More

    ಹೆತ್ತ ತಾಯಿಯನ್ನು ರಸ್ತೆಯಲ್ಲಿ ಬಿಟ್ಟು ತೆರಳಿದ ಮಗ

    ಕೊಪ್ಪಳ : ತಾಯಿಯೇ ದೇವರು ಎನ್ನುತ್ತಾರೆ. ಆದರೆ, ಇಲ್ಲೊಬ್ಬ ಮಗ ತನ್ನನ್ನು ಹೆತ್ತು ದೊಡ್ಡವನನ್ನಾಗಿ ಮಾಡಿದ ತಾಯಿಯನ್ನೇ ನಡು ರಸ್ತೆಯಲ್ಲಿ ಕೈ ಬಿಟ್ಟು ತೆರಳಿದ್ದಾನೆ.


    ಹೌದು, ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಮೂರು ದಿನಗಳ ಹಿಂದೆ ತಾಯಿಯೊಂದಿಗೆ ಬಂದಿದ್ದಾನೆ. ಮತ್ತೆ ಬರುವುದಾಗಿ ಹೇಳಿ ಕೈಯಲ್ಲಿ ಮೊಬೈಲ್ ಕೊಟ್ಟು ಹೋದಾತ ಇನ್ನೂ ಬಂದಿಲ್ಲ. 80ವಯಸ್ಸಿನ ಅಜ್ಜಿ ಮಗನ ದಾರಿ‌ ಕಾಯುತ್ತ ದೇವಸ್ಥಾನದ ರಸ್ತೆಯಲ್ಲಿಯೇ ಕುಳಿತಿದ್ದಾಳೆ. ಎರಡು ದಿನದಿಂದ ಕದಲದ ಅಜ್ಜಿಯನ್ನು ಕಂಡು ಸ್ಥಳೀಯರು ಮಾತನಾಡಿಸಿದ್ದಾರೆ.


    ಅಜ್ಜಿ ತನ್ನನ್ನು ಖಾಸಿಂ ಬಿ ಎಂದು, ತನ್ನೂರು ಉಜ್ಜಯನಿ ಎಂದು ಹೇಳಿಕೊಂಡಿದ್ದಾಳೆ. ಹೆಚ್ಚಿನ ವಿವರ ದೊರೆತಿಲ್ಲ. ಮಗ ನೀಡಿದ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಸಿಮ್ ಕಾರ್ಡ್ ಇಲ್ಲದಿರುವುದು ಗೊತ್ತಾಗಿದೆ. ಕೈ ಚೀಲದಲ್ಲಿ ಕೇವಲ ಹಾಳೆ ತುಂಬಿ ಕೊಟ್ಟಿದ್ದಾನೆ. ಅಜ್ಜಿಯ ಸ್ಥಿತಿ ಕಂಡು ಸ್ಥಳಿಯರೇ ಆಹಾರ ನೀಡಿದ್ದಾರೆ. ರಾತ್ರಿ ದೇವಸ್ಥಾನದ ಆವರಣದಲ್ಲೇ ಮಲಗಿದ್ದಾಳೆ. ಬಳಿಕ ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.


    ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಕ್ಷೇತ್ರದ ಪ್ರತಿಕ್ರಿಯೆ ಅಧಿಕಾರಿ ಮುತ್ತಣ್ಣ ಗುದ್ನೆಪ್ಪನವರ್ ಹಾಗೂ ಇತರ ಸಿಬ್ಬಂದಿ ತೆರಳಿ ಅಜ್ಜಿಯನ್ನು ರಕ್ಷಿಸಿದ್ದಾರೆ. ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಕೊಪ್ಪಳದ ಸುರಭಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts