More

    ನೋಟಿಸ್ ಜಾರಿಗೆ ಜಿಪಂ ಅಧ್ಯಕ್ಷೆ ಸೂಚನೆ

    ಮುದ್ದೇಬಿಹಾಳ: ಕೋವಿಡ್- 19 ಸಂದರ್ಭ ವಿವಿಧ ಇಲಾಖೆ ಅಧಿಕಾರಿಗಳು ಮಹತ್ವದ ಪ್ರಗತಿ ಪರಿಶೀಲನೆ ಸಭೆಗೆ ತಾವು ಬರದೆ ತಮ್ಮ ಪ್ರತಿನಿಧಿಗಳನ್ನು ಕಳಿಸುವ ಮೂಲಕ ಬೇಜವಾಬ್ದಾರಿ ತೋರಿರುವ ಇಲಾಖೆಯ ಮುಖ್ಯಸ್ಥರಿಗೆ ಕಾರಣ ಕೇಳುವ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಸೂಚಿಸಿದರು.
    ಪಟ್ಟಣದ ತಾಲೂಕು ಪಂಚಾಯಿತಿ ಸಭೆಯಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಪ್ರಗತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

    ಶಿಕ್ಷಣ, ತೋಟಗಾರಿಕೆ ಮೊದಲಾದ ಇಲಾಖೆ ಅಧಿಕಾರಿಗಳು ಹಾಜರಾಗದೇ ಅವರ ಪ್ರತಿನಿಧಿಗಳನ್ನು ಕಳಿಸಿದ್ದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಿದ ಅಧ್ಯಕ್ಷರು. ಗಂಭೀರ ಕಾರಣಗಳಿದ್ದರೆ ತಾ.ಪಂ. ಅಧಿಕಾರಿಗಳಿಗಾಗಲಿ, ಅಧ್ಯಕ್ಷ, ಉಪಾಧ್ಯಕ್ಷರಿಗೆ ಒಂದು ಮಾತು ಹೇಳಿ ಹೋಗಬೇಕು. ಅದು ಬಿಟ್ಟು ಮನಸ್ಸಿಗೆ ಬಂದಂತೆ ನಡೆದುಕೊಂಡರೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಯಾವ ಇಲಾಖೆಯ ಅಧಿಕಾರಿಗಳು ಸಭೆಗೆ ಗೈರು ಇದ್ದಾರೆಯೋ ಅವರಿಗೆ ಕಾರಣ ಕೇಳುವ ನೋಟಿಸ್ ಕಳಿಸುವಂತೆ ಸೂಚಿಸಿದರು.

    ಆಡಳಿತ ಕನ್ನಡ ಭಾಷೆಯಲ್ಲಿಯೇ ನಡೆಸಬೇಕು ಎಂದು ಸರ್ಕಾರ ಹೇಳುತ್ತಿದೆ. ಆದರೆ, ಕನ್ನಡ ಭಾಷೆಯಲ್ಲಿಯೇ ಇಲಾಖೆ ಪ್ರಗತಿ ಪತ್ರಿಕೆಗಳು ಇರುವುದಿಲ್ಲ. ಹೀಗಾದರೆ ನಾಡ ಭಾಷೆಯ ಬೆಳವಣಿಗೆ ಹೇಗಾಗುತ್ತದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಿ.ಪಂ. ಅಧ್ಯಕ್ಷೆ ಕಳ್ಳಿಮನಿ ಹಾಗೂ ತಾ.ಪಂ. ಇಒ ಶಶಿಕಾಂತ ಶಿವಪೂರೆ, ಸರ್ಕಾರದ ಸುತ್ತೋಲೆ ಪ್ರಕಾರ ಕನ್ನಡ ಭಾಷೆಯಲ್ಲಿಯೇ ಪ್ರಗತಿ ಪತ್ರಿಕೆಗಳನ್ನು ತಯಾರಿಸಬೇಕೆಂದು ಸೂಚನೆ ಇದ್ದು ಅಧಿಕಾರಿಗಳು ಪಾಲಿಸುವಂತೆ ತಿಳಿಸಿದರು.
    ಡಾ. ಸತೀಶ ತಿವಾರಿ, ಶಿಕ್ಷಣ ಇಲಾಖೆ ಪರವಾಗಿ ಆರ್.ಎಸ್. ದೊಡಮನಿ, ಭೂಸೇನಾ ನಿಗಮದ ಎಇಇ ಎಸ್. ಮಹೇಶ್ವರಿ, ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ, ಸಿಡಿಪಿಒ ಸಾವಿತ್ರಿ ಗುಗ್ಗರಿ, ಶಿವಾನಂದ ಮೇಟಿ, ಕೃಷ್ಣಾ ಜಾಧವ ಮತ್ತಿತರರು ತಮ್ಮ ಇಲಾಖೆಯ ಪ್ರಗತಿ ಪರಿಶೀಲನೆ ವರದಿ ಮಂಡಿಸಿದರು.

    ಜಿ.ಪಂ. ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸದಸ್ಯೆ ಪ್ರೇಮಾಬಾಯಿ ಚವಾಣ್, ತಾ.ಪಂ. ಅಧ್ಯಕ್ಷೆ ಲಕ್ಷ್ಮೀಬಾಯಿ ಹವಾಲ್ದಾರ್ ಇದ್ದರು.
    ಪ್ರಥಮ ಬಾರಿಗೆ ಜಿಪಂ ಅಧ್ಯಕ್ಷೆ ಕಳ್ಳಿಮನಿ ಅವರು ತಾಪಂಗೆ ಆಗಮಿಸಿದ್ದರಿಂದ ಅವರನ್ನು ತಾ.ಪಂ. ವತಿಯಿಂದ ಸನ್ಮಾನಿಸಲಾಯಿತು. ಪಿಡಿಒ ಎನ್.ಎಂ. ಬಿಸ್ಟಗೊಂಡ ಸ್ವಾಗತಿಸಿದರು. ತಾಲೂಕುಮಟ್ಟದ ಅಧಿಕಾರಿಗಳು, ಪಿಡಿಒಗಳು ಸಭೆಯಲ್ಲಿದ್ದರು.

    ಅನವಶ್ಯಕವಾಗಿ ದಂಡ ಹಾಕುವುದನ್ನು ತಪ್ಪಿಸಿ

    ಗ್ರಾ.ಪಂ. ಅಡಿ ಬರದೆ ಇರುವ ಕೊಳವೆ ಬಾವಿಗಳಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದು ಹೆಸ್ಕಾಂ ವಿಜಿಲೆನ್ಸ್ ಕಮಿಟಿಯವರು ಗ್ರಾಪಂಗೆ ದಂಡ ಹಾಕುತ್ತಿದ್ದಾರೆ. ಆರ್‌ಡಬ್ಲೂೃಎಸ್ ಅಡಿ ಬರುವ ಬೋರ್‌ವೆಲ್‌ಗಳು ನಮ್ಮ ಅಧೀನದಲ್ಲಿ ಇರದಿದ್ದರೂ ದಂಡ ಹಾಕುವ ಪದ್ಧತಿ ಮುಂದುವರಿದಿದೆ. ಇದು ನಿಲ್ಲಬೇಕು. ಖಾಸಗಿ ಅಥವಾ ದೇವಸ್ಥಾನ ಕಮಿಟಿಯವರ ಬೋರ್‌ವೆಲ್ ಇದ್ದರೂ ಗ್ರಾಪಂಗೆ ದಂಡ ಹಾಕಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಈ ಸಮಸ್ಯೆ ಸರಿಪಡಿಸುವಂತೆ ಪಿಡಿಒಗಳಾದ ಶೋಭಾ ಮುದಗಲ್, ಖೂಭಾಸಿಂಗ ಜಾಧವ, ಪಿ.ಎಸ್. ಕಸನಕ್ಕಿ ಮೊದಲಾದವರು ಜಿಪಂ ಅಧ್ಯಕ್ಷೆ ಕಳ್ಳಿಮನಿ ಅವರ ಗಮನಕ್ಕೆ ತಂದರು.

    ಖಾಸಗಿ ಶಾಲೆಗಳಿಂದ ಆನ್‌ಲೈನ್ ಶಿಕ್ಷಣದ ಹೆಸರಲ್ಲಿ ವಸೂಲಿ

    ಸರ್ಕಾರಿ ಶಾಲೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಮಕ್ಕಳ ಒಂದು ವರ್ಷದ ಶೈಕ್ಷಣಿಕ ಭವಿಷ್ಯ ಹಾಳಾಗಿದೆ. ಆದರೆ, ಪಟ್ಟಣ ಪ್ರದೇಶದಲ್ಲಿರುವ ಖಾಸಗಿ ಶಾಲೆಯ ಮಕ್ಕಳಿಗೆ ಆನ್‌ಲೈನ್ ಶಿಕ್ಷಣದ ನೆಪದಲ್ಲಿ ಪೋಷಕರಿಂದ 10-15 ಸಾವಿರ ರೂ. ಗಳನ್ನು ಖಾಸಗಿ ಶಾಲೆಯವರು ವಸೂಲಿ ಮಾಡುತ್ತಿದ್ದಾರೆ ಎಂದು ತಾ.ಪಂ. ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ ಆರೋಪಿಸಿದರು.
    ಸಭೆಯಲ್ಲಿ ಮಾತನಾಡಿದ ಅವರು, ಇಂಗ್ಲಿಷ್ ಮಿಡಿಯಂ ಸ್ಕೂಲ್‌ನವರು ಅರ್ಧಗಂಟೆ ಆನ್‌ಲೈನ್ ಶಿಕ್ಷಣ ನಡೆಸಿ ಪೋಷಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಅದರಿಂದ ಆಗುವ ಸಾಧಕ-ಬಾಧಕಗಳೇನು ಎಂಬ ಬಗ್ಗೆ ಜಿಪಂ ಅಧ್ಯಕ್ಷರು ಮಾಹಿತಿ ಪಡೆದುಕೊಳ್ಳಬೇಕು ಎಂದು ತಾಪಂ ಉಪಾಧ್ಯಕ್ಷ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts