More

    ಶುಭ ಕಾರ್ಯಕ್ಕೆ ಮುಹೂರ್ತ ಕೊರತೆ, 2021ರ ಸೀಸನ್‌ನಲ್ಲಿ 83 ದಿನ ಮೌಢ್ಯ

    – ವೇಣುವಿನೋದ್ ಕೆ.ಎಸ್. ಮಂಗಳೂರು
    ಒಂದೆಡೆ ಕೋವಿಡ್‌ನಿಂದಾಗಿ ಮುಂದೂಡಲ್ಪಟ್ಟಿದ್ದ ಮದುವೆ, ಉಪನಯನ, ಗೃಹಪ್ರವೇಶಾದಿ ಮಂಗಳಕಾರ್ಯಗಳಿಗೆ ಈಗ ಹೊಸ ವರ್ಷದಲ್ಲಿ ಸುದೀರ್ಘ ಮೌಢ್ಯದ ಬಿಸಿ ತಟ್ಟಲಿದೆ. ಈ ಬಾರಿ ಮೌಢ್ಯ ಅವಧಿ ದೀರ್ಘವಾಗಿರುವುದರಿಂದ ಮಂಗಳಕಾರ್ಯಗಳ ಒತ್ತಡ ಒಮ್ಮೆಗೇ ಹೆಚ್ಚುವ ಸಾಧ್ಯತೆ ಗೋಚರಿಸಿದೆ. ಇನ್ನೊಂದೆಡೆ ಶುಭಕಾರ್ಯಗಳಿಗೆ ಮುಹೂರ್ತಕ್ಕಾಗಿಯೂ ಪರದಾಡುವಂತಾಗಿದೆ.

    ಹಿಂದು ಸಂಪ್ರದಾಯದಲ್ಲಿ ಸಾಮಾನ್ಯವಾಗಿ ಮೌಢ್ಯದ ಅವಧಿಯಲ್ಲಿ ಯಾವುದೇ ಶುಭಕಾರ್ಯ ಹಮ್ಮಿಕೊಳ್ಳುವುದಿಲ್ಲ. ಇದರಲ್ಲಿ ಭಗವಂತನ ಅನುಗ್ರಹ ಇರುವುದಿಲ್ಲ, ಅಲ್ಲದೆ ಗ್ರಹಗಳ ಶಕ್ತಿ ಕ್ಷೀಣಿಸಿರುವುದರಿಂದ ಕಾರ್ಯಗಳು ಫಲ ಕೊಡುವುದಿಲ್ಲ ಎನ್ನುವುದು ನಂಬಿಕೆ.
    ಸಾಮಾನ್ಯವಾಗಿ ಜನವರಿಯಿಂದ ಮೇ ಅಂತ್ಯದವರೆಗೂ ಶುಭಕಾರ್ಯಗಳ ಸೀಸನ್. ಆದರೆ ಜನವರಿಯಿಂದಲೇ ಮೌಢ್ಯ ಶುರುವಾಗುತ್ತದೆ. ಶುಕ್ರ ಮತ್ತು ಗುರು ಮೌಢ್ಯಗಳನ್ನು ಪ್ರಧಾನವಾಗಿ ಜ್ಯೋತಿಷ್ಯದಲ್ಲಿ ಪರಿಗಣಿಸುತ್ತಾರೆ. ಪ್ರತಿವರ್ಷ ಇವು ಬರಲೇಬೇಕೆಂದಿಲ್ಲ. ಕೆಲವರ್ಷ ಇವು ಕನಿಷ್ಠವಾಗಿರುತ್ತವೆ. ಉದಾಹರಣೆಗೆ ಈ ವರ್ಷ ಜೂನ್ 1ರಿಂದ 9ರವರೆಗೆ ಕೇವಲ 9 ದಿನಗಳ ಮೌಢ್ಯ ಮಾತ್ರವಿತ್ತು.

    83 ದಿನ ಮೌಢ್ಯ: ಜ.19ರಿಂದ ಫೆ.12ರ ವರೆಗೆ 25 ದಿನ ಗುರುಮೌಢ್ಯವಾದರೆ ಫೆ.23-ಏ.21ರವರೆಗೆ 58 ದಿನಗಳ ಕಾಲ ಶುಕ್ರಮೌಢ್ಯ ಬರುತ್ತದೆ. ಅಂದರೆ ಶುಭಕಾರ್ಯದ ಸೀಸನ್‌ನಲ್ಲಿ 83 ದಿನಗಳ ಕಾಲ ಮೌಢ್ಯ ಇರಲಿದೆ. ಇದರಿಂದಾಗಿ ಪುರೋಹಿತರಿಗೆ ಒತ್ತಡದ ಅವಧಿ. ಕನಿಷ್ಠ ಮುಹೂರ್ತಗಳಿರುವಾಗ ಹೆಚ್ಚು ಕಾರ್ಯಕ್ರಮಗಳು ಇರುವುದರಿಂದ ನಿಭಾಯಿಸುವ ಸವಾಲು. ಗೃಹಪ್ರವೇಶ, ವಿವಾಹ, ಉಪನಯನ ಕಾಲಕ್ಕೆ ಅನುಗುಣವಾಗಿ ಮುಗಿಸಲೇಬೇಕಾದ ಒತ್ತಡದಲ್ಲಿ ಜನಸಾಮಾನ್ಯರೂ ಇದ್ದಾರೆ.

    ಮೌಢ್ಯ ಯಾಕೆ ಮಹತ್ವ?:
    ಮೌಢ್ಯದ ವೇಳೆ ಗ್ರಹಗಳ ಬಲ ಕ್ಷೀಣಿಸಿ, ಸೂರ್ಯನ ಪ್ರಭಾವ ಹೆಚ್ಚಿರುತ್ತದೆ. ಸೂರ್ಯ ತನ್ನ ಕಕ್ಷೆಯಲ್ಲಿ ಸಾಗುತ್ತಿರುವ ವೇಳೆ ವಿವಿಧ ಗ್ರಹಗಳ ಮೂಲಕ ಹಾದು ಹೋಗುತ್ತಾನೆ. ಆಗ ಆಯಾ ಗ್ರಹಗಳ ಮೇಲೆ ಪ್ರಭಾವ ಬೀರುತ್ತಾನೆ. ಹಾಗಾಗಿ ಕುಜ, ಬುಧ, ಶನಿ ಇತ್ಯಾದಿ ಗ್ರಹಗಳ ಮೂಲಕ ಹಾದು ಹೋಗುವ ಕಾರಣ ಎಲ್ಲ ಗ್ರಹಗಳಿಗೂ ಮೌಢ್ಯ ಉಂಟಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಮತ್ತು ಗುರು ಮೌಢ್ಯಗಳನ್ನು ಮಾತ್ರವೇ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

    ಏರುಪೇರು ಸಾಮಾನ್ಯ: ಮೌಢ್ಯದ ದಿನಗಳಲ್ಲಿ ಏರುಪೇರು ಇರುವುದು ಸಾಮಾನ್ಯ. ಸೂರ್ಯನ ಚಲನೆಗೆ ಆಧರಿಸಿ ಇದನ್ನು ಲೆಕ್ಕ ಹಾಕಲಾಗುತ್ತದೆ, ಕೆಲವೊಮ್ಮೆ ಹೆಚ್ಚು ದಿನ ಮೌಢ್ಯ ಬಂದಾಗ ಸಹಜವಾಗಿ ಶುಭಕಾರ್ಯಗಳಿಗೆ ಮುಹೂರ್ತದ ಕೊರತೆ ಉಂಟಾಗುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು.

    ಮೌಢ್ಯ ಎಂದರೆ ಅಸ್ತಮಿಸುವುದು ಎಂದು ಅರ್ಥವಿದೆ. ಶುಕ್ರ ಮತ್ತು ಗುರುಗಳು ಅಸ್ತಮಿಸುವಾಗ ಮುಹೂರ್ತ ಇರುವುದಿಲ್ಲ. ಶುಕ್ರ, ಗುರು ಉದಯದಲ್ಲಿ ಮಾತ್ರವೇ ಸುಮುಹೂರ್ತ ಸಿಗುತ್ತದೆ. ಸೀಮಂತದಂತಹ ಸಂದರ್ಭಗಳಲ್ಲಿ ಮೌಢ್ಯವಿದ್ದರೂ ಆಗಲೇಬೇಕಾದ ಸಂಸ್ಕಾರವಾದ ಕಾರಣ ಮೌಢ್ಯವನ್ನು ಪರಿಗಣಿಸುವುದಿಲ್ಲ.
    – ಮುಕುಂದ ಶರ್ಮ, ಪುರೋಹಿತರು, ಪುತ್ತೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts