ಬೆಂಗಳೂರು: ಮಂಗಳ ಗ್ರಹದ ಅಧ್ಯಯನಕ್ಕಾಗಿ ಭಾರತ ರವಾನಿಸಿರುವ ಮಾರ್ಸ್ ಆರ್ಬಿಟರ್ ಮಿಷನ್ (ಮಾಮ್) ಕೆಂಪು ಗ್ರಹದ ಅತಿದೊಡ್ಡ ಹಾಗೂ ತುಂಬಾ ಹತ್ತಿರದಲ್ಲಿರುವ ಚಂದ್ರ ಫೋಬಸ್ನ ಚಿತ್ರವನ್ನು ತೆಗೆದು ರವಾನಿಸಿದೆ.
ಮಂಗಳ ಗ್ರಹದಿಂದ 7,200 ಕಿ.ಮೀ. ಮತ್ತು ಫೋಬಸ್ನಿಂದ 4,200 ಕಿ.ಮೀ. ದೂರದಲ್ಲಿದ್ದಾಗ ಮಾಮ್ ಫೋಬಸ್ನ ಚಿತ್ರವನ್ನು ಸೆರೆಹಿಡಿದಿದೆ. ಇದರ ಪ್ರದೇಶದ ಲಕ್ಷಣಗಳ ರೆಸಲ್ಯೂಷನ್ 210 ಮೀಟರ್ ಆಗಿದೆ. 6 ಎಂಸಿಸಿ ಫ್ರೇಂಗಳನ್ನು ಬಳಸಿ ಚಿತ್ರವನ್ನು ಅಭಿವೃದ್ಧಿಪಡಿಸಲಾಗಿದ್ದು, ಬಣ್ಣವನ್ನು ತಿದ್ದಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ತಿಳಿಸಿದೆ.
ಫೋಬಸ್ ಚಂದ್ರ ಕಾರ್ಬನೋಸಿಯಸ್ ಕಾಂಡ್ರೈಟ್ಗಳಿಂದ ಕೂಡಿದೆ. ಅದು ಸಾಕಷ್ಟು ಘರ್ಷಣೆಗಳಿಗೆ ಒಳಗಾಗಿದ್ದು, ಅದರ ಬಹುದೊಡ್ಡ ಭಾಗ ಮುರಿದು ಹೋಗಿದೆ ಎಂದು ಹೇಳಿದೆ.
ಇದನ್ನೂ ಓದಿ: ಪಿಒಕೆ, ಗಿಲ್ಗಿಟ್-ಬಾಲ್ಟಿಸ್ತಾನದ ಮೇಲಿದೆ ಚೀನಾ ಕಣ್ಣು: ಬದಲಾಗಿದೆ ಯುದ್ಧತಂತ್ರ!
ಈ ಚಿತ್ರದಲ್ಲಿ ಫೋಬಸ್ ಚಂದ್ರನಲ್ಲಿರುವ ಅತಿದೊಡ್ಡ ಕಂದಕ ಸ್ಟಿಕ್ನೆ, ಸ್ಕಲೋವ್ಸ್ಕಿ, ರೋಚ್ ಮತ್ತು ಗ್ರಿಲ್ಡ್ರಿಗ್ ಸೇರಿ ಹಲವರು ಕಂದಕಗಳನ್ನು ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ತಿಳಿಸಿದೆ.
ಇಸ್ರೋ ಕೈಗೊಂಡಿದ್ದ ಮಂಗಳಯಾನ ಕಾರ್ಯಕ್ರಮ ಕೇವಲ ಆರು ತಿಂಗಳ ಅವಧಿಯದ್ದಾಗಿರುತ್ತದೆ ಎಂದು ಹೇಳಲಾಗಿತ್ತು. ಆದರೂ, ಮಾಮ್ನಲ್ಲಿ ಹಲವು ವರ್ಷಗಳವರೆಗೆ ಬಳಕೆಯಾಗುವಷ್ಟು ಇಂಧನ ಇರುವುದಾಗಿ ತಿಳಿಸಿತ್ತು. ಹಾಗಾಗಿ 2014ರ ಸೆ.14ರಂದು ಮಂಗಳ ಗ್ರಹದ ಕಕ್ಷೆಗೆ ಸೇರ್ಪಡೆಗೊಳಿಸಲಾಗಿದ್ದ ಮಾಮ್ನ ಜೀವಾವಧಿ ಇನ್ನಷ್ಟು ವರ್ಷ ವಿಸ್ತರಣೆಯಾಗುವ ಹಾಗೂ ಮಂಗಳ ಗ್ರಹದ ಕುರಿತು ಇನ್ನಷ್ಟು ಮಾಹಿತಿಗಳು ಲಭಿಸುವ ನಿರೀಕ್ಷೆ ಇದೆ ಎಂದು ಇಸ್ರೋ ಹೇಳಿದೆ.