More

    ಎಲ್‌ಪಿಜಿ ಇಂಡಸ್ಟ್ರಿಯಲ್ಲಿ ಅನಿಲ ಸೋರಿಕೆ!: ರಾಸಾಯನಿಕ ವಿಪತ್ತು ನಿರ್ವಹಣೆ ಕಲ್ಪಿತ ಕಾರ್ಯಾಚರಣೆ

    ಉಡುಪಿ: ಕುದಿಗ್ರಾಮದ ಎಜಿಎಸ್ ಎಲ್‌ಪಿಜಿ ಇಂಡಸ್ಟ್ರಿಯಲ್ಲಿ ಶುಕ್ರವಾರ ಬೆಳಗ್ಗೆ ಅನಿಲ ಸೋರಿಕೆಯಿಂದಾಗಿ ಸ್ಥಳೀಯ ಜನರಲ್ಲಿ ಉಸಿರಾಟದ ತೊಂದರೆ ಹಾಗೂ ಅಸ್ವಸ್ಥತೆ ಕಾಣಿಸಿಕೊಂಡಿತು.
    ತಕ್ಷಣವೇ ಇಂಡಸ್ಟ್ರೀ ಸಿಬ್ಬಂದಿ ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಘಟಕಕ್ಕೆ ಘಟನೆ ಕುರಿತು ಮಾಹಿತಿ ನೀಡಿದ್ದು, ಉಡುಪಿಯಿಂದ ಆಗಮಿಸಿದ ಅಗ್ನಿಶಾಮಕ ವಾಹನಗಳು ಪ್ಲಾಂಟ್‌ನ ಸುರಕ್ಷತೆಗೆ ನಿರ್ಮಿಸಿರುವ ಟ್ಯಾಂಕ್‌ನಿಂದ ನೀರು ಸಿಂಪಡಿಸುವ ಮೂಲಕ ಪ್ಲಾಂಟಿನ ತಾಪಮಾನ ಕಡಿಮೆಗೊಳಿಸಿ, ಅನಿಲ ಸೋರುವಿಕೆಯನ್ನು ನಿಯಂತ್ರಿಸಿದರು. ಘಟನೆಯಿಂದ ತೀವ್ರ ಉಸಿರಾಟದ ಸಮಸ್ಯೆಗೆ ಒಳಗಾದ ಮತ್ತು ಅಸ್ವಸ್ಥರಾದವರನ್ನು ಸಮೀಪದ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

    -ಇದು ನೈಜ ಘಟನೆಯಲ್ಲ. ರಾಸಾಯನಿಕ ವಿಪತ್ತು ನಿರ್ವಹಣೆಯ ಕಲ್ಪಿತ ಕಾರ್ಯಾಚರಣೆ. ಬೆಳಗ್ಗೆ 10.30ಕ್ಕೆ ಗ್ಯಾಸ್ ಪ್ಲಾಂಟ್‌ನ ಸುತ್ತಮುತ್ತಲಿನ ಪ್ರದೇಶದ ಜನರು ಹಾಗೂ ತೊಂದರೆಗೊಳಗಾದ ಪ್ರತಿಯೊಬ್ಬರನ್ನೂ ರಕ್ಷಿಸಿರುವ ಬಗ್ಗೆ ಮಾಹಿತಿ ಪಡೆದ ನಂತರ ಕಲ್ಪಿತ ಕಾರ್ಯಾಚರಣೆ ಮುಕ್ತಾಯಗೊಳಿಸಲಾಯಿತು.

    ಜಿಲ್ಲಾಧಿಕಾರಿ ಕೂರ್ಮಾರಾವ್ ಮಾತನಾಡಿ, ಜಿಲ್ಲೆಯಲ್ಲಿ ಸಂಭವಿಸಬಹುದಾದ ಯಾವುದೇ ಬಗೆಯ ವಿಪತ್ತುಗಳಿಗೆ ತಕ್ಷಣ ಸ್ಪಂದಿಸಿ ತುರ್ತು ರಕ್ಷಣಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಯಾವುದೇ ವಿಪತ್ತು ಸಂಭವಿಸಿದಾಗ ಉಚಿತ ಟೋಲ್ ಫ್ರೀ ಸಂ. 1077ಗೆ ಮಾಹಿತಿ ನೀಡಿದರೆ ಅಗತ್ಯ ಕ್ರಮ ಕೈಗೊಂಡು ಸಂಭಾವ್ಯ ಅಪಾಯ ತಪ್ಪಿಸಬಹುದಾಗಿದೆ ಎಂದರು.
    ಇನ್ಸಿಡೆಂಟ್ ಕಮಾಂಡರ್ ಆಗಿದ್ದ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಮಾತನಾಡಿ, ದುರಂತ ಸ್ಥಳದಲ್ಲಿನ ನೈಸರ್ಗಿಕ ಪರಿಸ್ಥಿತಿ ಅರಿತು ಕಾರ್ಯಾಚರಣೆ ಕೈಗೊಂಡಲ್ಲಿ ವಿಕೋಪವನ್ನು ಹತೋಟಿಗೆ ತರಲು ಸಾಧ್ಯ. ಅಲ್ಲಿನ ಗಾಳಿ ಬೀಸುವಿಕೆಯ ದಿಕ್ಕು, ಘಟನಾ ಸ್ಥಳಕ್ಕೆ ಹೋಗುವ ರಸ್ತೆ ಮಾರ್ಗ, ಸ್ಥಳೀಯವಾಗಿ ಮನೆಗಳ ಗುರುತಿಸುವಿಕೆಯಿಂದ ದುರಂತದ ನಿರ್ವಹಣೆ ಸಾಧ್ಯ ಎಂದರು.
    ಕುದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಶೆಟ್ಟಿ, ಉಪಾಧ್ಯಕ್ಷ ಸದಾನಂದ ಪ್ರಭು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts