More

    ಪಿಯು ಪಾಸ್ ಮಾಡಿದ ಮಾದರಿ ಹೆಣ್ಣು, ಪಿಯುಸಿ ಪೂರೈಸಿದ ಇರುಳ್‌ಪಟ್ಟಿ ಗ್ರಾಮದ ಮೊದಲ ವಿದ್ಯಾರ್ಥಿನಿ ಖಾಕಿ ಪಡೆ ಅಭಿನಂದನೆ

    ಬೆಂಗಳೂರು ಗ್ರಾಮಾಂತರ/ಹೊಸೂರು: ಸಾಕ್ಷರತೆಯೇ ಶಕ್ತಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ… ಇಂಥ ೋಷಣೆಗಳು ಸರ್ಕಾರದ ಕಡತಗಳಿಗಷ್ಟೇ ಸೀಮಿತವಾಗುತ್ತಿವೆಯೇ…ಮಂಗಳ ಗ್ರಹದಲ್ಲಿ ಮನೆ ನಿರ್ಮಿಸುವ ಕನಸು ಕಾಣುತ್ತಿರುವ ಈ ಯುಗದಲ್ಲೂ ಶಾಲೆ ಬಾಗಿಲನ್ನೇ ಕಾಣದ ಮಕ್ಕಳಿದ್ದಾರೆಯೇ… ಹೌದೆನ್ನುತ್ತದೆ ಹೊಸೂರು ಸಮೀಪದ ಇರುಳ್‌ಪಟ್ಟಿ ಗ್ರಾಮ.

    ಅಷ್ಟಕ್ಕೂ ಈ ಗ್ರಾಮದ ವಿಷಯ ಪ್ರಸ್ತಾಪವಾಗಲು ಕಾರಣ, ಗ್ರಾಮದ ಹುಡುಗಿಯೊಬ್ಬಳು ದ್ವಿತೀಯ ಪಿಯುಸಿ ಮುಗಿಸಿರುವುದು. ಮಾತ್ರವಲ್ಲ, ಈಕೆಯೇ ಪಿಯುಸಿವರೆಗೆ ಓದಿದ ಈ ಗ್ರಾಮದ ಮೊದಲಿಗಳು! ಗ್ರಾಮದಲ್ಲಿ ಶಾಲೆಯ ಮುಖವನ್ನೇ ಕಾಣದ ನೂರಾರು ಮಕ್ಕಳಿದ್ದಾರೆ. ಇಂಥ ಸನ್ನಿವೇಶದಲ್ಲೂ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಗ್ರಾಮಕ್ಕೆ ಅಂಟಿದ ಅನಕ್ಷರಸ್ಥ ಗ್ರಾಮ ಎನ್ನುವ ಅಪಖ್ಯಾತಿ ತೊಳೆದು ಹಾಕಿದ್ದಾಳೆ ವಿದ್ಯಾರ್ಥಿನಿ ಕೃಷ್ಣವೇಣಿ.

    ಹೊಸೂರು ಪಟ್ಟಣಕ್ಕೆ 15 ಕಿ.ಮೀ. ದೂರವಿರುವ ಈ ಇರುಳ್‌ಪಟ್ಟಿ ಗ್ರಾಮದಲ್ಲಿ ಸುಮಾರು 300 ಮನೆಗಳಿವೆ, ಕೂಲಿ ಕಾರ್ಮಿಕರೇ ಹೆಚ್ಚಿರುವ ಗ್ರಾಮದಲ್ಲಿ ಶಾಲೆ, ವಿದ್ಯಾಭ್ಯಾಸ ಎನ್ನುವುದು ಗಗನಕುಸುಮವಾಗಿಯೇ ಉಳಿದಿದೆ. ಬಡತನದಿಂದಾಗಿ ಓದುವ ವಯಸ್ಸಿನಲ್ಲೇ ಪಾಲಕರೊಂದಿಗೆ ಜೀವನ ಬಂಡಿ ದೂಡಲು ಹೆಗಲು ಕೊಡುವ ಮಕ್ಕಳು ಶಿಕ್ಷಣದಿಂದ ಬಲುದೂರವೇ ಉಳಿದಿದ್ದಾರೆ. ಇನ್ನೂ ಕೆಲವರಿಗೆ ಶಿಕ್ಷಣದ ಮಹತ್ವದ ಅರಿವಿಲ್ಲ. ಹುಟ್ಟಿರುವುದೇ ಕೂಲಿ ಕೆಲಸಕ್ಕಾಗಿ ಎಂಬ ಧೋರಣೆಯಲ್ಲೇ ಬದುಕು ನಡೆಸುತ್ತಿರುವ ಇಂಥ ಜನರ ನಡುವೆ ಕೃಷ್ಣವೇಣಿ ದ್ವಿತೀಯ ಪಿಯುಸಿವರೆಗೆ ಓದಿ ತೇರ್ಗಡೆಯಾಗಿರುವುದೇ ಇಲ್ಲಿ ದೊಡ್ಡ ವಿಸ್ಮಯ.

    10ನೇ ತರಗತಿವರೆಗೂ ಓದಿಲ್ಲ: ಗ್ರಾಮದಲ್ಲಿ ಇದುವರೆಗೂ ಯಾರೂ ಹತ್ತನೇ ತರಗತಿವರೆಗೆ ಓದೇ ಇಲ್ಲ ಎನ್ನಲಾಗಿದೆ. ಹೆಚ್ಚೆಂದರೆ ಮೂರು ಅಥವಾ ನಾಲ್ಕನೇ ಕ್ಲಾಸಿನವರೆಗೆ ಓದಿರುವುದೇ ದಾಖಲೆ. ಶಿಕ್ಷಣದ ಬಗ್ಗೆ ಗಂಧ ಗಾಳಿಯೂ ಇಲ್ಲದ ಗ್ರಾಮದಲ್ಲಿ ಶಿಕ್ಷಣ ಎನ್ನುವುದೇ ಶಿಕ್ಷೆಯೇನೊ ಎಂಬಂತಹ ಮನಸ್ಥಿತಿಯ ಜನರಿದ್ದಾರೆ. ಈ ವರ್ಷದ ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಈ ಗ್ರಾಮದಿಂದ ಪ್ರಥಮವಾಗಿ ಕೃಷ್ಣ ವೇಣೆ ಎಂಬ ವಿದ್ಯಾರ್ಥಿನಿ ತೇರ್ಗಡೆಯಾಗಿರುವುದು ಗ್ರಾಮಕ್ಕೆ ಕಿರೀಟ ತಂದಂತಾಗಿದೆ.

    ಖಾಕಿ ಅಭಿನಂದನೆ: ಕೃಷ್ಣವೇಣಿ ತೇರ್ಗಡೆ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪಾಂಡಿ ಗಂಗಾಧರ್, ಡಂಕಣಿಕೋಟೆ ಡಿಎಸ್‌ಪಿ ಸಂಗೀತಾ ಸೇರಿ ಕೆಲಮಂಗಳ ಠಾಣೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಕೃಷ್ಣವೇಣಿಯನ್ನು ಅಭಿನಂದಿಸಿದ್ದಾರೆ. ಅವರ ಕುಟುಂಬಕ್ಕೆ ಉಚಿತವಾಗಿ ಅಕ್ಕಿ, ಸೇರಿ ಗೃಹೋಪಯೋಗಿ ವಸ್ತುಗಳನ್ನು ನೀಡಿ ಗೌರವಿಸಿದ್ದಾರೆ. ಗ್ರಾಮಕ್ಕೆ ಕೃಷ್ಣವೇಣಿ ಮಾದರಿಯಾಗಿದ್ದಾಳೆ. ಎಲ್ಲರೂ ಶಿಕ್ಷಣದ ಮಹತ್ವ ಅರಿಯಬೇಕು. ಮಕ್ಕಳನ್ನು ಶಾಲೆಗೆ ಸೇರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

    ಮುಂದೆಯೂ ಚೆನ್ನಾಗಿ ಓದಿ ಉನ್ನತ ಸ್ಥಾನ ಪಡೆಯಬೇಕೆಂಬುದು ನನ್ನಾಸೆ. ಶಿಕ್ಷಣಕ್ಕೆ ಬಡತನ ಅಡ್ಡಿಯಾಗಬಾರದು. ಗ್ರಾಮದಲ್ಲಿ ಅಕ್ಷರ ಕ್ರಾಂತಿಯಾಗಬೇಕು. ಎಲ್ಲರೂ ಓದಿ ವಿದ್ಯಾವಂತರಾಗಬೇಕೆಂಬುದು ನನ್ನ ಮಹದಾಸೆ.
    ಕೃಷ್ಣವೇಣಿ, ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts