ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಮಾದರಿ ಪರೀಕ್ಷೆ; ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಸಚಿವರ ಭೇಟಿ

sslc
Published on

ಬೆಂಗಳೂರು : ಜುಲೈ 19 ರ ಸೋಮವಾರ ಮತ್ತು 22 ರ ಗುರುವಾರ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಅಣಕು‌ ಪರೀಕ್ಷೆ ಸಿದ್ಧತೆ ನಡೆಯಿತು. ಬೆಂಗಳೂರು ನಗರದ ಕೆಲವು ಪರೀಕ್ಷಾ ಕೇಂದ್ರಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಮಲ್ಲೇಶ್ವರ 18ನೇ ಕ್ರಾಸ್​​ನ ಪರೀಕ್ಷಾ ಕೇಂದ್ರ, ಪೂರ್ಣಪ್ರಜ್ಞ ಶಾಲೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಸುಮಾರು 4,885 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. ಇದಕ್ಕಾಗಿ 73,066 ಕೊಠಡಿಗಳನ್ನು ಮೀಸಲಿಟ್ಟಿದ್ದೇವೆ ಎಂದರು.

ಇಂದು ಮತ್ತು ನಾಳೆ ಅಣಕು‌ ಪರೀಕ್ಷೆ ಸಿದ್ದತೆ ಮಾಡಲಾಗುತ್ತೆ. ಸಾಮಾಜಿಕ ಅಂತರ, ಮಾಸ್ಕ್, ಸೇರಿದಂತೆ ಎಲ್ಲ ಕ್ರಮ ತೆಗೆದುಕೊಳ್ಳಲಾಗ್ತಿದೆ. ಈ ವರ್ಷ ಓಎಂಆರ್ ಶೀಟ್ ಮೇಲೆ ಫೋಟೋ, ರೋಲ್ ನಂಬರ್ ಇರುತ್ತೆ. ಪ್ರತಿ ವಿಷಯಕ್ಕೆ ವಿಶೇಷ ಬಣ್ಣದ ಓಎಂಆರ್ ಇರಲಿದೆ ಎಂದರು.

ಈ ವರ್ಷ 1,19,469 ಸಿಬ್ಬಂದಿಗಳು ಪರೀಕ್ಷಾ ಕೆಲಸ ನಿರ್ವಹಣೆ ಮಾಡಲಿದ್ದಾರೆ. ಪ್ರತಿ ಜಿಲ್ಲಾ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ. ಅವರು ಎಸ್ಓಪಿ ಪಾಲನೆಗೆ ಕ್ರಮ ಕೈಗೊಳ್ಳಲಿದ್ದಾರೆ. ಪರೀಕ್ಷಾ ಕೇಂದ್ರಗಳು ಅತ್ಯಂತ ಸುರಕ್ಷಿತ ಕೇಂದ್ರಗಳಾಗಿ ಇರಲಿವೆ ಎಂದು ಭರವಸೆ ನೀಡಿದರು.

ಯಾವುದೇ ಮಗುವಿಗೂ ಸಮಸ್ಯೆ ಆಗೋದಿಲ್ಲ. ಪಾಲಕರು ಆತಂಕವಾಗೋದು ಬೇಡ. ವಿದ್ಯಾರ್ಥಿಗಳು ಕುಡಿಯುವ ನೀರು ತರಬೇಕು. ಅವರು ತರದೇ ಹೋದ್ರೆ ನಾವೇ ನೀರು ಕೊಡ್ತೀವಿ. ಯಾವುದೇ ಆತಂಕ ಇಲ್ಲದೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕೆಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net