More

    ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ವಿರೋಧ

    ಮುದ್ದೇಬಿಹಾಳ: ರಾಜ್ಯ ಸರ್ಕಾರ ಎಲ್ಲ ಶಾಲೆ ಮಕ್ಕಳಿಗೆ ಮೊಟ್ಟೆ ವಿತರಿಸುತ್ತಿರುವುದನ್ನು ತಕ್ಷಣ ನಿಲ್ಲಿಸಿ ಸಿರಿಧಾನ್ಯ ಸೇರಿದಂತೆ ಹಣ್ಣು-ಹಂಪಲ ನೀಡಬೇಕೆಂದು ಆಗ್ರಹಿಸಿ ಪಟ್ಟಣದ ಪದ್ಮಾವತಿ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ದಿಗಂಬರ ಜೈನ್ ಸಮಾಜ ವತಿಯಿಂದ ಮಂಗಳವಾರ ತಹಸೀಲ್ದಾರ್ ಬಿ.ಎಸ್. ಕಡಕಭಾವಿ ಮೂಲಕ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

    ನಿವೃತ್ತ ಮುಖ್ಯಶಿಕ್ಷಕ ಅಶೋಕ ಮಣಿ ಮಾತನಾಡಿ, ಈಗಾಗಲೇ ರಾಜ್ಯ ಸರ್ಕಾರ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ ಸದ್ಯ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ವಿತರಿಸಲಾಗುತ್ತಿದೆ. ಆದರೆ, ಅಹಿಂಸಾ ತತ್ವ ಪಾಲಿಸುತ್ತಲೇ ಬಂದಿರುವ ದಿಗಂಬರ ಜೈನ್ ಸಮಾಜದ ಮಕ್ಕಳು ಸಹಿತ ಅದೇ ಶಾಲೆಗಳಲ್ಲಿ ಓದುತ್ತಿರುವುದರಿಂದ ಒಂದೇ ಪಂಕ್ತಿಯಲ್ಲಿ ಕುಳಿತು ಸಹ ಭೋಜನ ಮಾಡುವ ಮಕ್ಕಳಲ್ಲಿ ಇದು ಬೇಧ ಭಾವ ಉಂಟು ಮಾಡುತ್ತದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆ ಹಣ್ಣು ನೀಡುತ್ತಿದೆಯಾದರೂ ಮಕ್ಕಳಲ್ಲಿ ಕುತೂಹಲದ ಜತೆಗೆ ಅನುಕರಣೆ ಮಾಡುವ ಶಕ್ತಿ ಹೆಚ್ಚಿರುತ್ತದೆ. ತಿನ್ನಲು ಏನೇ ಕೊಟ್ಟರೂ ಹರಿದು ಹಂಚಿಕೊಂಡು ತಿನ್ನುವ ಮನಸ್ಸಿರುತ್ತದೆ. ಮೊಟ್ಟೆ ತಿನ್ನುವ ಮಕ್ಕಳನ್ನು ಕಂಡು, ಮೊಟ್ಟೆಯಲ್ಲಿ ಏನೋ ವಿಶೇಷತೆ ಇರಬಹುದು, ನಾವೂ ಏಕೆ ಮೊಟ್ಟೆಯ ರುಚಿ ಸವಿಯಬಾರದೆಂಬ ಭಾವ ನಮ್ಮ ಮಕ್ಕಳಲ್ಲಿಯೂ ಬರಬಹುದು. ನಮ್ಮ ಮಕ್ಕಳೂ ಕ್ರಮೇಣ ಎಲ್ಲಿ ಮೊಟ್ಟೆ ತಿನ್ನುವುದನ್ನು ರೂಢಿಸಿಕೊಳ್ಳುತ್ತಾರೋ ಎಂಬ ಭಯ, ಆತಂಕ ಪಾಲಕರದ್ದಾಗಿದೆ ಎಂದು ತಿಳಿಸಿದರು.

    ಮುಖಂಡ ಮಾಣಿಕಚಂದ ದಂಡಾವತಿ ಮಾತನಾಡಿ, ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಸೂಕ್ತ ನಿರ್ಧಾರಕ್ಕೆ ಬರದಿದ್ದರೆ ಜೈನ್ ಸಮಾಜಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು. ಅರಿಹಂತ ಚಾರಿಟಬಲ್ ಅಧ್ಯಕ್ಷ ಮಹಾವೀರ ಸಗರಿ, ದಿಗಂಬರ ಜೈನ್ ಸಮಾಜದ ಮುಖಂಡ ಬಾಬು ಗೋಗಿ, ಮಹಾವೀರ ಸಗರಿ, ಶಾಂತಿನಾಥ ದಂಡಾವತಿ, ಮಾಣಿಕ ಸಗರಿ, ರಮೇಶ ದೊಡಮನಿ, ಅಜೀತ ಯಾತಗಿರಿ, ಮಹಾವೀರ ಮಂಕಣಿ, ಆದಿನಾಥ ನಾಗಾವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts