More

    ಖರಬೂಜ, ಕಲ್ಲಂಗಡಿ ಬೆಳೆದರೂ ಕೈಕೊಟ್ಟ ನಸೀಬು!

    ಮೊಳಕಾಲ್ಮೂರು: ಬೇಸಿಗೆಯಲ್ಲಿ ಕಲ್ಲಂಗಡಿ, ಖರಬೂಜಗೆ ಬೇಡಿಕೆ ಹೆಚ್ಚು. ಇನ್ನೇನು ಫಲ ಬಿಡುತ್ತದೆ ಎಂಬುವಷ್ಟರಲ್ಲೇ ಬೆಲೆ ಕುಸಿತ ಮತ್ತು ರೋಗ ಬಾಧೆಗೆ ಸಿಕ್ಕು ಎರಡೂ ಬೆಳೆ ನಷ್ಟಕ್ಕೀಡಾಗಿದೆ. ಒಂದಷ್ಟು ಲಾಭ ಕಾಣುವ ರೈತನೊಬ್ಬರ ಕನಸಿಗೆ ನಸೀಬು ಕತ್ತರಿ ಹಾಕಿದೆ!

    ಒಂದಲ್ಲ, ಎರಡಲ್ಲ ಬರೋಬ್ಬರಿ 70 ಟನ್ ಖರಬೂಜ, ಸುಮಾರು 100 ಟನ್ ಕಲ್ಲಂಗಡಿ ಇಳುವರಿ ಕಂಡರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ರೈತ ಗುಂಡ್ಲೂರು ಕರಿಯಣ್ಣನ ಸ್ಥಿತಿ.

    10 ಲಕ್ಷ ರೂ. ಖರ್ಚು ಮಾಡಿ 6 ಎಕರೆಯಲ್ಲಿ ಎರಡೇ ತಿಂಗಳಲ್ಲಿ ಬೆಳೆದಿದ್ದ ತೈವಾನ್ ತಳಿಯ ಕರುಬೂಜ ಬೆಳೆಗೆ ಕಟಾವಿಗೆ ಬಂದಿತ್ತು. ಆದರೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತಕ್ಕೀಡಾದ್ದರಿಂದ ಅಷ್ಟೂ ಹಣ್ಣು ಹೊಲದಲ್ಲೇ ಬಿಸಿಲಿನ ತಾಪಕ್ಕೆ ಬೆಂಡಾಗಿ ಜನ, ಪ್ರಾಣಿ- ಪಕ್ಷಿಗಳಿಗೆ ಆಹಾರವಾಗಿದೆ!

    ಇದರ ಜತೆಯಲ್ಲೇ ಮೂರು ಎಕರೆಯಲ್ಲಿ ಕಷ್ಟಪಟ್ಟು ಬೆಳೆಸಿದ್ದ ಸುಪ್ರೀತ ತಳಿಯ ಕಲ್ಲಂಗಡಿ ಹಣ್ಣಿನ ಕತೆ ಕೂಡ ವ್ಯಥೆಯಾಗಿದೆ. ಉತ್ತಮ ಇಳುವರಿ ಕಂಡಿದ್ದ ಕರಿಯಣ್ಣ, ಇನ್ನು 15 ದಿನದಲ್ಲಿ ಕಟಾವು ಮಾಡುವ ದಾವಂತದಲ್ಲಿದ್ದರು. ಬೇರು ಮತ್ತು ಕಾಯಿಗೆ ಮಾರಕ ರೋಗ ಕಾಣಿಸಿಕೊಂಡಿದ್ದು ವಾರದಲ್ಲೇ ಹಣ್ಣು ನೆಲದ ಪಾಲಾಗಿವೆ. ಇತ್ತ ಮಾಡಿದ ಖರ್ಚೂ ಇಲ್ಲ. ಆದಾಯವೂ ಇಲ್ಲದೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹೊದ್ದುಕೊಳ್ಳುವಂತಾಗಿದೆ. ಕನಿಷ್ಠ 25 ಲಕ್ಷ ರೂ.ಗಳ ಆದಾಯದ ಕನಸು ನುಚ್ಚು ನೂರಾಗಿದೆ.

    ತಾಲೂಕಿನ ವಿವಿಧ ಗ್ರಾಮದ ರೈತರಲ್ಲೂ ಹಣ್ಣಿನ ಬೆಲೆ ಕುಸಿತದ ಸಮಸ್ಯೆ ನಿದ್ದೆಗೆಡಿಸಿದೆ. ಮಿತನೀರು ಬಳಸಿ ಬೆಳೆದಿರುವ 21 ಹೆ. ಪಪ್ಪಾಯಿ, 88 ಹೆ. ಮಾವು. 43 ಹೆ. ಬಾಳೆ, 17 ಹೆ. ಸೀಬೆ, 30 ಹೆ. ನಿಂಬೆ, 19 ಹೆ. ಮೋಸಂಬಿ, 120 ಹೆ. ದಾಳಿಂಬೆ, 6 ಹೆ. ಅಂಜೂರ ಕಟಾವಿಗೆ ಬಂದಿದ್ದರೂ ಕೈಗೆ ಸಿಗದ ತುತ್ತಾಗಿದೆ.

    ರೈತ ಗುಂಡ್ಲೂರು ಕರಿಯಣ್ಣ ಹೇಳಿಕೆ: ಹಣ್ಣು-ತರಕಾರಿ ಥರಾವರಿ ಬೆಳೆ ಬೆಳೆದು ಲಾಭ-ನಷ್ಟದಲ್ಲಿ ಅನೇಕ ಬಾರಿ ಸೋತು ಗೆದ್ದಿದ್ದೇನೆ. ಆದರೂ ಭರವಸೆ ಇಟ್ಟುಕೊಂಡು ದೊಡ್ಡ ಮಟ್ಟದ ಬಂಡವಾಳ ಹಾಕಿ ಬೆಳೆಸಿದ ಖರಬೂಜ ಮತ್ತು ಕಲ್ಲಂಗಡಿ ಕೈಕೊಟ್ಟಿವೆ. ಮಾಡಿದ ಖರ್ಚೂ ಇಲ್ಲ. ಆದಾಯವನ್ನೂ ಕಾಣದೆ ಸಾಲಗಾರರ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನೋವು ತರಿಸಿದೆ.

    ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬೇಡರಡ್ಡಿಹಳ್ಳಿ ಬಸವರಡ್ಡಿ ಹೇಳಿಕೆ: ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಲು ತಾಲೂಕು ಕೇಂದ್ರ ಸ್ಥಾನದಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಆಗಬೇಕು. ಇದು ರೈತರ ಭಹುದೊಡ್ಡ ಕೂಗು. ಸರ್ಕಾರ ಇದರ ಬಗ್ಗೆ ಬದ್ಧತೆ ತೋರಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts