More

    ಬಿಜ್ಜೂರ ಗ್ರಾಪಂ ಅವ್ಯವಹಾರ ಖಂಡಿಸಿ ಅರೆಬೆತ್ತಲೆ ಧರಣಿ

    ಮುದ್ದೇಬಿಹಾಳ : ತಾಲೂಕಿನ ಬಿಜ್ಜೂರ ಗ್ರಾಪಂನಲ್ಲಿ ಅಕ್ರಮ ನಡೆಸಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಸರ್ಕಾರಕ್ಕೆ ವಂಚಿಸಿದ ಹಣವನ್ನು ಮರಳಿ ಸರ್ಕಾರಕ್ಕೆ ಭರ್ತಿ ಮಾಡಿಸಿಕೊಳ್ಳಬೇಕು ಎಂದು ಆಗ್ರಹಿಸಿ ತಾಲೂಕಿನ ಬಿಜ್ಜೂರ ಗ್ರಾಮಸ್ಥರು,ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಎಂಟನೇ ದಿನ ಪೂರೈಸಿದೆ.

    ಅಧಿಕಾರಿಗಳ ನಿಧಾನಗತಿ ತನಿಖೆಯನ್ನು ಖಂಡಿಸಿದ ಪ್ರತಿಭಟನಾಕಾರರು ಬುಧವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು. ಹೋರಾಟಗಾರರಾದ ಮಲ್ಲು ತಳವಾರ,ಎಂ.ಬಿ.ದಖನಿ, ಜಗದೀಶ ಜಗ್ಲರ್ ಮಾತನಾಡಿ, ಬಿಜ್ಜೂರ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ ಎಸಗಿ ವಸತಿ ಯೋಜನೆಯಡಿ ಲಕ್ಷಾಂತರ ರೂ. ಅಧಿಕಾರಿಗಳು ಲಪಟಾಯಿಸಿದ್ದಾರೆ.

    ಅಲ್ಲದೆ, ಬಿಜ್ಜೂರ ಹಾಗೂ ಸುಲ್ತಾನಪುರದ ಸರ್ಕಾರಿ ಜಾಗವಾದ ಆಸ್ತಿ ನಂಬರ್ 3, 60, 61, 79, 81, 82, 187, 306, 309, 311, 316, 333, 334, 516, 588 ತಿದ್ದುಪಡಿ ಮಾಡಲಾಗಿದ್ದು, ಈ ಬಗ್ಗೆ ದೂರು ಸಲ್ಲಿಸಿದ್ದೇವೆ. ಇಲ್ಲಿಯವರೆಗೂ ಅಧಿಕಾರಿಗಳು ಕ್ರಮ ಕೈಗೊಳ್ಳುವ ಬಗ್ಗೆ ಚಕಾರವೆತ್ತುತ್ತಿಲ್ಲ. ಇದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ದೂರಿದರು.

    ಗ್ರಾಪಂ ದಾಖಲೆಗಳು ಒಂದು ವೇಳೆ ಸಿಗದೆ ಇದ್ದರೆ ಸಂಬಂಧಿಸಿದ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ದೂರು ದಾಖಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಪ್ರತಿಭಟನೆಯನ್ನು ಮಾಡುವುದಾಗಿ ಎಚ್ಚರಿಸಿದರು.
    ಗ್ರಾಮಸ್ಥರಾದ ಶ್ರೀಶೈಲ ದೊಡಮನಿ, ಶ್ರೀಶೈಲ ಸಜ್ಜನ, ಯಮನಪ್ಪ ಪಟ್ಟಣದ, ಯಮನಪ್ಪ ಮಂಕಣಿ, ವೀರೇಶ ಪತ್ತಾರ, ಮೌನೇಶ ನಾಗರೆಡ್ಡಿ, ಪರಮಣ್ಣ ಬಿಜ್ಜೂರ, ಪರಶುರಾಮ ಜಗ್ಲರ್, ಸಿದ್ದನಗೌಡ ಪಾಟೀಲ ಇದ್ದರು.

    ಹೋರಾಟದ ಸ್ವರೂಪ ಬದಲು :
    ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳದೆ ಇದ್ದಲ್ಲಿ ಹೋರಾಟದ ಸ್ವರೂಪ ಬದಲಾಯಿಸಲಾಗುವುದು ಎಂದು ಹೋರಾಟಗಾರರು ತಿಳಿಸಿದ್ದಾರೆ. ಮುಖಂಡ ಮಲ್ಲು ತಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಲೆ ಮೇಲೆ ಕಲ್ಲು ಹೊತ್ತು ನಿಲ್ಲುವುದು, ಮುದ್ದೇಬಿಹಾಳದವರೆಗೆ ಅರೆಬೆತ್ತಲೆಯಾಗಿ ಪಾದಯಾತ್ರೆ ನಡೆಸುವುದಾಗಿ ತಿಳಿಸಿದ್ದಾರೆ.

    ವರದಿ ಸಲ್ಲಿಕೆಗೆ 15 ದಿನ ಕಾಲಾವಕಾಶ ಅಗತ್ಯ
    ಗ್ರಾಪಂನಲ್ಲಿ 2015 ರಿಂದ ಇಲ್ಲಿಯವರೆಗೆ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ 14ನೇ ಹಣಕಾಸಿನ ಕ್ರಿಯಾಯೋಜನೆ, ಕ್ಯಾಷ್‌ಬುಕ್ ಖರ್ಚಿನ ಮಾಹಿತಿ, ಎನ್‌ಆರ್‌ಇಜಿ ಕ್ರಿಯಾಯೋಜನೆ ದಾಖಲೆಗಳ ಪರಿಶೀಲನೆ 2016 ರಿಂದ ವಸತಿ ಯೋಜನೆಗಳ ಹಂಚಿಕೆ, ಗ್ರಾಮಸಭೆ ಠರಾವು ಪುಸ್ತಕ, ಡಾ.ಅಂಬೇಡ್ಕರ್ ವಸತಿ ಯೋಜನೆಯಡಿ ಹಂಚಿಕೆಯಾದ ಮನೆಗಳು, ಖಾಲಿ ಜಾಗೆ, ಶೌಚಗೃಹ, 9 ನಂ ರಜಿಸ್ಟರ್ ದಾಖಲೆ ಪರಿಶೀಲನೆ, ಪುನರ್ವಸತಿ ಹಾಗೂ ಪುನರ್‌ನಿರ್ಮಾಣದ ವೇಳೆ ಹಸ್ತಾಂತರಿಸಿದ ದಾಖಲೆಗಳು, ಬಿಜ್ಜೂರ,ಸುಲ್ತಾನಪುರ್, ಖಾನಿಕೇರಿ,ಅಯ್ಯನಗುಡಿ, ಲೊಟಗೇರಿ, ಬಿಜ್ಜೂರ, ಇಂಗಳಗಿ-ಟಕ್ಕಳಕಿ ಗ್ರಾಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುವುದು ಎಂದು ತನಿಖಾಧಿಕಾರಿಯಾಗಿ ನೇಮಕವಾಗಿರುವ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ನಮಗೆ ತನಿಖೆ ನಡೆಸಿ ವರದಿ ನೀಡಲು ಆದೇಶಿಸಿದ್ದಾರೆ. ಐದು ವರ್ಷಗಳ ಮಾಹಿತಿ ಕಲೆ ಹಾಕಬೇಕಿರುವುದರಿಂದ ವರದಿ ಸಲ್ಲಿಸಲು ಅಂದಾಜು 15 ದಿನಗಳು ಬೇಕಾಗುತ್ತವೆ ಎಂದರು. ಕೈಗಾರಿಕಾ ಇಲಾಖೆ ವಿಸ್ತೀರ್ಣಾಧಿಕಾರಿ ಎಸ್.ಎಸ್.ಸಜ್ಜನ, ಪಿಡಿಒ ಉಮೇಶ ರಾಠೋಡ, ಲೆಕ್ಕ ಅಧೀಕ್ಷಕ ಎನ್.ಎಂ.ಬಿಸ್ಟಗೊಂಡ ,ಪ್ರಭಾರ ಪಿಡಿಒ ವೀರೇಶ ಹೂಗಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts