More

    ಶೀಘ್ರ ಮನೆ ನಿರ್ಮಾಣ ಆರಂಭ: ಫಲಾನುಭವಿಗಳ ಆಯ್ಕೆ, ಗುತ್ತಿಗೆದಾರರಿಗೆ 135 ಕೋಟಿ ರೂ. ಪಾವತಿ

    ಬೆಂಗಳೂರು: ಮಹಾನಗರದ ಬಡ ಜನರಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಹೊಸದಾಗಿ ರೂಪಿಸಲಾಗಿದ್ದ ‘ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ’ಯ ಮೊದಲನೇ ಹಂತದ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ತಿಂಗಳೊಳಗೆ ಮನೆ ನಿರ್ಮಾಣ ಕಾರ್ಯ ಆರಂಭವಾಗಲಿದೆ.

    ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯನ್ನು 2017ರಲ್ಲಿ ಘೋಷಿಸಲಾಗಿತ್ತಾದರೂ ಕೆಲ ಹೊಸ ಕ್ರಮಗಳನ್ನು ಅಳವಡಿಸುವ ನಿಟ್ಟಿನಲ್ಲಿ ಕಾರ್ಯರೂಪಕ್ಕೆ ಬರಲು ಹೆಚ್ಚು ಸಮಯ ತೆಗೆದುಕೊಂಡಿದೆ. ಕೊನೆಗೂ ಈ ಯೋಜನೆಯಡಿ ವಸತಿ ನಿರ್ವಿುಸಲು ಸರ್ಕಾರ ಮುಂದಾಗಿದ್ದು, ಮುಂದಿನ ತಿಂಗಳೊಗಳಾಗಿ ವಸತಿ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ರಾಮ್​ಪ್ರಸಾಥ್ ಮನೋಹರ್ ತಿಳಿಸಿದ್ದಾರೆ.

    ಮರು ಟೆಂಡರ್ ಆಹ್ವಾನ: ಗುತ್ತಿಗೆದಾರರು ಮನೆಗಳ ನಿರ್ವಣಕ್ಕಾಗಿ ಲೇಔಟ್ ನಕ್ಷೆಗಳಿಗೆ ಅನುಮೋದನೆ ದೊರಕಿಸಿಕೊಡಲು ನಿಗಮಕ್ಕೆ ಸಲ್ಲಿಸಿದ್ದು, ಇಲ್ಲಿವರೆಗೆ 15 ಲೇಔಟ್ ನಕ್ಷೆಗಳನ್ನು ಅನುಮೋದನೆಗಾಗಿ ಸಂಬಂಧಿಸಿದ ಯೋಜನಾ ಪ್ರಾಧಿಕಾರಗಳಿಗೆ ಸಲ್ಲಿಸಲಾಗಿದೆ. ಪ್ಯಾಕೇಜ್ 1,2,3,4 ಮತ್ತು 5ರ ಕಾಮಗಾರಿಗಳ ಗುತ್ತಿಗೆದಾರರಿಗೆ ಮುಂಗಡವಾಗಿ 135.88 ಕೋಟಿ ರೂ. ಪಾವತಿಸಲಾಗಿದೆ. ಪ್ಯಾಕೇಜ್ 6,8 ಮತ್ತು 9ರಲ್ಲಿ ಬರುವ 17,745 ಬಹುಮಹಡಿ ಮನೆಗಳ ನಿರ್ಮಾಣ ಕಾಮಗಾರಿಗಳಿಗೆ ಮರು ಟೆಂಡರ್ ಆಹ್ವಾನಿಸಿ ಟೆಂಡರ್​ಗಳನ್ನು ತೆರೆದಿದ್ದು, ಬಿಡ್​ಗಳ ಮೌಲ್ಯಮಾಪನ ಪ್ರಗತಿಯಲ್ಲಿದೆ.

    48,647 ಫಲಾನುಭವಿಗಳಿಗೆ ವಸತಿ ಘಟಕ ಹಂಚಿಕೆ: ಪಾರದರ್ಶಕವಾಗಿ ಆನ್​ಲೈನ್ ಮುಖೇನ ಮೊದಲ ಹಂತದಲ್ಲಿ 49,615 ಫಲಾನುಭವಿಗಳು ಮನೆಗಳ ಬೇಡಿಕೆ ಗಾಗಿ ನಿಗಮಕ್ಕೆ ಆನ್​ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ್ದು, ಈ ಪೈಕಿ ಇಲ್ಲಿವರೆಗೆ 48,647 ಫಲಾನುಭವಿಗಳಿಗೆ ವಸತಿ ಘಟಕಗಳನ್ನು ಈಗಾಗಲೇ ಹಂಚಿಕೆ ಮಾಡಿ ಆಯ್ಕೆ ಪತ್ರಗಳನ್ನು ಆನ್​ಲೈನ್ ಮುಖಾಂತರ ನೀಡಲಾಗಿದೆ. ಎರಡನೇ ಹಂತದಲ್ಲಿ ಇಲ್ಲಿವರೆಗೆ 9,411 ಫಲಾನುಭವಿಗಳು ಮನೆಗಳ ಬೇಡಿಕೆಗಾಗಿ ನಿಗಮಕ್ಕೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ.

    ಗುತ್ತಿಗೆ ವಹಿಸಿದ ಪ್ರತಿ ಮನೆಯ ಘಟಕ ವೆಚ್ಚ ಮೂಲಸೌಲಭ್ಯಗಳು ಸೇರಿ 10.60 ಲಕ್ಷ ರೂ. ಆಗಲಿದೆ. ಪಿಎಂಎವೈ ಯೋಜನೆಯಡಿ 1.50 ಲಕ್ಷ ರೂ., ಡಾ. ಬಿ.ಆರ್. ಅಂಬೇಡ್ಕರ್, ವಾಜಪೇಯಿ ವಸತಿ ಯೋಜನೆಯಡಿ ರಾಜ್ಯ ಸರ್ಕಾರದಿಂದ 2 ಲಕ್ಷ ರೂ. ಅನುದಾನ ಸಿಗಲಿದೆ. 7.90 ಲಕ್ಷ ರೂ.ಗಳನ್ನು ಫಲಾನುಭವಿಗಳು ಭರಿಸಬೇಕಿದೆ.

    ಮೂಲಸೌಕರ್ಯಗಳಾದ ರಸ್ತೆ, ಚರಂಡಿ, ಕೊಳವೆಬಾವಿ, ಪಂಪ್ ರೂಂ, ಮಳೆನೀರು ಕೊಯ್ಲು, ಎಸ್​ಟಿಪಿ, ಜಿಎಲ್​ಎಸ್​ಆರ್, ಒಎಚ್​ಟಿ, ಸಿಎ ಸೈಟ್ ಕಾಯ್ದಿರಿಸುವಿಕೆ, ನೀರು ಸರಬರಾಜು ಮತ್ತು ಒಳ ಚರಂಡಿ ವ್ಯವಸ್ಥೆ, ಭದ್ರತಾ ಸಿಬ್ಬಂದಿ ಕೊಠಡಿ ಹಾಗೂ ಸೌರ ವಿದ್ಯುತ್ ದೀಪಗಳ ಸೌಲಭ್ಯಗಳು ಇರಲಿವೆ.

    ಏನಿದು ಯೋಜನೆ?: ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಮೀನಿನಲ್ಲಿ ರಾಜ್ಯ ಸರ್ಕಾರದ ಯೋಜನೆಗಳಾದ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ, ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಕೇಂದ್ರ ಸರ್ಕಾರದ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅನುದಾನ ಮೊತ್ತಗಳನ್ನು ಸಂಯೋಜಿಸಿಕೊಳ್ಳಲಾಗುತ್ತದೆ. ಯೋಜನೆಯಡಿ ಉಳಿಕೆ ಜಮೀನನ್ನು ಮಾರಾಟ ಮಾಡಿ, ಮಾರಾಟದಿಂದ ಬರುವ ಮೊತ್ತದಿಂದ ಬೆಂಗಳೂರು ನಗರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗಾಗಿ ವಸತಿ ಕಲ್ಪಿಸುವ ಉದ್ದೇಶದಿಂದ ‘ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ ಜಾರಿಗೆ ತರಲಾಗಿದೆ. ಗುತ್ತಿಗೆದಾರರು ವಸತಿ ಸಂಕೀರ್ಣವನ್ನು 2 ವರ್ಷ ತಮ್ಮ ವೆಚ್ಚದಲ್ಲಿ ಹಾಗೂ 3 ವರ್ಷಗಳವರೆಗೆ ಫಲಾನುಭವಿಗಳ ವೆಚ್ಚದಲ್ಲಿ ನಿರ್ವಹಿಸಲಿದ್ದಾರೆ. ಕಟ್ಟಡ ಸದೃಢತೆಯನ್ನು ಪರಿಶೀಲಿಸಲು ತಾಂತ್ರಿಕ ವಿದ್ಯಾಸಂಸ್ಥೆಗಳಾದ ಐಐಎಸ್​ಸಿ ಬೆಂಗಳೂರು, ಎನ್​ಐಟಿ ಸುರತ್ಕಲ್, ಯುವಿಸಿಇ ಬೆಂಗಳೂರು, ಬಿಡಿಟಿ ದಾವಣಗೆರೆ, ವಿಟಿಯು ಬೆಳಗಾವಿಯನ್ನು ಮೂರನೇ ಸಂಸ್ಥೆಯಾಗಿ ನೇಮಿಸಲಾಗಿದೆ.

    ಅರ್ಹತೆಗಳೇನು ?: ಫಲಾನುಭವಿಯಾಗಲು ಇಚ್ಚಿಸುವವರು ಬೆಂಗಳೂರಿನಲ್ಲಿ ಕನಿಷ್ಠ 5 ವರ್ಷ ನೆಲೆಸಿರಬೇಕು. ವಾರ್ಷಿಕ ಆದಾಯ 3 ಲಕ್ಷ ರೂ.ಗಿಂತ ಕಡಿಮೆ ಇರಬೇಕು. ಅಲ್ಲದೆ, ಆಧಾರ್ ಕಾರ್ಡ್ ಸೇರಿ ಕೆಲ ದಾಖಲೆಗಳನ್ನು ಹೊಂದಿರಬೇಕು. ಮುಖ್ಯವಾಗಿ ಗಾರ್ವೆಂಟ್ಸ್ ಕೆಲಸಗಾರರು, ಆಟೋ ಚಾಲಕರು, ಬೀಡಿ ಕಟ್ಟುವವರು, ಹಾಲು ಹಾಕುವವರು, ಪೇಪರ್ ಬಾಯ್, ತರಕಾರಿ ಮಾರುವವರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

    ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯು ಬಡ ವರ್ಗದ ಜನರಿಗೆ ನೆರವಾಗಲಿದೆ. ಕೆಲ ದಿನಗಳ ಹಿಂದೆ ವಸತಿ ಸಚಿವರೊಂದಿಗೆ ಈ ಬಗ್ಗೆ ಸಭೆ ನಡೆಸಿ ಆದಷ್ಟು ಬೇಗ ವಸತಿ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಬಗ್ಗೆ ರ್ಚಚಿಸಲಾಗಿದೆ.

    | ಡಾ.ವಿ.ರಾಮ್​ಪ್ರಸಾಥ್ ಮನೋಹರ್

    ವ್ಯವಸ್ಥಾಪಕ ನಿರ್ದೇಶಕ (ವಸತಿ ಇಲಾಖೆ )

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts