More

    ಪಾರ್ಕಿಂಗ್‌ಗೆ ಶಿವಮೊಗ್ಗದಲ್ಲಿ ಬಹುಮಹಡಿ ಕಟ್ಟಡ ರೆಡಿ

    ಅರವಿಂದ ಅಕ್ಲಾಪುರ ಶಿವಮೊಗ್ಗ
    ನಗರದ ಶಿವಪ್ಪ ನಾಯಕ ವೃತ್ತದ ಎದುರಿನಲ್ಲಿ ವಾಹನ ನಿಲುಗಡೆಗೆಂದು ಬಹುಮಹಡಿ ಕಟ್ಟಡ ನಿರ್ಮಾಣವಾಗಿದ್ದು, ಅಂತಿಮ ಹಂತದ ಸಣ್ಣ ಪುಟ್ಟ ಕಾಮಗಾರಿಗಳು ಬಾಕಿಯಿವೆ. ಇಲ್ಲಿ ಏಕಕಾಲಕ್ಕೆ 172 ಕಾರುಗಳು ಹಾಗೂ 78 ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ಜಿಲ್ಲೆಯ ಮೊದಲ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ ಎಂಬ ಹೆಗ್ಗಳಿಕೆ ಇದರದ್ದಾಗಿದೆ.

    ಸ್ಮಾರ್ಟ್‌ಸಿಟಿ ಯೋಜನೆ ರೂಪಿಸುವ ಸಂದರ್ಭದಲ್ಲೇ ನಗರದ ಹೃದಯ ಭಾಗದಲ್ಲಿ ಬಹುಮಹಡಿ ಕಟ್ಟಡದಲ್ಲಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿತ್ತು. ಇದಕ್ಕಾಗಿ ಶಿವಪ್ಪನಾಯಕ ವೃತ್ತದ ಸಮೀಪವಿದ್ದ ಹೂವಿನ ಮಾರುಕಟ್ಟೆ ಜಾಗವನ್ನು ಗುರುತಿಸಲಾಗಿತ್ತು.
    ಪ್ರಸ್ತುತ ಸಿಟಿ ಸೆಂಟ್ರಲ್ ಮಾಲ್ ಇರುವ ಜಾಗದಲ್ಲಿದ್ದ ಹೂವಿನ ಮಾರುಕಟ್ಟೆಯನ್ನು ತೆರವುಗೊಳಿಸಿ ಮಾಲ್ ನಿರ್ಮಾಣ ಮಾಡಲಾಗಿತ್ತು. ಅಲ್ಲಿದ್ದ ಹೂವಿನ ವ್ಯಾಪಾರಿಗಳಿಗೆ ಶಿವಪ್ಪನಾಯಕ ವೃತ್ತದ ಸಮೀಪವಿದ್ದ ಖಾಲಿ ಜಾಗದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ನಮಗೆ ಇದೇ ಜಾಗದಲ್ಲಿ ಶಾಶ್ವತ ಮಳಿಗೆ ನೀಡಿದರೆ ಮಾತ್ರ ಜಾಗ ಬಿಟ್ಟುಕೊಡಲು ಸಿದ್ಧ ಎಂದು ಷರತ್ತು ವಿಧಿಸಿದ್ದರು.
    ಆ ಪ್ರಕಾರ ಹೂವಿನ ವ್ಯಾಪಾರಿಗಳಿಗೆ ತಾತ್ಕಾಲಿಕವಾಗಿ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿ ವ್ಯವಸ್ಥೆ ಮಾಡಿ ಮಲ್ಟಿ ಲೆವೆಲ್ ಪಾರ್ಕಿಂಗ್‌ಗೆ ಕಟ್ಟಡ ನಿರ್ಮಿಸಲಾಗಿತ್ತು. ಈಗ ಇದೇ ಕಟ್ಟಡದ ನೆಲಮಳಿಗೆಯಲ್ಲಿ 118 ಹೂವಿನ ವ್ಯಾಪಾರಿಗಳಿಗೆ ತಲಾ ಒಂದೊಂದು ಮಳಿಗೆ ಹಂಚಿಕೆ ಮಾಡಲಾಗುತ್ತಿದೆ.
    ಫೆ.27ರಂದು ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ಸಂದರ್ಭದಲ್ಲಿಯೇ ಸ್ಮಾರ್ಟ್ ಸಿಟಿಯ ವಿವಿಧ ಕಾಮಗಾರಿಗಳನ್ನೂ ಲೋಕಾರ್ಪಣೆಗೊಳಿಸಿದ್ದರು. ಅದರಲ್ಲಿ ಈ ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆಯೂ ಸೇರಿದೆ. ಇನ್ನು ಕೆಲ ದಿನಗಳಲ್ಲೇ ಇದು ಅಧಿಕೃತವಾಗಿ ಪಾಲಿಕೆಗೆ ಹಸ್ತಾಂತರವಾಗಲಿದೆ.

    ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಗರ ಪಾಲಿಕೆಗೆ ಹಸ್ತಾಂತರವಾದ ಬಳಿಕ ಸರ್ಕಾರದ ಮಾರ್ಗಸೂಚಿ ಪ್ರಕಾರ ಟೆಂಡರ್ ಕರೆಯಲಾಗುತ್ತದೆ. ವಾಹನ ನಿಲುಡಗಡೆ ಇಂತಿಷ್ಟೇ ಶುಲ್ಕ ವಿಧಿಸಬೇಕೆಂದು ಸರ್ಕಾರದ ನಿರ್ದೇಶನವಿದೆ. ಅದನ್ನು ಟೆಂಡರ್‌ದಾರರು ಪಾಲಿಸಲೇ ಬೇಕು. ನಾಗರಿಕರಿಗೆ ಆರ್ಥಿಕ ಹೊರೆಯಾಗಲು ಅವಕಾಶ ನೀಡುವುದಿಲ್ಲ ಎಂದು ನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ತಿಳಿಸಿದ್ದಾರೆ.

    ಮಲ್ಟಿ ಲೆವೆಲ್ ಪಾರ್ಕಿಂಗ್ ವಿಶೇಷತೆ: ಪೂರ್ಣಗೊಳಿಸಬೇಕಾದ ಅವಧಿ-2023 ಜುಲೈ 31, ಒಟ್ಟು ವಿಸ್ತೀರ್ಣ-10,506 ಚದರ ಮೀಟರ್, ಬೇಸ್‌ಮೆಂಟ್‌ನಲ್ಲಿ-43 ಕಾರು ಹಾಗೂ 78 ಬೈಕ್ ನಿಲುಗಡೆ, ಗ್ರೌಂಡ್ ಫ್ಲೋರ್‌ನಲ್ಲಿ-118 ಹೂವಿನ ಮಳಿಗೆಗಳು. ಮೊದಲ ಮಹಡಿಯಲ್ಲಿ-43 ಕಾರುಗಳ ನಿಲುಗಡೆ, ಎರಡನೇ ಮಹಡಿಯಲ್ಲಿ-43 ಕಾರು ನಿಲ್ಲಲು ಅವಕಾಶ, ಮೂರನೇ ಮಹಡಿಯಲ್ಲಿ-43 ಕಾರು ನಿಲುಗಡೆ, ಮಳೆ ಕೊಯ್ಲು ಮೂಲಕ 2.50 ಲಕ್ಷ ಲೀಟರ್ ಇಂಗಿಸಲಾಗುವುದು, 8 ಮಂದಿ ಕರೆದೊಯ್ಯಬಲ್ಲ 1 ಲಿಫ್ಟ್ ಅಳವಡಿಕೆ, ವಾಹನ ಒಳಗೆ ಬರಲು, ಹೊರಹೋಗಲು ಪ್ರತ್ಯೇಕ ದಾರಿ.

    ಮಳಿಗೆ ಹಂಚಿಕೆ ಹೇಗೆ?: ನಗರ ಪಾಲಿಕೆಗೆ ಈ ಬಹುಮಹಡಿ ಕಟ್ಟಡ ಹಸ್ತಾಂತರವಾದ ಬಳಿಕವಷ್ಟೇ ಸಾರ್ವಜನಿಕರಿಗೆ ಇದು ಬಳಕೆಗೆ ಸಿಗಲಿದೆ. ಆದರೆ ಈ ಪ್ರಕ್ರಿಯೆ ಅಷ್ಟು ಸುಲಭವಾಗಿ ಮುಗಿಯುವಂತೆ ಕಾಣುತ್ತಿಲ್ಲ. ಏಕೆಂದರೆ ಹೂವು ಮಾರಾಟಗಾರರಿಗೆ ಮಳಿಗೆಗಳನ್ನು ವಿತರಣೆ ಮಾಡಬೇಕು. ಈ ಹಿಂದಿದ್ದ ಮಾರಾಟಗಾರರ ಜತೆಗೆ ಮತ್ತಷ್ಟು ಹೊಸಬರೂ ಮಳಿಗೆಗಾಗಿ ಲಾಬಿ ಮಾಡುವ ಸಾಧ್ಯತೆಗಳಿವೆ. ನಗರ ಪಾಲಿಕೆ ಚುನಾವಣೆಯೂ ಇದೇ ವರ್ಷ ನಡೆಯುವುದರಿಂದ ಮಳಿಗೆ ಹರಾಜು ಪ್ರಕ್ರಿಯೆ ರಾಜಕೀಯ ಸ್ವರೂಪ ಪಡೆದುಕೊಳ್ಳಬಹುದು. ಈ ಹಿಂದೆ ವಿನೋಬನಗರ ಶಿವಾಲಯದ ಬಳಿಯ ಮಳಿಗೆ ಹರಾಜು ಪ್ರಕ್ರಿಯೆ ವಿಳಂಬವಾಗಿದ್ದರ ನಿದರ್ಶನ ಎಲ್ಲರ ಮುಂದಿದೆ. ಹೀಗಾಗಿ ಮಳಿಗೆ ಹಂಚಿಕೆ ಹೇಗೆ ನಡೆಯಲಿದೆ ಎಂಬ ಕೂತೂಹಲವೂ ಇದೆ.

    ಪೇ ಆ್ಯಂಡ್ ಪಾರ್ಕಿಂಗ್: ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದೆ. ಕಾರುಗಳ ಸಂಖ್ಯೆಯೂ ಜಾಸ್ತಿಯಾಗುತ್ತಿರುವುದರಿಂದ ರಸ್ತೆಗಳು ಕಿರಿದಾಗುತ್ತಿವೆಯೇನೋ ಎಂಬಂತೆ ಬಾಸವಾಗುತ್ತಿದೆ. ಇನ್ನು ವಾಹನಗಳ ನಿಲುಗಡೆಗೆ ಜಾಗ ಹುಡುಕಬೇಕಾದ ಸ್ಥಿತಿಯಿದೆ. ಈಗ ಬಿಎಚ್ ರಸ್ತೆ, ನೆಹರೂ ರಸ್ತೆಗಳಲ್ಲಿ ಎರಡು ಸುತ್ತು ಬಂದರೂ ಕಾರು ನಿಲ್ಲಿಸಲು ಜಾಗ ಸಿಗುವುದಿಲ್ಲ. ಈ ಕಾರಣದಿಂದ ವಾಹನ ನಿಲುಗಡೆಗೆ ಬಹುಮಹಡಿ ಕಟ್ಟಡ ನಿರ್ಮಾಣ ಒಳ್ಳೆಯ ಪ್ರಯತ್ನ. ಈ ಕಟ್ಟಡವನ್ನು ಸ್ಮಾರ್ಟ್ ಸಿಟಿಯಿಂದ ನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗುತ್ತದೆ. ಆದರೆ ಇದರ ಸಂಪೂರ್ಣ ನಿರ್ವಹಣೆಯನ್ನು ನಗರ ಪಾಲಿಕೆ ಮಾಡುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆ ಸಾಧ್ಯತೆಗಳೂ ತೀರಾ ವಿರಳ. ಅದಕ್ಕೆ ಪೂರಕ ವ್ಯವಸ್ಥೆ ಪಾಲಿಕೆಯಲ್ಲಿಲ್ಲ. ಹೀಗಾಗಿ ಕಟ್ಟಡವನ್ನು ಬೇರೆಯವರಿಗೆ ಗುತ್ತಿಗೆಗೆ ನೀಡಿ ಬೊಕ್ಕಸ ತುಂಬಿಸಿಕೊಳ್ಳಲು ಪಾಲಿಕೆ ಸೀಮಿತವಾಗುತ್ತದೆ. ಕಟ್ಟಡ ಗುತ್ತಿಗೆ ಪಡೆದ ಸಂಸ್ಥೆ ವಾಹನ ನಿಲುಗಡೆಗೆ ಎಷ್ಟು ಶುಲ್ಕ ವಿಧಿಸಲಿದೆ ಎಂಬುದೂ ಮುಖ್ಯವಾಗುತ್ತದೆ. ಗಂಟೆಗಳ ಲೆಕ್ಕದಲ್ಲಿ ಇಲ್ಲವೇ ದುಬಾರಿ ಶುಲ್ಕ ವಿಧಿಸಿದರೆ ಅದಕ್ಕೆ ಜನರಿಗೆ ಆಶಾದಾಯಕ ಪ್ರತಿಕ್ರಿಯೆ ಸಿಗುವುದು ಕಷ್ಟ. ಮತ್ತೆ ರಸ್ತೆ ಪಕ್ಕದಲ್ಲೇ ವಾಹನ ನಿಲುಗಡೆ ಹೆಚ್ಚುತ್ತದೆ. ಇದರಿಂದ ಮೂಲ ಆಶಯಕ್ಕೆ ಕುಂದು ಉಂಟಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts