More

    ಉಚಿತವಾಗಿ ನೀಡಿದ್ರೂ ಕೇಳೋರಿಲ್ಲ, ಸಂಕಷ್ಟದಲ್ಲಿ ಅನ್ನದಾತ, 500 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದ ತರಕಾರಿ ಬೆಳೆ ನಾಶ

    ಎ.ಅಪ್ಪಾಜಿಗೌಡ, ಮುಳಬಾಗಿಲು
    ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆ ಮತ್ತು ಸಾರಿಗೆ ವ್ಯವಸ್ಥೆ ಇಲ್ಲದೆ ಮುಳಬಾಗಿಲು ತಾಲೂಕಿನ ರೈತರು ಸಾವಿರಾರು ಎಕರೆಯಲ್ಲಿ ಬೆಳೆದಿರುವ ಹಣ್ಣು, ತರಕಾರಿ ತೋಟಗಳಲ್ಲೇ ಕೊಳೆಯುತ್ತಿದ್ದು, ಉಚಿತವಾಗಿ ಯಾರಾದರು ತೋಟಗಳಲ್ಲೇ ಬಿಡಿಸಿಕೊಂಡು ಹೋಗುವವರಿಗೆ ಅವಕಾಶ ಕಲ್ಪಿಸಿದ್ದಾರೆ.

    ಟೊಮ್ಯಾಟೊ, ಕೋಸು, ಬೀನ್ಸ್, ಕ್ಯಾರೆಟ್ ಸೇರಿ ತರಕಾರಿಗಳನ್ನು ತೋಟದಿಂದ ಮಾರ್ಕೆಟ್‌ಗೆ ಸಾಗಿಸುವ ವೆಚ್ಚವೂ ಸಿಗುತ್ತಿಲ್ಲ. ಒಂದಷ್ಟು ಗುಣಮಟ್ಟದ ತರಕಾರಿಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತವೆ. ಉಳಿದವು ಹಾಗೆಯೇ ಉಳಿಯುತ್ತಿದ್ದು, ಮತ್ತೊಮ್ಮೆ ವಾಪಸ್ ತರುವ ಬದಲು ಅಲ್ಲೇ ಬಿಟ್ಟು ಬರಬೇಕಾದ ಸ್ಥಿತಿ ರೈತರದ್ದಾಗಿದೆ.

    ಸಣ್ಣ ಪುಟ್ಟ ಪ್ರಮಾಣದಲ್ಲಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಮಾರಾಟವಾಗದಿರುವುದು ರೈತರಲ್ಲಿ ನಿರಾಸೆ ಮೂಡಿಸಿದೆ. ದೂರದ ಪ್ರದೇಶಗಳಿಗೆ ಇನ್ನೂ ಸರಿಯಾದ ಪ್ರಮಾಣದಲ್ಲಿ ಹಣ್ಣು, ತರಕಾರಿ ಪೂರೈಕೆಯಾಗದಿರುವುದು ಮತ್ತು ದೂರದ ಪ್ರದೇಶಗಳಿಂದ ವ್ಯಾಪಾರಿಗಳು ಆಗಮಿಸದಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ.

    ಟೊಮ್ಯಾಟೊ ಹೊರತುಪಡಿಸಿ ಕೋಸು, ಬೀನ್ಸ್ ಮತ್ತಿತರ ತರಕಾರಿ ಬೆಳೆಗಳನ್ನು ರೈತರು ಟ್ರ್ಯಾಕ್ಟರ್ ಕಟರ್ ಮೂಲಕ ಉಳುಮೆ ಮಾಡಿರುವುದು ತಾಲೂಕಿನಲ್ಲಿ 500 ಎಕರೆಗಿಂತಲೂ ಹೆಚ್ಚಾಗಿದೆ.

    ಜನಪ್ರತಿನಿಧಿಗಳ ನಡೆಗೆ ಬೇಸರ: ರೈತರಿಗೆ ಸಹಾಯ ಮಾಡುವ ನೆಪದಲ್ಲಿ ಒಂದಷ್ಟು ರಾಜಕಾರಣಿಗಳು, ಜನಪ್ರತಿನಿಧಿಗಳು ಒಂದೆರಡು ದಿನ ಕೆಲ ರೈತರಿಂದ ತೋಟದಲ್ಲೇ ಖರೀದಿಸಿ ನಂತರ ಈ ಕಡೆ ಮುಖ ಮಾಡದಿರುವುದು ರೈತರಲ್ಲಿ ಬೇಸರ ಮೂಡಿಸಿದೆ. ಕೆಲವರು ಪ್ರಚಾರಕ್ಕೋಸ್ಕರ ರೈತರಿಂದ ಖರೀದಿಸಿದ್ದೇವೆ ಎಂಬ ಸಂದೇಶ ಬಿತ್ತರಿಸಿದ್ದು ಬಿಟ್ಟರೆ ಕನಿಷ್ಠ ಒಬ್ಬ ರೈತನಿಗೂ ಸಹಾಯವಾಗದಿದ್ದದ್ದು ವಿಪರ‌್ಯಾಸವಾಗಿದೆ.

    ಅವಕಾಶ ಇದ್ದರು ಖರೀದಿದಾರಿಲ್ಲ: ಸರ್ಕಾರ ಎಪಿಎಂಸಿಗಳಿಗೆ ಮತ್ತು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬೆಳೆ ಸಾಗಿಸಲು ಅವಕಾಶ ನೀಡಿದೆ. ಆದರೆ ಖರೀದಿದಾರರು ಬೆಳೆ ಖರೀದಿಸಲು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸಲು ಸಾಧ್ಯವಾಗದೆ ಇರುವುದರಿಂದ ಸ್ಥಳೀಯ ಎಪಿಎಂಸಿಗಳು ತಾಲೂಕಿಗೆ ಅಗುವಷ್ಟು ವಸ್ತು ಖರೀದಿಸುತ್ತಿರುವುದರಿಂದ ಬಹುತೇಕ ಬೆಳೆಗಳು ಮಾರಾಟವಾಗದೆ ಹಾಗೇ ತೋಟದಲ್ಲಿ ಉಳಿದಿವೆ.

    ಲಾಕ್‌ಡೌನ್ ಆಗಿದ್ದರಿಂದ ತೀವ್ರ ನಷ್ಟ ಉಂಟಾಗಿದೆ. ಈಗ ಇರುವ ಬೆಳೆಗಳು ತೋಟದಲ್ಲೇ ಕೊಳೆಯುತ್ತಿವೆ. ಮಾರುಕಟ್ಟೆಗೆ ಹೋದರೆ ವಾಹನದ ಬಾಡಿಗೆಯೂ ಸಿಗುವುದಿಲ್ಲ.
    ಎಂ.ಕೆ.ಗೋವಿಂದಯ್ಯ, ರೈತ, ಮುರಕನಕುಂಟೆ, ಮುಳಬಾಗಿಲು

    ರೈತರಿಂದ ಹಣ್ಣು, ತರಕಾರಿ ಖರೀದಿಸಿ ಜನರಿಗೆ ಹಂಚುವ ರಾಜಕಾರಣಿಗಳು ತೋಟದ ಸಲನ್ನೇ ಖರೀದಿಸಿ ಉಚಿತವಾಗಿ ಹಂಚಬೇಕು. ರೈತರೂ ಉಚಿತವಾಗಿ ನೀಡಲು ಸಿದ್ಧವಿದ್ದೇವೆ. ಅದನ್ನು ಕಿತ್ತು ತುಂಬಿಸುವ ಕೂಲಿ ನೀಡಿದರೆ ಸಾಕು.
    ಎಸ್.ವಿ.ಭಾಸ್ಕರ್, ಹನುಮಂತಪುರ ರೈತ

    ಸರ್ಕಾರದ ಮಾರ್ಗಸೂಚನೆಯಂತೆ ಹೂವು, ಹಣ್ಣು ತರಕಾರಿಗಳನ್ನು ಕೆಎಂಎಫ್ ಸಹಯೋಗದಲ್ಲಿ ನಂದಿನಿ ಹಾಲಿನ ಮಾರಾಟ ಕೇಂದ್ರಗಳ ಮುಂಭಾಗ ಬೆಳಗ್ಗೆ 6ರಿಂದ ರಾತ್ರಿ 8ರವರೆಗೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ 127, ಮುಳಬಾಗಿಲಿನ 12 ಕಡೆ ನಂದಿನಿ ಮಳಿಗೆಗಳಲ್ಲಿ ಮಾರಾಟ ಮಾಡಬಹುದು. ಇದಲ್ಲದೆ ರೈತರಿಗೆ ಕಂಪನಿಗಳ ಜತೆ ಲಿಂಕ್ ಕೊಡಿಸಿ ಮಾರಾಟ ಮಾಡಲು ಪ್ರಯತ್ನ ಆರಂಭಿಸಲಾಗಿದೆ.
    ಎಸ್. ಶಿವಕುಮಾರಿ, ಹಿರಿಯ ಸಹಾಯಕ ನಿರ್ದೇಶಕಿ, ತೋಟಗಾರಿಕಾ ಇಲಾಖೆ, ಮುಳಬಾಗಿಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts