More

    ಒಳಿತು ಬಯಸುವುದೇ ನೈತಿಕ ಶಿಕ್ಷಣ

    ಶೃಂಗೇರಿ: ಎಲ್ಲರಿಗೂ ಒಳಿತಾಗಬೇಕು ಹಾಗೂ ಸಮಾಜದಲ್ಲಿ ನಾವು ಹೇಗೆ ಬೆಳೆಯಬೇಕು ಎಂಬುದೇ ನೈತಿಕ ಶಿಕ್ಷಣದ ಮೌಲ್ಯ ಎಂದು ಎನ್.ಆರ್.ಪುರ ಎಂಕೆಸಿಪಿಎಂ ಕಾಲೇಜಿನ ಕನ್ನಡ ಉಪನ್ಯಾಸಕಿ ಮಧುರಾ ಮಂಜುನಾಥ್ ತಿಳಿಸಿದರು.
    ಕಾಂಚೀನಗರದಲ್ಲಿ ಭಾನುವಾರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ನೈತಿಕ ಶಿಕ್ಷಣದಲ್ಲಿ ಪಾಲಕರ ಪಾತ್ರ ಕುರಿತು ಮಾತನಾಡಿದರು.
    ಅಂಕ ಗಳಿಕೆ ಶಿಕ್ಷಣದ ಮೌಲ್ಯವಲ್ಲ. ಈ ಹಿಂದೆ ಕೂಡು ಕುಟುಂಬದಲ್ಲಿ ಎಲ್ಲರ ಜತೆ ಬೆರೆತು ಮಕ್ಕಳು ನೈತಿಕ ಶಿಕ್ಷಣ ಪಡೆಯುತ್ತಿದ್ದರು. ಆಧುನಿಕತೆ ಭರಾಟೆಯಲ್ಲಿ ಕೃತಕವಾಗಿ ಬದುಕುತ್ತಿದ್ದೇವೆ. ಪಾಲಕರು ಮಕ್ಕಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುತ್ತಿದ್ದು ಅವರು ಮೊಬೈಲ್ ಪ್ರಪಂಚದಲ್ಲಿ ಮುಳುಗಿದ್ದಾರೆ. ಇಂಥ ವಾತಾವರಣದಿಂದ ಮಕ್ಕಳನ್ನು ಹೊರತರಬೇಕು ಎಂದು ಹೇಳಿದರು.
    ಸರ್ಕಾರಿ ಶಾಲೆಯನ್ನು ಕಾನ್ವೆಂಟ್ ಆಕ್ರಮಿಸಿಕೊಂಡಿದೆ. ಮಕ್ಕಳಿಗೆ ಜೀವನಕ್ಕೆ ಬೇಕಾದ ಶಿಕ್ಷಣ ಸಿಗುತ್ತಿಲ್ಲ. ಅಂಕ ಗಳಿಕೆಗೆ ಸೀಮಿತಗೊಳಿಸಲಾಗುತ್ತಿದೆ. ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿದಾಗ ಮಾತ್ರ ರಾಷ್ಟ್ರಪ್ರೇಮ, ಹಿರಿಯರ ಕುರಿತು ಗೌರವ ಮೂಡಲು ಸಾಧ್ಯ. ಶಿಕ್ಷಣ ಉದ್ಯೋಗ ನೀಡಲು ಸೀಮಿತವಾಗಿರಬಾರದು. ಅದು ಮಕ್ಕಳಲ್ಲಿ ನೈತಿಕತೆ ಬೆಳೆಸಲು ಪೂರಕವಾಗಿರಬೇಕು ಎಂದರು.
    ಧರ್ಮಸ್ಥಳ ತಾಲೂಕು ಯೋಜನಾಧಿಕಾರಿ ಮೂರ್ತಿ ಶೆಟ್ಟಿ ಮಾತನಾಡಿ, ಮಹಿಳೆಯರಲ್ಲಿ ಆತ್ಮವಿಶ್ವಾಸ, ದೃಢತೆ ಹಾಗೂ ಸಕಾರಾತ್ಮಕ ಭಾವದ ಜತೆ ಪ್ರತಿಭೆ ಅನಾವರಣಗೊಳ್ಳಬೇಕಿದೆ. ಈ ದೃಷ್ಟಿಯಿಂದ ತಾಲೂಕಿನಲ್ಲಿ 25 ಜ್ಞಾನವಿಕಾಸ ಕೇಂದ್ರಗಳಿದ್ದು, ಮಹಿಳೆಯರು ನಿರಂತರ ಕಾರ್ಯಪ್ರವೃತ್ತರಾಗಿದ್ದು ಸಮಾಜದ ಹಿತಕ್ಕಾಗಿ ಕೂಡಾ ದುಡಿಯುತ್ತಿದ್ದಾರೆ. ಜ್ಞಾನ ವಿಕಾಸ ಕೇಂದ್ರ ಆರೋಗ್ಯ, ಸಾಂಸ್ಕೃತಿಕ, ಕಾನೂನು,ಪೌಷ್ಟಿಕ ಆಹಾರ ಇತ್ಯಾದಿ ವಿಷಯಗಳ ಕುರಿತು ಸಾಕಷ್ಟು ಮಾಹಿತಿ ನೀಡುತ್ತ ಬಂದಿದೆ. ಕೇಂದ್ರಗಳ ಆಶಯಗಳು ಪರಿಪೂರ್ಣತೆಯತ್ತ ಸಾಗುತ್ತಿದೆ ಎಂದರು.
    ಪುಷ್ಪಗುಚ್ಛ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿತ್ತು. ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ ಪೂಜಾರಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷೆ ಶೋಭಾ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ವಿನಯ, ಶೌರ್ಯ ವಿಪತ್ತು ತಂಡದ ಮುಖ್ಯಸ್ಥ ರಾಘವೇಂದ್ರ, ತೀರ್ಪುಗಾರರಾದ ಶಾಂತಾ, ಜಯಂತಿ, ಪವಿತ್ರಾ, ಯೋಜನೆ ಶೃಂಗೇರಿ ಮೇಲ್ವಿಚಾರಕ ಮನೋಹರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts