More

    ಹೂ ಕೃಷಿ ಮೇಲೆ ಕರೊನಾ ಕಾರ್ಮೋಡ

    ಮೊಳಕಾಲ್ಮೂರು: ಹೂವಿನ ಬೆಳೆಗಳ ಮೇಲೆ ಕರೊನಾ ಕಾರ್ಮೋಡ ಕವಿದಿದ್ದು ಮಾರಾಟ ಇಲ್ಲದೇ ಗಿಡದಲ್ಲೆ ಕನಕಾಂಬರ, ಮಲ್ಲಿಗೆ ಬಾಡುತ್ತಿವೆ.

    ತಾಲೂಕಿನಲ್ಲಿ ದೀರ್ಘಾವಧಿ ಮತ್ತು ಅಲ್ಪಾವಧಿ ಹಣ್ಣಿನ ತೋಟಗಾರಿಕೆ ಬೆಳೆ ಹೆಚ್ಚಿದ್ದರೂ ನೀರಿನ ಅಭಾವದ ಕಾರಣಕ್ಕೆ ಕೃಷಿಕರು ಹೂವಿನ ಬೆಳೆ ಬೆಳೆಯಲು ಮುಂದಾಗಿದ್ದರು.

    ಗುಂಡ್ಲೂರು, ನೇರ‌್ಲಹಳ್ಳಿ, ಮರ‌್ಲಹಳ್ಳಿ, ರಾಯಾಪುರ, ಭದ್ರಯ್ಯನತೋಪು, ಮುದ್ದಯ್ಯನಹಟ್ಟಿ, ಕೋನಸಾಗರ, ಯರ್ಜೆನಹಳ್ಳಿ, ಮೊಳಕಾಲ್ಮೂರು, ತಿಪ್ಪೇರಯ್ಯನಹಟ್ಟಿ, ನಾಗಸಮುದ್ರ ಸೇರಿ ವಿವಿಧೆಡೆ ನೂರಾರು ಎಕರೆಯಲ್ಲಿ ವಿವಿಧ ಬಗೆಯ ಹೂವಿನ ತೋಟ ನಾಟಿ ಮಾಡಲಾಗಿದೆ. ಬೇಸಿಗೆ ವೇಳೆ ಕನಕಾಂಬರ ಎಕರೆಗೆ ದಿನಕ್ಕೆ 18ರಿಂದ 20 ಕೆಜಿ, ಕಾಕಡ, ಮಲ್ಲಿಗೆ 15 ಕೆಜಿ ಇಳುವರಿ ಬರುತ್ತಿದ್ದು, ಮಹಾಮಾರಿ ಕರೊನಾ ಹೂವಿನ ಮಾರಾಟಕ್ಕೆ ಕೊಳ್ಳಿಯಿಟ್ಟಿದೆ.

    ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರು ಹೂವು ಕಟಾವು ಮಾಡಲು ಬರುತ್ತಿಲ್ಲ. ಮಾರಾಟ ಇಲ್ಲದೆ ನೂರಾರು ಎಕರೆಯಲ್ಲಿ ಬೆಳೆದಿರುವ ವಿವಿಧ ಬಗೆಯ ಹೂವು ವಾರದಿಂದ ಗಿಡಗಳಲ್ಲೆ ಬಾಡುತ್ತಿದೆ. ಇಷ್ಟು ದಿನ ನೀರು, ಗೊಬ್ಬರ, ಔಷಧ ನೀಡಿ ಆರೈಕೆ ಮಾಡಿದ್ದ ರೈತರ ಪಾಡು ಹೇಳತೀರದಾಗಿದೆ.

    ನಗರ, ಪಟ್ಟಣ ಮತ್ತು ಹಳ್ಳಿಗಳಲ್ಲಿ ಜನಸಂದಣಿ ಪ್ರವೇಶಕ್ಕೆ ನಿರ್ಬಂಧ ಹಾಕಿರುವ ಕಾರಣ ಜಾತ್ರೆ, ಧಾರ್ಮಿಕ ಕಾರ್ಯಗಳು, ಮದುವೆ ಸಮಾರಂಭ ಇತ್ಯಾದಿ ಕಾರ್ಯಗಗಳಿಗೆ ಕಡಿವಾಣ ಬಿದ್ದಿದ್ದರಿಂದ ಹೂ ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ.

    ಯರ್ಜೇನಹಳ್ಳಿ ರೈತ ಸತೀಶ ಹೇಳಿಕೆ: ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಕೊಳವೆಬಾವಿಗಳಲ್ಲಿ ಸಿಗುವ ನೀರನ್ನು ಮಿತವಾಗಿ ಬಳಕೆ ಮಾಡಿಕೊಂಡು ಒಂದೂವರೆ ಎಕರೆಯಲ್ಲಿ ಕಾಕಡ ಮತ್ತು ಕನಕಾಂಬರ ಗಿಡ ನೆಡಲಾಗಿತ್ತು. ಕಳೆದ 20 ದಿನಗಳಿಂದ ಎಕರೆಗೆ ದಿನಕ್ಕೆ 18-20 ಕೆಜಿಯಷ್ಟು ಇಳುವರಿ ಬಂದಿದೆ. ಕೆಜಿಗೆ 250 ರೂ. ತನಕ ಬೆಲೆ ಇತ್ತು. ಕರೊನಾಗೆ ಹೆದರಿದ ಜನ ವಾರದಿಂದ ಬಿಡಿಸಲು ಬರುತ್ತಿಲ್ಲ. ಕೈಗೆ ಬಂದು ತುತ್ತು ಬಾಯಿಗಿಲ್ಲ ಎಂಬ ಸ್ಥಿತಿ ಇದೆ.

    ಹೂವಿನ ವ್ಯಾಪಾರಿ ಬೆಳಗಲ್ ಈಶ್ವರಯ್ಯ ಹೇಳಿಕೆ: ಹೂವಿಗೆ ಯಾವತ್ತು ಬೇಡಿಕೆ ಇದೆ. ಆದರೆ, ಕರೊನಾಗೆ ಹೆದರಿರುವ ಜನ ಖರೀದಿಗೆ ಬರುತ್ತಿಲ್ಲ. ಲಕ್ಷಾಂತರ ರೂ. ಕೊಟ್ಟು ಹೂವಿನ ತೋಟಗಳನ್ನು ವರ್ಷಕ್ಕೆ ಗುತ್ತಿಗೆ ಪಡೆದಿದ್ದೇವೆ. ವಾರದಿಂದ ವ್ಯಾಪಾರಕ್ಕೆ ಕಡಿವಾಣ ಬಿದ್ದಿದೆ. ಕೈಯಲ್ಲಿ ಕಾಸಿಲ್ಲ, ಕುಟುಂಬದ ನಿರ್ವಹಣೆ ದೊಡ್ಡ ಸವಾಲಾಗಿದೆ.

    ಮೊಳಕಾಲ್ಮೂರು ರೈತ ವಸಂತಕುಮಾರ್ ಹೇಳಿಕೆ: ಹೂವಿನ ಬೆಳೆಗಳಿಗೂ ತಟ್ಟಿರುವ ಕರೊನಾ ಭೀತಿಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರೈತ ಮತ್ತು ಮಾರಾಟಗಾರರ ಹಿತ ಕಾಪಾಡಲು ಚಳ್ಳಕೆರೆಯಲ್ಲಿ ಹೂವಿನ ಮಾರ್ಕೇಟ್ ಪ್ರಾರಂಭಿಸಿದರೆ ತುಂಬಾ ಅನುಕೂಲವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts