More

    ಹುಬ್ಬಳ್ಳಿ ನಗರದಲ್ಲಿ ಸೊಳ್ಳೆಗಳ ಕಾಟ ವಿಪರೀತ !

    ವೀರೇಶ ಸೌದ್ರಿ ಹುಬ್ಬಳ್ಳಿ

    ಹೊತ್ತೇರಿದಂತೆ ಬಿಸಿಲಿನ ತಾಪ ಹೆಚ್ಚಾಗಿ ಮೈ ಬೆವರುತ್ತದೆ. ಹೊತ್ತು ಇಳಿಯುತ್ತಿದ್ದಂತೆ ಸೊಳ್ಳೆಗಳ ಕಾಟ ವಿಪರೀತವಾಗಿ ಮೈ-ಕೈ ಪರಚುತ್ತ ರಾತ್ರಿ ಕಳೆಯುವಂತಾಗಿದೆ. ದೇಹದ ಸುತ್ತ ಸುತ್ತುತ್ತ ಸುಳಿದು, ಕಚ್ಚಿ ರಕ್ತ ಹೀರುವ ಸೊಳ್ಳೆಗಳು ನಾಗರಿಕರ ನಿದ್ದೆಗೆಡಿಸಿವೆ.

    ನಗರದಾದ್ಯಂತ ಸೊಳ್ಳೆಗಳ ಕಾಟ ದಿನೇ ದಿನೆ ಹೆಚ್ಚುತ್ತಿದೆ. ಕತ್ತಲಾವರಿಸುತ್ತಿದ್ದಂತೆ ಮನೆಯ ಕಿಟಕಿ-ಬಾಗಿಲು ತೆರೆಯುವಂತಿಲ್ಲ. ಕಿಟಕಿಗಳಿಗೆ ಮೆಸ್ (ಸೊಳ್ಳೆ ಪರದೆ) ಅಳವಡಿಸಿಕೊಂಡಿದ್ದರಷ್ಟೇ ಒಂದಿಷ್ಟು ನಿರಾಳ. ಮನೆಯ ಒಳಗೆ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಅನೇಕ ಮಾಗೋಪಾಯಗಳಿವೆ. ಆದರೆ, ಮನೆಯ ಹೊರಗೆ ಸುಲಭದ ಮಾತಲ್ಲ. ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಿರುವ ಸೊಳ್ಳೆಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

    ಕಸ ಮುಸುರಿ-ಗಿಡಗಂಟಿಗಳಿಂದ ತುಂಬಿಕೊಂಡ ಖಾಲಿ ನಿವೇಶನಗಳು, ತೆರೆದ ಹಾಗೂ ತ್ಯಾಜ್ಯದಿಂದ ತುಂಬಿರುವ ಚರಂಡಿಗಳು ಹಾಗೂ ರಾಜಕಾಲುವೆಗಳು ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿವೆ. ‘ತ್ಯಾಜ್ಯ-ಗಿಡಗಂಟಿ ಆವರಿಸಿರುವ ಖಾಲಿ ನಿವೇಶನಗಳನ್ನು ಮಾಲೀಕರು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇಲ್ಲವಾದರೆ ನಿವೇಶನ ಸ್ವಚ್ಛಗೊಳಿಸಿ ಮಾಲೀಕರಿಗೆ ದಂಡ ವಿಧಿಸಲಾಗುವುದು’ ಎಂಬ ಮಹಾನಗರ ಪಾಲಿಕೆ ಹೇಳಿಕೆ ಪ್ರಕಟಣೆಗೆ ಸೀಮಿತವಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ನಿತ್ಯವೂ ಬರುತ್ತಿದ್ದ ಕಸ ಸಂಗ್ರಹ ವಾಹನಗಳು ಈಗೀಗ ಎರಡು ಅಥವಾ ಮೂರು ದಿನಕ್ಕೊಮ್ಮೆ ಕಾಣಿಸಿಕೊಳ್ಳುತ್ತಿವೆ. ಇದರಿಂದಾಗಿ ಒಮ್ಮೊಮ್ಮೆ ಮನೆಯಲ್ಲಿ ವಾರಗಟ್ಟಲೇ ಕಸ ಸಂಗ್ರಹಿಸಿಡುವುದರಿಂದ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ.

    ಸೊಳ್ಳೆ ನಿಯಂತ್ರಣಕ್ಕೆ ಆಗಾಗ ಫಾಗಿಂಗ್ ಮಾಡಲಾಗುತ್ತಿತ್ತು. ಕಸದ ತೊಟ್ಟಿಗಳ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಬಳಿಕ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗುತ್ತಿತ್ತು. ಬ್ಲೀಚಿಂಗ್ ಪೌಡರ್ ಬಿಡಿ, ಇತ್ತೀಚಿನ ದಿನಗಳಲ್ಲಿ ಫಾಗಿಂಗ್ ಅಷ್ಟಾಗಿ ಕಂಡು ಬರುತ್ತಿಲ್ಲ.

    ‘ಸಿಂಹವನ್ನು ಸೋಲಿಸಿದ ನೊಣ’ದ ಕಥೆಯಂಗಾಗೈತಿ ನಮ್ ಪರಿಸ್ಥಿತಿ. ಒಂದೈದು ನಿಮಿಷ ಕಟ್ಟಿ ಮ್ಯಾಗ ಆರಾಮಾಗಿ ಕುಂದ್ರೋದು ಕಷ್ಟ ಆಗೈತ್ರಿ. ಮೊಣಕೈ, ಪಾದಗಳಿಗೆ ನೊಣ ಮುತ್ತಿದಂಗ ಧೋಮಿ ಮುತಿಗಂತಾವು. ವಯಸ್ಸಾದವರು ರಾತ್ರಿ ಕಳೆಯೋದು ಭಾಳ ತ್ರಾಸಾಗೈತ್ರಿ’ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

    ಸೊಳ್ಳೆಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ಮಲೇರಿಯಾ, ಡೆಂಘೆ ಹಾಗೂ ಚಿಕೂನ್​ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

    ಅಭ್ಯಾಸಕ್ಕೂ ತೊಡಕು

    ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿವೆ. ದಿನವಿಡಿ= ಮನೆಯಲ್ಲೇ ಕುಳಿತು ಓದುವುದು ಬೇಸರ ತರಿಸುತ್ತದೆ. ಹಾಗೆಂದು ವಿದ್ಯಾರ್ಥಿಗಳು ಸಂಜೆ ವೇಳೆ ಅಥವಾ ಬೆಳಗಿನ ಜಾವ ತುಸು ಹೊತ್ತು ತಾರಸಿ, ಬಾಲ್ಕನಿಯಲ್ಲಿ ಕುಳಿತು ಓದಲೂ ಸೊಳ್ಳೆಗಳು ಬಿಡುತ್ತಿಲ್ಲ.

    ಪ್ರತಿ ವಲಯಕ್ಕೆ 3 ಉಪಕರಣ

    ಪ್ರತಿ ವಾರ್ಡ್​ಗಳಲ್ಲಿ ನಿತ್ಯ ಫಾಗಿಂಗ್ ಮಾಡುತ್ತಿದ್ದೇವೆ. ಪಾಲಿಕೆಯಲ್ಲಿ ಫಾಗಿಂಗ್​ನ 40 ಉಪಕರಣಗಳಿದ್ದು, ಪ್ರತಿ ವಲಯದಲ್ಲಿ 3 ಉಪಕರಣಗಳಿವೆ. ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ನಿತ್ಯ ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಫಾಗಿಂಗ್ ನಡೆಯುತ್ತಿರುತ್ತದೆ ಎನ್ನುತ್ತಾರೆ ಮಹಾನಗರ ಪಾಲಿಕೆ ಹಿರಿಯ ಅಧಿಕಾರಿಯೊಬ್ಬರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts