More

    ನವಲಗುಂದದಲ್ಲಿ ಜವಳಿ ಪಾರ್ಕ್

    ಹುಬ್ಬಳ್ಳಿ: ಕೈಮಗ್ಗ ಮತ್ತು ಜವಳಿ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸ್ವಕ್ಷೇತ್ರ ನವಲಗುಂದದಲ್ಲಿ ಜವಳಿ ಪಾರ್ಕ್ ಪ್ರಾರಂಭಕ್ಕೆ ಸಿದ್ಧತೆಗಳು ಭರದಿಂದ ನಡೆದಿವೆ.
    ಹಾವೇರಿ ಜಿಲ್ಲೆಯ ಶಿಗ್ಗಾಂವಿ, ರಾಣೆಬೆನ್ನೂರ, ಧಾರವಾಡ ಜಿಲ್ಲೆಯ ನವಲಗುಂದ ಸೇರಿದಂತೆ ರಾಜ್ಯದ ವಿವಿಧೆಡೆ ಜವಳಿ ಪಾರ್ಕ್ ಪ್ರಾರಂಭಿಸುವ ಯೋಜನೆಯನ್ನು ಸರ್ಕಾರ ಕಳೆದ ಬಜೆಟ್​ನಲ್ಲಿ ಘೋಷಿಸಿತ್ತು. ಕಳೆದ ವಾರವಷ್ಟೇ ಶಿಗ್ಗಾಂವಿ ತಾಲೂಕಿನ ಖುರ್ಷಾಪುರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜವಳಿ ಪಾರ್ಕ್ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ನವಲಗುಂದದಲ್ಲಿಯೂ ಜವಳಿ ಪಾರ್ಕ್ ಸ್ಥಾಪನೆಗಾಗಿ ಸ್ಥಳ ಪರಿಶೀಲನೆ ನಡೆಯುತ್ತಿದೆ. ಇದಕ್ಕಾಗಿ ಸುಮಾರು 15 ಎಕರೆ ಖಾಸಗಿ ಜಾಗ ಖರೀದಿಸುವ ಚಿಂತನೆ ನಡೆದಿದೆ. ಶೀಘ್ರ ಜಾಗ ಖರೀದಿ ಆದಲ್ಲಿ ಮುಂದಿನ 6 ತಿಂಗಳೊಳಗಾಗಿ ನವಲಗುಂದ ಜವಳಿ ಪಾರ್ಕ್ ಕಟ್ಟಡ ನಿರ್ವಣಕ್ಕೆ ಶಂಕುಸ್ಥಾಪನೆ ನೆರವೇರುವ ನಿರೀಕ್ಷೆ ಇದೆ.
    ಒಂದು ಜವಳಿ ಪಾರ್ಕ್ ಸ್ಥಾಪನೆಯಿಂದಾಗಿ ಕನಿಷ್ಠ 10 ಸಾವಿರ ನೇರ ಉದ್ಯೋಗ ಸೃಷ್ಟಿಯಾಗಲಿವೆ. ಅಪರೋಕ್ಷವಾಗಿ ಇನ್ನೂ ಹಲವಾರು ಸಣ್ಣಪುಟ್ಟ ಕೈಗಾರಿಕೆಗಳು ಪ್ರಾರಂಭಗೊಳ್ಳುವ ಮೂಲಕ ಸಾವಿರಾರು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
    ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿಯೂ ಜವಳಿ ಪಾರ್ಕ್ ನಿರ್ವಣಕ್ಕೆ ಈ ಮೊದಲು ಸ್ಥಳ ಗುರುತಿಸಲಾಗಿತ್ತು. ಆದರೆ, ಹಲವಾರು ಗೊಂದಲಗಳಿಂದಾಗಿ ಆ ಸ್ಥಳ ಬಿಟ್ಟು, ಮತ್ತೊಂದೆಡೆ ಸ್ಥಳ ಗುರುತಿಸುವ ಕಾರ್ಯ ನಡೆಯುತ್ತಿದೆ. ವಿಭಜನೆಪೂರ್ವ ಧಾರವಾಡ ಜಿಲ್ಲೆಯಲ್ಲಿ ಒಟ್ಟು ಮೂರು ಜವಳಿ ಪಾರ್ಕ್​ಗಳು ಸ್ಥಾಪನೆಯಾದಂತಾಗುತ್ತದೆ.
    ಇದರಿಂದ ಉದ್ಯೋಗ ಅರಸಿಕೊಂಡು ದೂರದ ನಗರಗಳಿಗೆ ವಲಸೆ ಹೋಗುವುದು ತಪ್ಪುತ್ತದೆ. ಸಾವಿರಾರು ಪರೋಕ್ಷ ಹಾಗೂ ಅಪರೋಕ್ಷ ಉದ್ಯೋಗಗಳು ವಿಭಜನೆ ಪೂರ್ವ ಧಾರವಾಡ ಜಿಲ್ಲೆಯಲ್ಲಿ ಸೃಷ್ಟಿಯಾಗಲಿವೆ. ಜವಳಿ ಪಾರ್ಕ್​ನಲ್ಲಿಯೇ ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರವನ್ನೂ ಪ್ರಾರಂಭಿಸುವ ಉದ್ದೇಶ ಇದೆ. ಸಾಮಾನ್ಯವಾಗಿ ಈ ಭಾಗದ ಉದ್ಯೋಗಾಕಾಂಕ್ಷಿಗಳು ಕೌಶಲ ಅಭಿವೃದ್ಧಿ ತರಬೇತಿಗಾಗಿ ಬೆಂಗಳೂರು, ಮುಂಬೈ, ಪುಣೆಯಂತಹ ಮಹಾನಗರಗಳಿಗೆ ಹೋಗುತ್ತಿದ್ದರು. ಇದೀಗ, ಆ ತರಬೇತಿ ಶಿಗ್ಗಾಂವಿ, ರಾಣೆಬೆನ್ನೂರು ಹಾಗೂ ನವಲಗುಂದದಲ್ಲಿಯೇ ದೊರೆಯಲಿದೆ. ಯುವಕರು ಈ ಜವಳಿ ಪಾರ್ಕ್​ಗಳಲ್ಲಿಯೇ ತರಬೇತಿ ಪಡೆದು, ಅಲ್ಲಿಯೇ ಉದ್ಯೋಗ ಪಡೆದುಕೊಳ್ಳಲು ಸಾಕಷ್ಟು ಸಹಾಯವಾಗಲಿದೆ. ಇದರೊಂದಿಗೆ ಹತ್ತಿ ಆಧಾರಿತ ಆರ್ಥಿಕ ಬೆಳವಣಿಗೆಗೂ ಜವಳಿ ಪಾರ್ಕ್ ಸ್ಥಾಪನೆಯಿಂದ ಸಾಕಷ್ಟು ಅನುಕೂಲವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts