More

    ಕಿಂಡಿ ಅಣೆಕಟ್ಟು ಶೀಘ್ರ ಪೂರ್ಣ, ಮೂಲರಪಟ್ಣ-ಮುತ್ತೂರು ಭಾಗದ ಕೃಷಿ, ಅಂತರ್ಜಲ ವೃದ್ಧಿ

    ಧನಂಜಯ ಗುರುಪುರ

    ಬಂಟ್ವಾಳ ತಾಲೂಕಿನ ಅರಳ ಗ್ರಾಮ ಹಾಗೂ ಮಂಗಳೂರು ತಾಲೂಕಿನ ಮುತ್ತೂರು ಗ್ರಾಮ ವ್ಯಾಪ್ತಿಯ ಮೂಲರಪಟ್ಣದಲ್ಲಿ ಕೃಷಿ ಅಗತ್ಯ ಮತ್ತು ಅಂತರ್ಜಲ ವೃದ್ಧಿ ಯೋಜನೆಯಡಿ ಫಲ್ಗುಣಿ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತಿದೆ. ಇದು ರಾಜ್ಯ ಸರ್ಕಾರದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ 2017-18ನೇ ಸಾಲಿನಲ್ಲಿ ಅನುಮೋದನೆಗೊಂಡ ಯೋಜನೆಯಾಗಿದ್ದು, ಮಂಗಳೂರು ವಿಭಾಗದಿಂದ ಕಾಮಗಾರಿ ನಡೆಯುತ್ತಿದೆ.

    ಮೂಲರಪಟ್ಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಸೇತುವೆ ಹಾಗೂ ಹಾಲಿ ತೂಗುಸೇತುವೆಗೆ ಅನತಿ ದೂರದಲ್ಲಿ 4.85 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ ನಡೆಯುತ್ತಿದೆ. ಕಾವೂರಿನ ಮುಗ್ರೋಡಿ ಕನ್‌ಸ್ಟ್ರಕ್ಷನ್ ಕಂಪನಿ ಗುತ್ತಿಗೆ ಪಡೆದಿದ್ದು, ಯೋಜನೆ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳುತ್ತಿರುವ ನದಿ ಭಾಗ 155.90 ಮೀಟರ್ ಅಗಲವಾಗಿದೆ. ಬಂಟ್ವಾಳ ಜಂಕ್ಷನ್‌ನಿಂದ 16 ಕಿ.ಮೀ. ಅಂತರದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಯೋಜನೆಯಿಂದ ಬಂಟ್ವಾಳ ಮತ್ತು ಮಂಗಳೂರು ತಾಲೂಕಿಗೆ ಸೇರಿದ ಕೆಲವು ಗ್ರಾಮಗಳ ಕೃಷಿ ಭೂಮಿಗೆ ನೀರು ಲಭ್ಯವಾಗಲಿದೆ. ಜತೆಗೆ, ಪ್ರದೇಶದಲ್ಲಿ ಅಂತರ್ಜಲ ವೃದ್ಧಿಗೊಂಡು ಬೇಸಗೆಯಲ್ಲೂ ಕೃಷಿಗೆ ನೀರು ಲಭಿಸಲಿದೆ ಮತ್ತು ಕೃಷಿಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ.

    ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಕೃಷಿಕರಿಗೆ ನೀರು ಲಭ್ಯವಾದರೂ, ಮಳೆಗಾಲದ ಪ್ರವಾಹ ಸಂದರ್ಭ ಇಲ್ಲಿನ ತಗ್ಗು ಪ್ರದೇಶಗಳು ಜಲಾವೃತಗೊಳ್ಳಲಿದೆ. ಕೃಷಿಗೆ ನಷ್ಟ-ಕಷ್ಟಗಳ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಸೂಕ್ತ ಕಾಲದಲ್ಲಿ ಕಿಂಡಿಗಳನ್ನು ತೆರೆಯವಂಥ ವ್ಯವಸ್ಥೆ ಅತ್ಯವಶ್ಯಕ ಎಂದು ಸ್ಥಳೀಯ ಕೃಷಿಕರೊಬ್ಬರು ಹೇಳುತ್ತಾರೆ.

    ಅಣೆಕಟ್ಟು ರಚನೆ: ಅಣೆಕಟ್ಟಿನ ಒಟ್ಟು ಉದ್ದ 155.90 ಮೀಟರ್, ಎಚ್‌ಎಫ್‌ಎಲ್ ಮಟ್ಟ 104 ಮೀ, ಎಫ್‌ಆರ್‌ಎಲ್(ನೀರು ನಿಲ್ಲುವ ಮಟ್ಟ) 101.10 ಮೀ, ಬೆಡ್ ಲೆವೆಲ್ 99 ಮೀ, ಅಬಟ್‌ಮೆಂಟ್ ಎತ್ತರ 6.70 ಮೀ, ನೀರು ಶೇಖರಣಾ ಎತ್ತರ 3.10 ಮೀ, 31 ಪಿಯರ್‌ಗಳು, 32 ಕಿಂಡಿಗಳು, ವರ್ಟಿಕಲ್ ಲಿಫ್ಟ್ ಗೇಟ್(ಗೇಟಿನ ಗಾತ್ರ 4*2.10 ಮೀ), ಸೇತುವೆಯ ಅಗಲ 3 ಮೀ ಆಗಿರುತ್ತದೆ.

    ಮೂಲರಪಟ್ಣ ಕಿಂಡಿ ಅಣೆಕಟ್ಟಿನ ಕಾಮಗಾರಿ 2017ರಲ್ಲಿ ಆರಂಭಗೊಂಡಿದ್ದು, ಮುಂದಿನ 11 ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಪ್ರಕೃತಿ ವಿಕೋಪ ಹಾಗೂ ಕರೊನಾ ಮಹಾಮಾರಿಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಈ ವರ್ಷದ ಮೇಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇದು ನದಿ ದಂಡೆಯಲ್ಲಿರುವ ಕೃಷಿಕರ ಕೃಷಿ ಹಾಗೂ ಅಂತರ್ಜಲ ವೃದ್ಧಿ ದೃಷ್ಟಿಕೋನದ ಯೋಜನೆಯಾಗಿದೆ. ಮೇಲ್ಗಡೆ ಕಾಂಕ್ರೀಟ್ ಸ್ಲ್ಯಾಬ್ ಇಲ್ಲದಿದ್ದರೂ ಒಂದು ಕಡೆಯಿಂದ ಮತ್ತೊಂದು ಪಾರ್ಶ್ವಕ್ಕೆ ನಡೆದುಕೊಂಡು ಹೋಗಲು ವ್ಯವಸ್ಥೆ ಕಲ್ಪಿಸಲಾಗುತ್ತದೆ.

    ಶಿವ ಪ್ರಸನ್ನ
    ಸಣ್ಣ ನೀರಾವರಿ ಮಂಗಳೂರು ವಿಭಾಗದ ಸಹಾಯಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts