಈ ವಸತಿ ಶಾಲೆಯಲ್ಲಿಯೇ ಪಿಯುಸಿ ವಿಜ್ಞಾನ ವಿಭಾಗದ ಕಾಲೇಜು ಹಾಗೂ ವಸತಿ ನಿಲಯ ಆರಂಭಿಸಲಾಯಿತು. ಇದೀಗ ನೂತನ ಕಟ್ಟಡ ನಿರ್ಮಿಸಲು ಸರ್ಕಾರ ಅನುದಾನ ಮಂಜೂರಿ ಮಾಡಿದೆ.
    ವರ್ಷವಾದರೂ ಉದ್ಘಾಟನೆ ಭಾಗ್ಯವಿಲ್ಲ: ವಸತಿ ಶಾಲೆ ಆವರಣದಲ್ಲಿ 10 ಕೋಟಿ ರೂ. ಅಧಿಕ ಅನುದಾನದಲ್ಲಿ ಪಿಯುಸಿ ವಿಜ್ಞಾನ ಕಾಲೇಜ್ ಕಟ್ಟಡ, ಬಾಲಕ-ಬಾಲಕಿಯರ ಪ್ರತ್ಯೇಕ ವಸತಿ ನಿಲಯ ಮತ್ತು ಭೋಜನಾಲಯ ಕಟ್ಟಡಗಳನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಈ ಕಟ್ಟಡ ಕಾಮಗಾರಿ ಮುಕ್ತಾಯಗೊಂಡಿದ್ದರೂ ಉದ್ಘಾಟನೆಯಾಗದಿರುವುದು ಯಾಕೆ? ಎಂಬ ಪ್ರಶ್ನೆ ಸದ್ಯ ವಿದ್ಯಾರ್ಥಿಗಳನ್ನು ಕಾಡುತ್ತಿದೆ.
    ಹಳೆಯ ಕಟ್ಟಡದಲ್ಲಿರುವ ಕಾಲೇಜು ವಿದ್ಯಾರ್ಥಿಗಳು ನೀರು, ಶೌಚಗೃಹ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ನೂತನ ಕಟ್ಟಡ ಉದ್ಘಾಟಿಸಿ ಆರಂಭಿಸಿದರೆ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ಕುರಿತು ಈ ವಸತಿ ಶಾಲೆಯ ಪ್ರಾಚಾರ್ಯ ನೂತನ ಕಟ್ಟಡ ಹಸ್ತಾಂತರಿಸಿಕೊಂಡು ಉದ್ಘಾಟನೆ ಮಾಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಏಕೆ ಮುಂದಾಗುತ್ತಿಲ್ಲ ಎಂಬುದು ತಿಳಿಯದಾಗಿದೆ. ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಕೂಡಲೆ ನೂತನ ಕಟ್ಟಡಗಳನ್ನು ಉದ್ಘಾಟಿಸಿ ವಿದ್ಯಾರ್ಥಿಗಳ ಬಳಕೆಗೆ ಅನುಕೂಲ ಮಾಡಿಕೊಡಬೇಕಿದೆ.

    ಹಳೆಯ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಸ್ವಲ್ಪ ತೊಂದರೆಯಾಗುತ್ತಿದ್ದು, 15 ದಿನದೊಳಗೆ ನೂತನ ಕಟ್ಟಡಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ಸ್ಥಳಾಂತರಿಸುತ್ತೇವೆ. ಕಾಲೇಜು ವಿದ್ಯಾರ್ಥಿಗಳ ವಸತಿ ನಿಲಯ ಹಾಗೂ ಕಾಲೇಜು ಶಿಕ್ಷಣ ಹೊಸ ಕಟ್ಟಡದಲ್ಲಿ ಆರಂಭವಾಗುತ್ತದೆ. ನಂತರ ಜನಪ್ರತಿನಿಧಿಗಳಿಂದ ಉದ್ಘಾಟನೆ ಮಾಡಿಸಲಾಗುವುದು.
    ಅಜ್ಜಪ್ಪ ಸೊಗಲದ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ

    ಕಾಲೇಜು ವಿದ್ಯಾರ್ಥಿಗಳಿಗೆಂದು ಹೊಸ ಕಾಲೇಜು ಕಟ್ಟಡ ಹಾಗೂ ಹಾಸ್ಟೆಲ್ ಕಟ್ಟಡ ನಿರ್ಮಿಸಿ ವರ್ಷವಾಗಿದೆ. ಇದುವರೆಗೂ ಉದ್ಘಾಟಿಸಿಲ್ಲ. ಹೊಸ ಕಟ್ಟಡ ಉದ್ಘಾಟಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಬೇಕು.
    ಹೆಸರು ಹೇಳಲಿಚ್ಛಿಸದ ಕಾಲೇಜು ವಿದ್ಯಾರ್ಥಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts