More

    ರೈತಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ವಿಫಲ

    ಮುದ್ದೇಬಿಹಾಳ: ಪಟ್ಟಣದಲ್ಲಿ ವಿವಿಧ ರೈತಪರ ಸಂಘಟನೆಗಳು ಕರೆ ನೀಡಿದ್ದ ಮುದ್ದೇಬಿಹಾಳ ಬಂದ್ ಕರೆ ಸಂಪೂರ್ಣ ವಿಫಲವಾಗಿದ್ದು, ಭೂಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧ ಕೇವಲ ಪ್ರತಿಭಟನಾ ರ‌್ಯಾಲಿಗಷ್ಟೇ ಸೀಮಿತವಾಯಿತು.
    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ರೈತಪರ ಸಂಘಟನೆಗಳ ಮುಖಂಡರು ಸಭೆ ಸೇರಿ ಭಾರತ ಬಂದ್ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಬಂದ್ ಮಾಡುವುದಾಗಿ ಘೋಷಿಸಿದ್ದರು. ಆದರೆ, ಬೆಳಗ್ಗೆಯಿಂದಲೇ ಬಸ್ ಸಂಚಾರ ಎಂದಿನಂತೆ ಇತ್ತು. ಅಂಗಡಿಕಾರರು ಎಂದಿನಂತೆ ತಮ್ಮ ದೈನಂದಿನ ವ್ಯಾಪಾರ ವಹಿವಾಟು ನಡೆಸಿದರು. ರೈತ ಮುಖಂಡರು ಮಾಡಿಕೊಂಡಿದ್ದ ಮನವಿಗೆ ವ್ಯಾಪಾರಸ್ಥರು ಕಿವಿಗೊಡಲಿಲ್ಲ.

    ಕಾಯ್ದೆ ವಿರೋಧಿಸಿ ಪ್ರತಿಭಟನೆ

    ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನಾ ರ‌್ಯಾಲಿ ಪಟ್ಟಣದ ಮುಖ್ಯರಸ್ತೆ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಮಿನಿ ವಿಧಾನಸೌಧಕ್ಕೆ ತಲುಪಿತು.
    ಬಸವೇಶ್ವರ ವೃತ್ತದಲ್ಲಿ ಎಪಿಎಂಸಿ ನಿರ್ದೇಶಕ ವೈ.ಎಚ್. ವಿಜಯಕರ, ಜೆಡಿಎಸ್ ಮುಖಂಡ ಅರವಿಂದ ಕೊಪ್ಪ, ಡಿಎಸ್‌ಎಸ್ ಮುಖಂಡ ಡಿ.ಬಿ. ಮುದೂರ, ಹರೀಶ ನಾಟೀಕಾರ, ಕರವೇ(ಪ್ರವೀಣಶೆಟ್ಟಿ ಬಣ) ಅಧ್ಯಕ್ಷ ಅರುಣ ಪಾಟೀಲ, ರೈತ ಮುಖಂಡ ಅಮೀರ್ ನಂದವಾಡಗಿ, ರಮೇಶ ಕರಡ್ಡಿ ಮಾತನಾಡಿದರು.
    ತಹಸೀಲ್ದಾರ್ ಜಿ.ಎಸ್. ಮಳಗಿ ಅವರಿ ಮನವಿ ಪತ್ರ ಸಲ್ಲಿಸಲಾಯಿತು.
    ಎಪಿಎಂಸಿ ಮಾಜಿ ಅಧ್ಯಕ್ಷ ಗುರು ತಾರನಾಳ, ಪುರಸಭೆ ಸದಸ್ಯ ಮಹಿಬೂಬ್ ಗೊಳಸಂಗಿ, ರಿಯಾಜ್ ಢವಳಗಿ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಸಿದ್ದನಗೌಡ ಬಿರಾದಾರ, ಜಿಲ್ಲಾ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ಕಾಂಗ್ರೆಸ್ ಪಕ್ಷದ ಯುವ ಘಟಕದ ಅಧ್ಯಕ್ಷ ರಫಿಕ್ ಶಿರೋಳ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ, ಅಯ್ಯಪ್ಪ ಬಿದರಕುಂದಿ, ಲಕ್ಷ್ಮಣ ಲಮಾಣಿ ಮತ್ತಿತರರಿದ್ದರು.

    ಬಿಗಿ ಭದ್ರತೆ

    ಬಂದ್ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವಹಿಸಲಾಗಿತ್ತು. ಸಿಪಿಐ ಆನಂದ ವಾಘಮೋಡೆ, ಪಿಎಸ್‌ಐ ಮಲ್ಲಪ್ಪ ಮಡ್ಡಿ ಬೆಳಗ್ಗೆಯಿಂದಲೇ ಬಸವೇಶ್ವರ ವೃತ್ತದಲ್ಲಿ ಹೆಚ್ಚಿನ ಪೊಲೀಸ್‌ರನ್ನು ನಿಯೋಜಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts