More

    1 ತಿಂಗಳು, 3 ಭಾಷೆ, 3 ಚಿತ್ರ!; ಚತುರ್ಭಾಷಾ ಚತುರೆ ಸಂಯುಕ್ತಾ ಮೆನನ್

    | ಹರ್ಷವರ್ಧನ್ ಬ್ಯಾಡನೂರು

    ಕಳೆದ ಶುಕ್ರವಾರ ತೆರೆಗೆ ಬಂದ ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ‘ಗಾಳಿಪಟ 2’ ಚಿತ್ರತಂಡಕ್ಕೆ ಈ ಚಿತ್ರ ಗೆದ್ದ ಖುಷಿಯಿದ್ದರೆ, ಮತ್ತೊಂದೆಡೆ ಈ ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಮಲಯಾಳಿ ಸುಂದರಿ ಸಂಯುಕ್ತಾ ಮೆನನ್​ಗೆ ಹ್ಯಾಟ್ರಿಕ್ ಬಾರಿಸಿದ ಖುಷಿ. ಹೌದು, ಕಳೆದ ತಿಂಗಳು ಅವರು ನಟಿಸಿದ್ದ ಮಲಯಾಳಂ ಚಿತ್ರ ‘ಕಡುವ’ ಬಿಡುಗಡೆಯಾಗಿತ್ತು. ಅದಾಗುತ್ತಲೇ ಆಗಸ್ಟ್ ಮೊದಲ ವಾರ ತೆಲುಗು ಚಿತ್ರ ‘ಬಿಂಬಿಸಾರ’ ತೆರೆಗೆ ಬಂದಿತ್ತು. ಅದರ ಬೆನ್ನಲ್ಲೇ ಆಗಸ್ಟ್ ಎರಡನೇ ಶುಕ್ರವಾರ ‘ಗಾಳಿಪಟ 2’ ಬಿಡುಗಡೆಯಾಗಿದೆ. ವಿಶೇಷ ಅಂದರೆ ಈ ಮೂರು ಚಿತ್ರಗಳೂ ಬಾಕ್ಸಾಫೀಸ್​ನಲ್ಲಿ ಸದ್ದು ಮಾಡಿವೆ. ಇದೇ ಖುಷಿಯಲ್ಲಿ ಸಂಯುಕ್ತಾ ‘ವಿಜಯವಾಣಿ’ ಜತೆ ಮಾತಿಗೆ ಸಿಕ್ಕರು.

    ‘ನಮಗೆ ಗೊತ್ತಿಲ್ಲದೆಯೇ ಕೆಲವೊಮ್ಮೆ ಒಳ್ಳೆ ವಿಷಯಗಳು ನಮ್ಮ ಬಳಿಗೆ ಬರುತ್ತವೆ. ನನಗೆ ‘ಗಾಳಿಪಟ 2’ ಅವಕಾಶ ಸಿಕ್ಕಿದ್ದೂ ಹಾಗೆಯೇ. ಬೆಂಗಳೂರಿನಲ್ಲಿ ನನ್ನ ಸಂಬಂಧಿಕರು, ಗೆಳೆಯರು ಇದ್ದಾರೆ. ಇಲ್ಲಿನ ವಾತಾವರಣ ನನಗಿಷ್ಟ. ಆಗಾಗ ಬರುತ್ತಿರುತ್ತೇನೆ. ಅದೇ ರೀತಿ ಮೂರು ದಿನ ಬ್ರೇಕ್​ಗಾಗಿ ಇಲ್ಲಿಗೆ ಬಂದೆ. ಆಗ ಯಾವುದೋ ಬೇರೆ ಚಿತ್ರಕ್ಕೆ ಕರೆ ಬಂತು. ಆ ಮೀಟಿಂಗ್​ಗೆ ಹೋದಾಗ ಅಲ್ಲಿ ಯೋಗರಾಜ್ ಭಟ್ ಸರ್ ಕೂಡ ಇದ್ದರು. ‘ಗಾಳಿಪಟ 2’ ಅನುಪಮ ಪಾತ್ರ ಆಫರ್ ನೀಡಿ, ‘ಗಾಳಿಪಟ’ ಚಿತ್ರ ನೋಡಲು ತಿಳಿಸಿದರು. ಚಿತ್ರ ನನಗೆ ಇಷ್ಟವಾಯಿತು, ಒಪ್ಪಿಕೊಂಡೆ’ ಎಂದು ಗಾಳಿಪಟ ಸೀಕ್ವಲ್ ಸೇರಿದ ಬಗ್ಗೆ ಹೇಳಿಕೊಳ್ಳುತ್ತಾರೆ ಸಂಯುಕ್ತಾ.

    ಇಂತಹ ಸಂಯುಕ್ತಾ ಚಿತ್ರರಂಗಕ್ಕೆ ಬಂದ ಪ್ರಾರಂಭದಲ್ಲಿ ಅವಕಾಶ ಸಿಕ್ಕರೆ ಸಾಕು ಎನ್ನುತ್ತಿದ್ದರಂತೆ. ಆದರೀಗ ‘ನಾನೇ ಕಥೆ, ಪಾತ್ರ ಆಯ್ಕೆ ಮಾಡಿಕೊಳ್ಳುತ್ತೇನೆ’ ಎನ್ನುತ್ತಾರೆ. ‘ಈಗ ಕರಿಯರ್​ನಲ್ಲಿ ತುಂಬ ದೂರ ಸಾಗಿ ಬಂದಿದ್ದೇನೆ. ‘ಕಡುವ’, ‘ಬಿಂಬಿಸಾರ’ ಎರಡು ಚಿತ್ರಗಳೂ ಚೆನ್ನಾಗಿ ಆಗಿವೆ. ಈಗ ‘ಗಾಳಿಪಟ 2’ ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ’ ಎಂದು ಖುಷಿಯಾಗುತ್ತಾರೆ. ಅಂದಹಾಗೆ, ಸಂಯುಕ್ತಾ ಕೂಡ ಕನ್ನಡ ಚಿತ್ರಗಳ ಅಭಿಮಾನಿಯಂತೆ, ‘ಕನ್ನಡದಲ್ಲಿ ಉತ್ತಮ ಚಿತ್ರಗಳು ಮೂಡಿಬರುತ್ತಿವೆ. ‘ಕೆಜಿಎಫ್ 2’ ದೊಡ್ಡ ಚಿತ್ರ, ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತು. ಅದಕ್ಕೆ ಹೋಲಿಸಿದರೆ ‘777 ಚಾರ್ಲಿ’ ಚಿಕ್ಕ ಸಿನಿಮಾ. ಆದರೆ, ಅದು ಕೂಡ ಕೆಜಿಎಫ್ ರೀತಿಯಲ್ಲೇ ಸದ್ದು ಮಾಡಿತು. ಈ ಎರಡೂ ಚಿತ್ರಗಳು ನನಗಿಷ್ಟ’ ಎಂದು ಹೇಳಿಕೊಳ್ಳುತ್ತಾರೆ. ಹಾಗೆಯೇ ಪುನೀತ್ ರಾಜ್​ಕುಮಾರ್ ಅವರ ‘ಮಿಲನ’ ಅಚ್ಚುಮೆಚ್ಚಿನ ಚಿತ್ರವೆಂದು ಹೇಳುವ ಸಂಯುಕ್ತಾ, ‘ಪುನೀತ್ ಸರ್ ಜತೆ ಪಾರ್ವತಿ ಮೆನನ್ ನಟಿಸಿದ್ದ ‘ಮಿಲನ’ ಮಲಯಾಳಂನಲ್ಲಿ ಡಬ್ ಆಗಿ ಆಗಾಗ ಟಿವಿಯಲ್ಲಿ ಬರುತ್ತಿತ್ತು. ನಾನು ಹಲವು ಬಾರಿ ನೋಡಿದ್ದೇನೆ. ‘ನಿನ್ನಿಂದಲೇ’ ಹಾಡು ಇಷ್ಟ’ ಎಂದು ಒಂದು ಸಾಲು ಹಾಡನ್ನೂ ಹಾಡುತ್ತಾರೆ. ಇನ್ನು ಮುಂದೇನು? ಎಂಬ ಪ್ರಶ್ನೆಗೆ, ‘ಧನುಷ್ ಜತೆ ‘ವಾತಿ’ ಹಾಗೂ ಸಾಯಿ ಧರಮ್ ತೇಜ್ ಅವರ ಜತೆ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದೇನೆ’ ಎನ್ನುವ ಸಂಯುಕ್ತಾ, ಸದ್ಯಕ್ಕೆ ಕನ್ನಡದಲ್ಲಿ ಯಾವುದೇ ಚಿತ್ರ ಸೈನ್ ಮಾಡಿಲ್ಲವಂತೆ. ಆದರೆ ಉತ್ತಮ ಅವಕಾಶ ಸಿಕ್ಕರೆ ‘ಖಂಡಿತ ನಟಿಸುತ್ತೇನೆ’ ಎನ್ನುತ್ತಾರೆ.

    ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ‘ಡೊಳ್ಳು’, ಇದೀಗ ನಟ ಡಾಲಿ ಧನಂಜಯ ಮೂಲಕ ಮತ್ತೆ ಸದ್ದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts