More

    ಯಾಮಾರಿದರೆ ಹಣ ಮಂಗಮಾಯ!

    ರಾಣೆಬೆನ್ನೂರ: ‘ನೀವು ಬ್ಯಾಂಕ್​ನಿಂದ ಲಕ್ಷಗಟ್ಟಲೆ ಹಣ ಡ್ರಾ ಮಾಡಿಕೊಂಡು ಬರುವುದಿದ್ದರೆ ಹುಷಾರಾಗಿರಿ. ಯಾಕೆಂದರೆ ನಗರದಲ್ಲಿ ಹಣ ದೋಚುವವರ ಗುಂಪೊಂದು ಕಾರ್ಯಾಚರಣೆಗಿಳಿದಿದೆ. ಒಂದೇ ತಿಂಗಳಲ್ಲಿ ಇಂಥ ಮೂರು ಪ್ರಕರಣಗಳು ನಡೆದಿರುವುದು ಇದಕ್ಕೆ ಪುಷ್ಟಿ ನೀಡಿದೆ.

    ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಕಾರು, ಬೈಕ್​ನಲ್ಲಿಟ್ಟಿದ್ದ ಲಕ್ಷಾಂತರ ರೂ. ದೋಚಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿ 7.50 ಲಕ್ಷ ರೂ. ಕಿತ್ತುಕೊಳ್ಳಲಾಗಿದೆ. ಅಲ್ಲದೆ, ಜಿಲ್ಲಾಡಳಿತ ಭವನದಲ್ಲಿಯೇ ಕಾರೊಂದರಿಂದ ಲಕ್ಷಾಂತರ ರೂಪಾಯಿ ಎಗರಿಸಲಾಗಿದೆ.

    ಎಲ್ಲೆಲ್ಲಿ ನಡೆದಿವೆ ಪ್ರಕರಣ…?: ಕಳೆದ ಫೆ. 23ರಂದು ಹಾವೇರಿ ನಗರದಲ್ಲಿ ಮಧ್ಯಾಹ್ನ 2 ಗಂಟೆಗೆ ಗುತ್ತಿಗೆದಾರರೊಬ್ಬರ ಕಾರಿನ ಗ್ಲಾಸ್ ಒಡೆದು ಡಿಕ್ಕಿ ಓಪನ್ ಮಾಡಿ 2 ಲಕ್ಷ ರೂ. ದೋಚಿದ್ದಾರೆ. ಫೆ. 26ರಂದು ರಾಣೆಬೆನ್ನೂರ ನಗರದ ಎಂ.ಜಿ. ರಸ್ತೆಯಲ್ಲಿ ಉದ್ಯಮಿಯೊಬ್ಬರು ಬ್ಯಾಂಕ್​ನಿಂದ 4 ಲಕ್ಷ ರೂ. ಡ್ರಾ ಮಾಡಿಕೊಂಡು ಬಂದು ಕಾರಿನಲ್ಲಿಟ್ಟಿದ್ದರು. ಬಳಿಕ ಹಣ್ಣು ತರಲು ಹೋದಾಗ ಕಾರಿನ ಗ್ಲಾಸ್ ಒಡೆದ ಖದೀಮರು, ಕ್ಷಣಾರ್ಧದಲ್ಲಿ ಹಣ ಲಪಟಾಯಿಸಿದ್ದಾರೆ. ಮರು ದಿನ ಫೆ. 27ರಂದು ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ವ್ಯಾಪಾರಿಯೊಬ್ಬ ಬೈಕ್ ಮೇಲೆ 7.50 ಲಕ್ಷ ರೂ. ತೆಗೆದುಕೊಂಡು ಹೋಗುವಾಗ ಅವನ ಮೇಲೆ ಹಲ್ಲೆ ನಡೆಸಿದ ದರೋಡೆಕೋರರು ಹಣ ಸುಲಿಗೆ ಮಾಡಿದ್ದಾರೆ.

    ಇವು ಸರಣಿಯಾಗಿ ನಡೆದ ಪ್ರಕರಣಗಳಾಗಿದ್ದರೆ, ಜನವರಿ ಮೊದಲ ವಾರದಲ್ಲಿ ರಾಣೆಬೆನ್ನೂರ ನಗರದ ಪಿ.ಬಿ. ರಸ್ತೆಯಲ್ಲಿ ಬೈಕ್ ಸವಾರನೊಬ್ಬ ಬ್ಯಾಂಕ್​ನಿಂದ ತಂದ 3 ಲಕ್ಷ ರೂ. ಎಗರಿಸಲಾಗಿತ್ತು. ಇದಕ್ಕೂ ಮುನ್ನ ಹಾವೇರಿ ನಗರದ ಜಿಪಂ ಹಳೇ ಕಚೇರಿ ಆವರಣದಲ್ಲಿ ಕಾರಿನಲ್ಲಿಟ್ಟಿದ್ದ 80 ಸಾವಿರ ರೂ. ದೋಚಿದ್ದರು.

    ಜಿಲ್ಲೆಯಲ್ಲಿ ಇಂಥ ಕೃತ್ಯವೆಸಗುವ ಖದೀಮರ ಗ್ಯಾಂಗ್ ಸಕ್ರಿಯವಾಗಿದ್ದು, ಒಂದರ ಮೇಲೊಂದು ಘಟನೆ ನಡೆಯುತ್ತಲೇ ಇವೆ. ಕಾರ್, ಬೈಕ್​ನಲ್ಲಿ ಹಣ ತೆಗೆದುಕೊಂಡು ಹೋಗುತ್ತಿರುವವರನ್ನೇ ಟಾರ್ಗೆಟ್ ಮಾಡಿ ಅವರನ್ನು ಹಿಂಬಾಲಿಸಿ ಹಣ ದೋಚುತ್ತಿದ್ದಾರೆ. ಇಂಥ ಒಂದೆರಡು ಪ್ರಕರಣಗಳಲ್ಲಿ ಖದೀಮರ ಚಲನವಲನದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಹಣ ಕಳೆದುಕೊಂಡವರು ದೂರು ನೀಡಿದರೂ ಈವರೆಗೂ ಆರೋಪಿಗಳು ಪತ್ತೆಯಾಗಿಲ್ಲ. ಪೊಲೀಸರು ಆದಷ್ಟು ಭೇಗ ಇಂಥವರನ್ನು ಹಿಡಿದು ಸಾರ್ವಜನಿಕರ ಆತಂಕವನ್ನು ದೂರ ಮಾಡಬೇಕಿದೆ.

    ಪೊಲೀಸರು ಆದಷ್ಟು ಬೇಗ ಹೆಚ್ಚಿನ ಕಾಳಜಿ ವಹಿಸಿ ಖದೀಮರು, ಸುಲಿಗೆಕೋರರ ಕೈಗೆ ಕೋಳ ಹಾಕಬೇಕಿದೆ. ಪದೇಪದೆ ನಡೆಯುತ್ತಿರುವ ಇಂತಹ ಘಟನೆಗಳಿಗೆ ಬ್ರೇಕ್ ಹಾಕಬೇಕು.
    | ಮಾಲತೇಶ ಪೂಜಾರ, ಹಣ ಕಳೆದುಕೊಂಡವರ ಸಂಬಂಧಿ

    ಕಾರಿನ ಗ್ಲಾಸ್ ಒಡೆದು ಹಣ ದೋಚಿದ ಬಗ್ಗೆ ರಾಣೆಬೆನ್ನೂರ ಪ್ರಕರಣದಲ್ಲಿ ಸಿಸಿಟಿವಿ ಪುಟೇಜ್ ಸಿಕ್ಕಿದೆ. ಎಲ್ಲ ಪ್ರಕರಣಗಳನ್ನು ಒಂದೇ ತಂಡ ಮಾಡಿರುವ ಶಂಕೆಯಿದೆ. ಈ ಬಗ್ಗೆ ಪರಿಶೀಲಿಸಿ ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚಲಾಗುವುದು.
    | ಕೆ.ಜೆ. ದೇವರಾಜ್, ಎಸ್ಪಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts