ಮುಧೋಳ: ಡಿಸಿಎಂ ಗೋವಿಂದ ಕಾರಜೋಳ ಮುಧೋಳ ಮೀಸಲು ಮತ ಕ್ಷೇತ್ರ ವ್ಯಾಪ್ತಿಯ ಲೋಕಾಪುರ ಭಾಗದಲ್ಲಿ 454.95 ಲಕ್ಷ ರೂ., ಹಾಗೂ ಮುಧೋಳ ಭಾಗದಲ್ಲಿ 1630.36 ಲಕ್ಷ ರೂ. ಸೇರಿ ಒಟ್ಟು 20.86 ಕೋಟಿ ರೂ. ವೆಚ್ಚದಲ್ಲಿ ವಿವಿಧ ಇಲಾಖೆಯಡಿಯ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಶಂಕು ಸ್ಥಾಪನೆ ಮತ್ತು ಅಡಿಗಲ್ಲು ಕಾರ್ಯಕ್ರಮಕ್ಕೆ ನ. 1ರಂದು ಮುಧೋಳ ಹಾಗೂ ಲೋಕಾಪುರದಲ್ಲಿ ಚಾಲನೆ ನೀಡುವರು ಎಂದು ತಹಸೀಲ್ದಾರ್ ಸಂಗಮೇಶ ಬಾಡಗಿ ತಿಳಿಸಿದರು.
ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಲೋಕಾಪುರದ ಎಪಿಎಂಸಿಯಲ್ಲಿ ಮಧ್ಯಾಹ್ನ 1 ಗಂಟೆಗೆ ಹಾಗೂ ಮುಧೋಳದ ದಾನಮ್ಮದೇವಿ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 3 ಗಂಟೆಗೆ ಪರಸ್ಪರ ಅಂತರ ಹಾಗೂ ಕರೊನಾ ಮಾರ್ಗಸೂಚಿಯಂತೆ ಭೂಮಿಪೂಜೆ ಕಾರ್ಯಕ್ರಮ ನಡೆಯಲಿದೆ ಎಂದು ನಗರದ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2019-20ನೇ ಸಾಲಿನ ಲೆಕ್ಕ ಶೀರ್ಷಿಕೆ 5054 ರಂತೆ ಬಾರಿ ಮಳೆಯಿಂದ ಹಾಳಾದ ರಸ್ತೆಗಳಿಗೆ 1000 ಲಕ್ಷ ರೂ. ವೆಚ್ಚದಲ್ಲಿ ಶಿರೋಳ, ಮಹಾಲಿಂಗಪುರ, ಮೆಳ್ಳಿಗೇರಿ, ಸೋರಗಾಂವಿ, ಮಂಟೂರ, ಕುಳಲಿ, ಮಳಲಿ, ಬಿದರಿ, ಅಂತಾಪುರ, ಮಾಚಕನೂರ, ಬರಗಿ, ಉತ್ತೂರ, ನಂದಗಾಂವ, ಅಕ್ಕಿಮರಡಿ, ಮಾಲಾಪುರ, ಆಲಗುಂಡಿ, ಮಿರ್ಜಿ ಸೇರಿ ವಿವಿಧೆಡೆ ಭೂಮಿಪೂಜೆ ನೆರವೇರಿಸುವರು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಂ.ಕೆ. ಕೋರಡ್ಡಿ, ತಾ.ಪಂ. ಇಒ ಕಿರಣ ಘೋರ್ಪಡೆ ಮಾತನಾಡಿದರು.
ಕರೊನಾ ನಿಯಮ ಪಾಲಿಸಿ
ನ.1 ರಂದು ಮುಧೋಳ ನಗರದ ದಾನಮ್ಮದೇವಿ ಕಲ್ಯಾಣ ಮಂಟಪ ಹಾಗೂ ಲೋಕಾಪುರದ ಎಪಿಎಂಸಿ ಆವರಣದಲ್ಲಿ ಜರುಗುವ ಕಾರ್ಯಕ್ರಮಕ್ಕೆ ಎಲ್ಲರೂ ಸರ್ಕಾರದ ಮಾರ್ಗಸೂಚಿಯಂತೆ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಪಾಡಿಕೊಂಡು ಪಾಲ್ಗೊಳ್ಳಬೇಕು ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಡಾ. ರವಿ ನಂದಗಾಂವ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತ ತುಳಸಿಗೇರಿ, ಪ್ರಧಾನ ಕಾರ್ಯದರ್ಶಿ ಕುಮಾರ ಹುಲಕುಂದ ತಿಳಿಸಿದ್ದಾರೆ.