More

    ದೇಶದ ಪ್ರತಿಷ್ಠೆ ಎತ್ತರಕ್ಕೇರಿಸಿದ ಮೋದಿ

    ಮದ್ದೂರು: ವಿಶ್ವದಲ್ಲಿ ದೇಶದ ಪ್ರತಿಷ್ಠೆಯನ್ನು ಬಹು ಎತ್ತರಕ್ಕೆ ಬೆಳೆಸಿದವರು ಪ್ರಧಾನಿ ನರೇಂದ್ರ ಮೋದಿ. ಅವರು ಮತ್ತೊಮ್ಮೆ ಪ್ರಧಾನಿಯಾದರೆ ದೇಶ ಎಲ್ಲ ರಂಗಗಳಲ್ಲೂ ಪ್ರಗತಿ ಸಾಧಿಸಲಿದೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

    ಪಟ್ಟಣದ ತಮ್ಮ ನಿವಾಸದಲ್ಲಿ ಭಾನುವಾರ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತರೆ ದೇಶಗಳಿಗೆ ನಮ್ಮ ದೇಶದ ಪ್ರಧಾನಿ ತೆರಳುತ್ತಿದ್ದ ವೇಳೆ ಎರಡನೇ ದರ್ಜೆಯ ಸ್ಥಾನಮಾನ ನೀಡುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಹೊರ ದೇಶಗಳಿಗೆ ತೆರಳುವ ಸಂದರ್ಭದಲ್ಲಿ ಕೆಂಪು ಕಂಬಳಿಯ ಸ್ವಾಗತ ನೀಡಿ ಪ್ರಥಮ ದರ್ಜೆಯ ಸ್ಥಾನಮಾನ ನೀಡುತ್ತಿರುವುದು ಪ್ರಶಂಸನೀಯ ಸಂಗತಿ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರು ಎಂದರು.

    ಮಾಜಿ ಪ್ರಧಾನಿ ದೇವೇಗೌಡ ಮಹಿಳೆಯರಿಗೆ ಮೀಸಲಾತಿ ನೀಡುವ ಮೂಲಕ ಎಲ್ಲ ವರ್ಗದ ಮಹಿಳೆಯರಿಗೆ ನ್ಯಾಯಯುತ ಸ್ಥಾನಮಾನ ನೀಡಿದ್ದಾರೆ. ಜತೆಗೆ ಎಚ್‌ಡಿಕೆ ಮುಖ್ಯಮಂತ್ರಿ ಆಗಿದ್ದ ವೇಳೆ ರೈತರ ಸಾಲ ಮನ್ನಾ ಹಲವು ಶಾಶ್ವತ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಎಲ್ಲ್ಲ ವರ್ಗದ ಜನರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದಾರೆ ಎಂದರು.

    ಕುಮಾರಸ್ವಾಮಿ ಅವರು ಸಂಸತ್ ಸದಸ್ಯರಾಗಿ ಅಯ್ಕೆಯಾದರೆ ಕೇಂದ್ರ ಕೃಷಿ ಸಚಿವರಾಗಿ ರೈತರ ಹಿತ ಕಾಪಾಡಲು ಸಾಧ್ಯವಾಗಲಿದೆ. ಆದ್ದರಿಂದ ಜಿಲ್ಲೆಯ ಜನರು ಆಶೀರ್ವದಿಸಿ ಎಂದು ಮನವಿ ಮಾಡಿದರು. ಪ್ರತಿ ಗ್ರಾಮದಲ್ಲೂ ತಾವೇ ಅಭ್ಯರ್ಥಿಯಾಗಿ ಕೆಲಸ ಮಾಡುವ ಜತೆಗೆ ಕೇಂದ್ರ ಸರ್ಕಾರದ ಜನಪರ ಯೋಜನೆಗಳು, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಾಧನೆಗಳನ್ನು ಪ್ರತಿ ಮನೆಗೆ ತಲುಪಿಸುವ ಮೂಲಕ ಕುಮಾರಸ್ವಾಮಿ ಗೆಲುವಿಗೆ ಈಗಿನಿಂದಲೇ ಕಾರ್ಯತಂತ್ರ ರೂಪಿಸಬೇಕು ಎಂದು ಹೇಳಿದರು.

    ನನ್ನ ಆಡಳಿತ ಅವಧಿಯಲ್ಲಿ ಶಿಕ್ಷಣ, ನೀರಾವರಿ, ಕೆರೆಗಳ ಅಭಿವೃದ್ಧಿ, ನಾಲಾ ಆಧುನಿಕರಣ. ದಲಿತ ಕಾಲನಿಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ತಮ್ಮ ಅಭಿವೃದ್ಧಿ ಬಗ್ಗೆ ಯಾರೊಬ್ಬರೂ ಚರ್ಚಿಸುವ ಅವಶ್ಯಕತೆ ಇಲ್ಲ. ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸಿದ್ದೇನೆ ಎಂದರು.

    ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಕೆಆರ್‌ಎಸ್‌ನಿಂದ ಜಮೀನುಗಳಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಹರಿಸದೆ ರೈತರನ್ನು ವಂಚಿಸಿ ಮೋಸವೆಸಗುತ್ತಿದ್ದು, ಇದರಿಂದಾಗಿ ಜಿಲ್ಲೆಯ ರೈತರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆಆರ್‌ಎಸ್‌ನಿಂದ ನೀರು ಹರಿಸದೆ ಹೋದರೆ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

    ಬೃಹತ್ ಸಭೆ: ಏಪ್ರಿಲ್ 2ರ ಮಂಗಳವಾರ ಪಟ್ಟಣದ ಹೊರವಲಯದಲ್ಲಿರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಸಮನ್ವಯ ಸಭೆ ಕರೆಯಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಸಭೆಯನ್ನು ಯಶಸ್ವಿಗೊಳಿಸುವಂತೆ ಮಾಜಿ ಸಚಿವ ಡಿ.ಸಿ ತಮ್ಮಣ್ಣ ಮನವಿ ಮಾಡಿದರು. ಮಂಗಳವಾರ ಮಧ್ಯಾಹ್ನ 4 ಗಂಟೆಗೆ ಸಮನ್ವಯ ಸಭೆ ಆಯೋಜಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕರಾದ ಪುಟ್ಟರಾಜು, ಅನ್ನದಾನಿ, ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ ಮತ್ತು ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದು, ಮೈತ್ರಿ ಅಭ್ಯರ್ಥಿ ಗೆಲುವಿನ ಬಗ್ಗೆ ಚರ್ಚಿಸಲಾಗುವುದು ಎಂದರು.

    ನಾಮಪತ್ರ ಸಲ್ಲಿಕೆ: ಏಪ್ರಿಲ್ 4 ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬಬೇಕೆಂದು ಕೋರಿದರು.
    ತಾಲೂಕಿನಿಂದ 50 ಸಾವಿರ ಹೆಚ್ಚು ಕಾರ್ಯಕರ್ತರು, ಆಗಮಿಸಿ ಶಕ್ತಿ ಪ್ರದರ್ಶನ ಮಾಡಿ ಪಕ್ಷದ ಶಕ್ತಿ ಪ್ರದರ್ಶನ ಮಾಡಬೇಕು. ನಾಮಪತ್ರ ಸಲ್ಲಿಸುವ ದಿನ 1 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮೈತ್ರಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು. ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಉಪಾಧ್ಯಕ್ಷ ದೇವರಹಳ್ಳಿ ವೆಂಕಟೇಶ್, ಪುರಸಭೆ ಸದಸ್ಯರಾದ ಎಂ.ಐ.ಪ್ರವೀಣ್, ಎಸ್.ಮಹೇಶ್ ಟಿ.ಆರ್.ಪ್ರಸನ್ನಕುಮಾರ್, ಆದಿಲ್, ಬಸವರಾಜು, ವನಿತಾ, ಮುಖಂಡರಾದ ಕೂಳಗೆರೆ ಶೇಖರ್, ಜಗದೀಶ್, ನಾರಾಯಣಸ್ವಾಮಿ, ಬಸವರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts