More

    ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಆಜ್ಞೆ ಪಾಲಿಸಿ

    ಮೊಳಕಾಲ್ಮೂರು: ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ಅವರ ‘ಮಾಡಿದಷ್ಟು ನೀಡು ಭಿಕ್ಷೆ’ ಆಶಯವನ್ನು ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಸ್.ದಿವಾಕರ್ ಸೂಚಿಸಿದರು.

    ತಾಲೂಕಿನ ಕೋನಾಪುರ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಡೆಯುತ್ತಿದ್ದ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿದರು.

    ಪ್ರಾಮಾಣಿಕವಾಗಿ ಹೆಚ್ಚು ಶ್ರಮದಿಂದ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಹೆಚ್ಚು ಮನ್ನಣೆ ನೀಡಬೇಕು. ಕಳ್ಳಾಟ ತೋರುವ ಕೆಲಸಗಾರರನ್ನು ದೂರ ಇಡಬೇಕು ಎಂದರು.

    ನರೇಗಾ ಯೋಜನೆ ಬಡ ಜನರಿಗೆ ಆಸರೆ ಆಗಿದೆ. ವಲಸೆ ಹೋಗುವುದಕ್ಕೆ ಕಡಿವಾಣ ಹಾಕಿದೆ. ಅಧಿಕಾರಿಗಳು ಮತ್ತು ಕಾರ್ಮಿಕರಲ್ಲಿ ಬದ್ಧತೆ ಇದ್ದರೆ ಮಾತ್ರ ಯೋಜನೆಯ ಗುರು, ತಿಪ್ಪೇರುದ್ರಸ್ವಾಮಿಯ ಆಶಯ ಈಡೇರಲಿದೆ ಎಂದು ಹೇಳಿದರು.

    ಬಿಸಿಲು-ಮಳೆ ಲೆಕ್ಕಿಸದೆ ಶ್ರಮಿಸುವ ಕಾರ್ಮಿಕರು ತಮ್ಮ ಆರೋಗ್ಯ ಸುರಕ್ಷತೆಗೂ ಹೆಚ್ಚು ಆದ್ಯತೆ ಕೊಡಬೇಕು. ಜಾಬ್ ಕಾರ್ಡ್ ಹೊಂದಿರುವ ಫಲಾನುಭವಿಗಳು, ಬ್ಯಾಂಕ್ ಖಾತೆಗೆ ಕಡ್ಡಾಯ ಆಧಾರ್ ಸಂಖ್ಯೆ ಲಿಂಕ್ ಮಾಡಿಸಬೇಕು. ಇದರಿಂದ ತಾವು ಮಾಡಿದ ಕೂಲಿ ಕೆಲಸದ ಹಣ ತಮ್ಮ ಕೈಸೇರಲಿದೆ ಎಂದು ತಿಳಿಸಿದರು.

    ನಂತರ ರಾಂಪುರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ತಾಪಂ ಇಒ ಕೆ.ಓ.ಜಾನಕಿರಾಮ್, ಪಿಡಿಒ ಗುಂಡಪ್ಪ, ಮಧುಕುಮಾರ, ದೇವರಾಜ್ ಇದ್ದರು.

    ಓದಿಗೆ ಬಡತನ ಅಡ್ಡಿ ಆಗದಿರಲಿ: ನರೇಗಾ ಕೆಲಸದಲ್ಲಿ ನಿರತಳಾಗಿದ್ದ ಯುವತಿಯನ್ನು ಕಂಡು ಮಾತನಾಡಿಸಿದ ಸಿಇಒ ದಿವಾಕರ್, ಎಷ್ಟು ವಯಸ್ಸು, ಯಾಕೆ ಶಾಲೆಗೆ ಹೋಗ್ತಿಲ್ಲ ಎಂದು ಪ್ರಶ್ನೀಸಿದರು. ಇಲ್ಲ ಸರ್, ಮನೆಯಲ್ಲಿ ಬಡತನ. ಆದ್ದರಿಂದ ಕೆಲಸಕ್ಕೆ ಬರುತ್ತಿದ್ದೇನೆ ಎಂದು ಹೇಳುತ್ತಿದ್ದಂತೆ, ಶಿಕ್ಷಣಕ್ಕೆ ಬಡತನ ಅಡ್ಡಿ ಆಗುವುದಿಲ್ಲ ಎಂದು ಸಿಇಒ ಹೇಳಿದರು. ಚೆನ್ನಾಗಿ ಓದಿ ಬದುಕು ಕಟ್ಟಿಕೊಳ್ಳುವ ವಯಸ್ಸು ನಿನ್ನದು. ಬಿಡುವಿನ ವೇಳೆ ಕೆಲಸ ಮಾಡಿದರೆ ಅಡ್ಡಿ ಇಲ್ಲ. ಆದರೆ, ಶಾಲೆಯನ್ನೇ ತೊರೆದು ಕೆಲಸ ಮಾಡುವುದು ಸರಿಯಲ್ಲ. ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ, ಸೈಕಲ್, ಬಟ್ಟೆ, ಪುಸ್ತಕ ಎಲ್ಲವನ್ನೂ ಉಚಿತವಾಗಿ ನೀಡಲಾಗುತ್ತದೆ. ಜತೆಗೆ ನಿನಗೆ ಏನಾದ್ರೂ ವಿದ್ಯಾಭ್ಯಾಸಕ್ಕೆ ಸಹಕಾರ ಬೇಕಾದರೆ ವ್ಯವಸ್ಥೆ ಮಾಡಲಾಗುವುದು. ಇನ್ಮುಂದೆ ಶಾಲೆಗೆ ಹೋಗುವುದನ್ನು ತಪ್ಪಿಸುವಂತಿಲ್ಲ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts