More

    ಬಡವರ ಹೊಟ್ಟೆ ತುಂಬುವಷ್ಟು ಪಡಿತರ ನೀಡಿ

    ಮೊಳಕಾಲ್ಮೂರು: ಲಾಕ್‌ಡೌನ್‌ನಿಂದ ಬಡ ಜನತೆ, ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದು, ಇವರಿಗೆ ಸರ್ಕಾರ ಆಹಾರ ಧಾನ್ಯಗಳ ಪೂರೈಕೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಎಚ್.ಆಂಜನೇಯ ಒತ್ತಾಯಿಸಿದರು.

    ತಾಲೂಕಿನ ರಾಯಾಪುರ ಸಮೀಪದ ಸುಡುಗಾಡು ಸಿದ್ದರ ವಠಾರದಲ್ಲಿ ಭಾನುವಾರ ಆಹಾರದ ಕಿಟ್ ವಿತರಿಸಿ ಮಾತನಾಡಿ, ಮಹಾಮಾರಿ ಕರೊನಾ ಕಾರಣ ದುಡಿವ ವರ್ಗ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುವಂತಾಗಿದೆ ಎಂದು ತಿಳಿಸಿದರು.

    ಏಳು ಕೆ.ಜಿ.ಕೊಡುತ್ತಿದ್ದ ಪಡಿತರ ಅಕ್ಕಿಯನ್ನು ಸಂಕಷ್ಟದ ಸ್ಥಿತಿಯಲ್ಲಿ 5 ಕೆ.ಜಿ.ಗೆ ಇಳಿಸಿರುವ ಕ್ರಮ ಸರಿಯಲ್ಲ. ಕೂಡಲೇ ರಾಜ್ಯ ಸರ್ಕಾರ ಬಡ ಕುಟುಂಬಕ್ಕೆ ಆಗುವಷ್ಟು ಪಡಿತರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಆಗ್ರಹ: ಕರೊನಾ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ತೆಗೆದುಕೊಂಡ ಕ್ರಮ ಶ್ಲಾಘನಾರ್ಹ. ಆದರೆ, ಹಗಲಿರುಳು ಶ್ರಮಿಸುತ್ತಿರುವ ನೌಕರರ ಹಿತ ಕಾಯುವ ಜತೆಗೆ ಸರ್ಕಾರದ ನಿರ್ದೇಶನದಂತೆ ಬಡವರಿಗೆ ನೆರವಾಗುತ್ತಿರುವವರ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದನ್ನು ಮಾಧ್ಯಮಗಳ ಮೂಲಕ ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು ಎಂದರು.

    ಚಿತ್ರದುರ್ಗ ಹಾಗೂ ಬಳ್ಳಾರಿ ವ್ಯಾಪ್ತಿಯ ಗಣಿಗಾರಿಕೆ ಉದ್ಯಮಿಗಳು ಇಲ್ಲಿನ ಗಣಿ ಸಂಪತ್ತಿನಿಂದ ಕೋಟ್ಯಂತರ ರೂ. ಸಂಪಾದಿಸಿದ್ದಾರೆ. ಇಂತಹ ಕಷ್ಟ ಕಾಲದಲ್ಲಿ ನೆರವಾಗುವಂತೆ ಸರ್ಕಾರ ಅವರಿಗೆ ಸೂಚನೆ ನೀಡಿ ದೇಣಿಗೆ ಪಡೆಯಬೇಕೆಂದು ಸಲಹೆ ನೀಡಿದರು.

    ಜಿಪಂ ಸದಸ್ಯ ಡಾ.ಯೋಗೇಶ್ ಬಾಬು, ಗ್ರಾಪಂ ಅಧ್ಯಕ್ಷೆ ಸುಮಲತಾ, ಸದಸ್ಯರಾದ ವೈ.ಡಿ.ಬಸವರಾಜ್, ಜಿ.ಪಿ.ಸುರೇಶ್, ಶಿವಣ್ಣ, ಮಾಜಿ ಉಪಾಧ್ಯಕ್ಷ ನಾಗರಾಜ್, ಮುಖಂಡರಾದ ಪಟೇಲ್ ಜಿ.ಪಾಪನಾಯಕ, ಮೊಗಲಹಳ್ಳಿ ಜಯ್ಯಣ್ಣ, ಟಿ.ಕೆ.ಕಲೀಂ ವುಲ್ಲಾ, ಎ.ಕೆ.ಮಂಜುನಾಥ, ಜಗದೀಶ, ಪರಮೇಶ್ವರಪ್ಪ, ನಾಗರಾಜ್ ಕಟ್ಟೆ, ಚಂದ್ರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts