More

    ಮಹಾತ್ಮನಾಗುವ ನಿಟ್ಟಿನಲ್ಲಿ…; ಮೋಹನದಾಸ ಚಿತ್ರವಿಮರ್ಶೆ

    | ಚೇತನ್ ನಾಡಿಗೇರ್

    ‘ನಾನು ಪದೇಪದೇ ತಪ್ಪು ಮಾಡುತ್ತಲೇ ಇದ್ದೇನೆ. ಹಣ ಕದ್ದೆ, ಮಾಂಸ ತಿಂದೆ. ಈ ವಿಷಯ ಗೊತ್ತಾದರೆ ಅಪ್ಪ ತಲೆ ಚಚ್ಚಿಕೊಳ್ಳುತ್ತಾರೆ. ಇದೆಲ್ಲ ನೋಡೋಕಿಂತ ಸಾಯೋದೇ ಮೇಲು …’- ಹಾಗಂತ ಆ ಹುಡುಗ ತೀರ್ವನಿಸುತ್ತಾನೆ. ಆತ್ಮಹತ್ಯೆಯ ಪ್ರಯತ್ನವನ್ನೂ ಮಾಡುತ್ತಾನೆ. ಕೊನೆಗೆ ತಾನು ಮಾಡಿದ್ದು ತಪು್ಪ ಎಂದು ಅವನಿಗೆ ಅರಿವಾಗುತ್ತದೆ. ತನ್ನ ತಪ್ಪುಗಳನ್ನು ಇನ್ನು ಮುಚ್ಚಿಟ್ಟುಕೊಳ್ಳಬಾರದು ಎಂಬ ತೀರ್ವನಕ್ಕೆ ಬರುತ್ತಾನೆ. ಪಶ್ಚಾತ್ತಾಪದಿಂದ ಅಪ್ಪನಿಗೆ ಸುದೀರ್ಘ ಪತ್ರ ಬರೆಯುತ್ತಾನೆ. ಆ ಮೂಲಕ ತಪ್ಪೊಪ್ಪಿಗೆ ಮಾಡಿಕೊಂಡು ಹಗುರವಾಗುತ್ತಾನೆ. ಮಹಾತ್ಮ ಗಾಂಧಿ ಅವರ ಈ ಬಾಲ್ಯದ ಕಥೆ ಎಲ್ಲರಿಗೂ ಗೊತ್ತಿರುವಂತದ್ದೇ. ಇದೆೆಲ್ಲವನ್ನೂ ಗಾಂಧಿ ಅವರೇ ತಮ್ಮ ಆತ್ಮಚರಿತ್ರೆಯಲ್ಲಿ ಒಂದು ಭಾಗವಾಗಿ ದಾಖಲಿಸಿಕೊಂಡಿದ್ದಾರೆ. ಈ ಭಾಗವು ಪಠ್ಯಪುಸ್ತಕಗಳಲ್ಲೂ ಪಾಠವಾಗಿ ಲಭ್ಯವಿದೆ. ಈಗ ಇದನ್ನೇ ಮೂಲವಸ್ತುವಾಗಿಟ್ಟುಕೊಂಡು ಪಿ. ಶೇಷಾದ್ರಿ ಸಿನಿಮಾ ಮಾಡಿದ್ದಾರೆ.

    ಗಾಂಧಿ ಅವರ 7ನೇ ವಯಸ್ಸಿನಿಂದ 14ರ ವಯಸ್ಸಿನವರೆಗಿನ ಕೆಲವು ಅಧ್ಯಾಯಗಳು ಈ ಚಿತ್ರದಲ್ಲಿವೆ. ಗಾಂಧಿ ಅವರ ಮೇಲೆ ಶ್ರವಣಕುಮಾರ ಮತ್ತು ಸತ್ಯ ಹರಿಶ್ಚಂದ್ರರ ಕಥೆಗಳು ಪ್ರಭಾವ ಬೀರಿದ್ದು, ಅವರು ತಮ್ಮ 13ನೇ ವಯಸ್ಸಿನಲ್ಲೇ ಮದುವೆಯಾಗಿದ್ದು, ಕಳ್ಳತನ ಮಾಡಿದ್ದು, ಸಿಗರೇಟು ಸೇದಿದ್ದು, ಮಾಂಸ ತಿಂದಿದ್ದು, ಆ ನಂತರ ಆತ್ಮಾವಲೋಕನ ಮಾಡಿಕೊಂಡಿದ್ದು, ಪಶ್ಚಾತ್ತಾಪ ಪಟ್ಟು ತಂದೆಗೆ ತಮ್ಮ ತಪು್ಪಗಳನ್ನು ಅರಿಕೆ ಮಾಡಿಕೊಂಡಿದ್ದು, ಮುಂದೆ ಮಹಾತ್ಮನಾಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು … ಇವೆಲ್ಲವೂ ಈ ಚಿತ್ರದಲ್ಲಿದೆ. ಮೋಹನದಾಸ ತಂದೆಗೆ ಪತ್ರ ಬರೆಯುವಲ್ಲಿಂದ ಚಿತ್ರ ಶುರುವಾಗುತ್ತದೆ. ಆ ನಂತರ ಅಲ್ಲಲ್ಲಿ ಫ್ಲಾಶ್​ಬ್ಯಾಕ್​ಗಳಲ್ಲಿ ಮುಂದುವರಿಯುವ ಚಿತ್ರವು, 7 ವರ್ಷಗಳ ಕಾಲಘಟ್ಟದಲ್ಲಿ ಸಾಗುತ್ತದೆ. ಕೊನೆಗೆ ಮೋಹನದಾಸನ ಪತ್ರ ಓದುವ ಕರಮ್ಂದ್ ಗಾಂಧಿ, ಮಗನನ್ನು ಕ್ಷಮಿಸುವಲ್ಲಿಗೆ ಚಿತ್ರ ಮುಗಿಯುತ್ತದೆ.

    ಚೌಕಟ್ಟು ಚಿಕ್ಕದಾಗಿರುವುದರಿಂದ ಮತ್ತು ಉದ್ದೇಶ ಸ್ಪಷ್ಟವಾಗಿರುವುದರಿಂದ ಶೇಷಾದ್ರಿ ಇವೆಲ್ಲವನ್ನೂ 99 ನಿಮಿಷಗಳಲ್ಲೇ ಹೇಳಿ ಮುಗಿಸಿದ್ದಾರೆ. ಆದರೂ ಕೆಲವು ಅಧ್ಯಾಯಗಳು ಸ್ವಲ್ಪ ಎಳೆದಂತಾಗಿದೆ ಎಂದನಿಸುತ್ತದೆ. ಇನ್ನೂ ಕೆಲವು ದೃಶ್ಯಗಳನ್ನು ಇನ್ನಷ್ಟು ಚೆನ್ನಾಗಿ ಚಿತ್ರೀಕರಿಸಬಹುದಿತ್ತು ಎಂದನಿಸುವುದೂ ಇದೆ. ಆದರೆ, ಇಲ್ಲಿ ಮೇಕಿಂಗ್​ಗಿಂತ ಕಥೆ ಮತ್ತು ಉದ್ದೇಶ ಬಹಳ ಮುಖ್ಯವಾಗಿರುವುದರಿಂದ ಮಿಕ್ಕಿದ್ದೆಲ್ಲವೂ ಗೌಣವಾಗುತ್ತದೆ. ಬಾಲಕ ಗಾಂಧಿಯಾಗಿ ಪರಂಸ್ವಾಮಿ ಮತ್ತು ಸಮರ್ಥ್ ಹೊಂಬಳ್ ಇಬ್ಬರೂ ಗಮನಸೆಳೆಯುತ್ತಾರೆ. ಪುತಲಿ ಬಾಯಿ ಪಾತ್ರವನ್ನು ಶ್ರುತಿ ಚೆನ್ನಾಗಿ ನಿಭಾಯಿಸಿದ್ದಾರೆ. ಅನಂತ್ ಮಹದೇವನ್ ಅವರಿಗೆ ಹೆಚ್ಚು ಕೆಲಸವಿಲ್ಲ. ದತ್ತಣ್ಣ ಹಾಡಿಗಷ್ಟೇ ಸೀಮಿತ. ಇಡೀ ಪರಿಸರವನ್ನು ಚೆನ್ನಾಗಿ ತೋರಿಸಿದ ಕ್ರೆಡಿಟ್ ಛಾಯಾಗ್ರಾಹಕ ಜಿ.ಎಸ್. ಭಾಸ್ಕರ್ ಅವರಿಗೆ ತಲ್ಲುತ್ತದೆ.

    ಚಿತ್ರ: ಮೋಹನದಾಸ

    ನಿರ್ದೇಶನ: ಪಿ. ಶೇಷಾದ್ರಿ

    ನಿರ್ಮಾಣ: ಮಿತ್ರಚಿತ್ರ

    ತಾರಾಗಣ: ಮಾಸ್ಟರ್ ಪರಂಸ್ವಾಮಿ, ಮಾಸ್ಟರ್ ಸಮರ್ಥ್ ಹೊಂಬಳ್, ಅನಂತ್ ಮಹದೇವನ್, ಶ್ರುತಿ, ದತ್ತಣ್ಣ ಮುಂತಾದವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts