More

    ಭಾವೈಕ್ಯ ಮೆರೆದ ಮುಗಳಿ ಗ್ರಾಮಸ್ಥರು

    ಶಿಗ್ಗಾಂವಿ: ದೇಗುಲ ಪ್ರವೇಶಕ್ಕೆ ಸಂಬಂಧಿಸಿದಂತೆ ಸಮುದಾಯಗಳ ಮಧ್ಯೆ ಸಂಘರ್ಷ ನಡೆಯುತ್ತಿರುವ ಸಂದರ್ಭದಲ್ಲಿ ಮುಗಳಿ ಗ್ರಾಮಸ್ಥರು ಜಾತಿ ಮೀರಿ ಸರ್ವ ಸಮುದಾಯದವರು ಸೇರಿ ಭಕ್ತಿ ಭಾವ ಮೆರೆದ ಘಟನೆ ಮಂಗಳವಾರ ಜರುಗಿತು.

    ಗ್ರಾಮದಲ್ಲಿ ಕರಿಯಮ್ಮ ದೇವಿ ಗದ್ದುಗೆಗೊಳಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕುನ್ನೂರ ಗ್ರಾಮದಿಂದ ಪೂಜಾ ವಿಧಿ-ವಿಧಾನ ಪೂರೈಸಿಕೊಂಡು ಪಲ್ಲಕ್ಕಿ ಉತ್ಸವದೊಂದಿಗೆ ಮಡ್ಲಿ, ಗೊಟಗೋಡಿ, ವನಹಳ್ಳಿ ಮಾರ್ಗವಾಗಿ ಆಗಮಿಸಿ ದೇವಿ ಪುರ ಪ್ರವೇಶ ಮಾಡಿದಳು. ಈ ವೇಳೆ ಗ್ರಾಮಸ್ಥರು ತಮ್ಮ ಮನೆಯಂಗಳ, ಓಣಿ ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಶೃಂಗರಿಸಿದ್ದರು. ಡೊಳ್ಳು, ಭಜನೆ, ಕೋಲಾಟ ಮತ್ತು ಗೊಂಬೆ ಕುಣಿತ ಸಮೇತ ಜರುಗಿದ ಮೆರವಣಿಗೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಭಕ್ತಿ ಮೆರೆದರು.

    ದಲಿತ ಪೂಜಾರಿ ನಿಂಗಪ್ಪ ನಡುವಿನಮನಿ ಪುರೋಹಿತ್ಯದಲ್ಲಿ ನಡೆದ ಪೂಜೆಯಲ್ಲಿ ಸರ್ವ ಸಮುದಾಯದವರು ದೇವಿಗೆ ತಮ್ಮ ಭಕ್ತಿ ಸಮರ್ಪಿಸಿದರು. ಬಳಿಕ ನಡೆದ ಅನ್ನ ಸಂತರ್ಪಣೆ ಸಂದರ್ಭದಲ್ಲಿ ಜಾತಿ ಭೇದ ಮರೆತು ಪ್ರಸಾದ ಸವಿದರು. ಅಡುಗೆ ಮಾಡಿ, ಬಡಿಸಿದವರು ದಲಿತರು ಎಂಬುದು ವೈಶಿಷ್ಟೃವಾಗಿತ್ತು. ಈ ಮೂಲಕ ಜಾತಿ ವೈಷಮ್ಯದ ಈ ದಿನಗಳಲ್ಲಿ ಮುಗಳಿ ಗ್ರಾಮಸ್ಥರು ಭಾವೈಕ್ಯ ಮೆರೆದು ಮಾದರಿಯಾದರು.

    ಧಾರ್ಮಿಕ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರಿ ಮಲ್ಲಿಕಾರ್ಜುನ ಜಾನಪದ ಕಲಾ ತಂಡದಿಂದ ಜೋಗತಿ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

    ಕರಿಯಪ್ಪ ಕಡೇಮನಿ, ಕರಿಯಪ್ಪ ಮುಂದಿನಮನಿ, ಅಡಿವೆಪ್ಪ ದೊಡ್ಡಮನಿ, ಯಲ್ಲಪ್ಪ ದಾನಣ್ಣವರ, ನಿಂಗಪ್ಪ ದುಂಡಪ್ಪನವರ, ರಮೇಶ ಅರಳಿಕಟ್ಟಿ, ಮಹಾದೇವಪ್ಪ ತಳವಾರ, ನವೀನ ರಾಮಗೇರಿ, ಶಂಕರ ಗೊಬ್ಬಿ, ಚಂದ್ರು ಮುಂದಿನಮನಿ, ಕರಿಯಪ್ಪ ಕಲ್ಲಮ್ಮನವರ, ಕಂಟೆಪ್ಪ ನಡುವಿನಮನಿ, ಕಂಟೆಪ್ಪ ಮಡ್ಲಿ, ಹನುಮಂತಪ್ಪ ನಡುವಿನಮನಿ, ಪಕ್ಷಪ್ಪ ದಾನಣ್ಣವರ. ಭೀಮಪ್ಪ ಗುಡಗೇರಿ, ಮನೋಜ ಕಡೇಮನಿ ಸೇರಿದಂತೆ ಗ್ರಾಮದ ಪ್ರಮುಖರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts