More

    ಕುರಿಗಾಹಿ ಕುಟುಂಬದ ಯುವತಿ ಆರಕ್ಷಕಿ

    ಚಿಕ್ಕಮಗಳೂರು: ತರಬೇತಿಯಲ್ಲಿ ಪಟ್ಟ ಶ್ರಮ, ನಿಷ್ಠೆಯನ್ನು ಕರ್ತವ್ಯದಲ್ಲೂ ತೋರಿಸಿದಾಗ ಜೀವನದಲ್ಲಿ ಯಶಸ್ಸು ನಿಶ್ಚಿತ ಎಂದು ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ದೇವಜ್ಯೋತಿ ರೇ ಹೇಳಿದರು.

    ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಗುರುವಾರ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಿಂದ ಆಯೋಜಿಸಿದ್ದ 13ನೇ ತಂಡದ ( 4ನೇ ಮಹಿಳಾ) ಪೊಲೀಸ್ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

    8 ತಿಂಗಳ ಕಾಲ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅತಿಥಿ ಉಪನ್ಯಾಸಕರ ಸಲಹೆ, ಮಾರ್ಗದರ್ಶನದಿಂದ ಇಂಥ ಉತ್ತಮ ತರಬೇತಿ ಹೊಂದಲು ಸಾಧ್ಯವಾಗಿದೆ. ಇಲಾಖೆಯಲ್ಲಿ ಕೆಲಸ ಮಾಡುವ ಸಂದರ್ಭ ಕೆಲವೊಮ್ಮೆ ಕಷ್ಟ ಮತ್ತೆ ಕೆಲವೊಮ್ಮೆ ಸಂತೋಷ ಸೇರಿದಂತೆ ಅನೇಕ ರೀತಿ ಅನುಭವಗಳನ್ನು ಹೊಂದುತ್ತೀರಿ ಎಂದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ಮಾತನಾಡಿ, ಡಿಎಆರ್​ನಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಂಡು ಒಳಾಂಗಣ ಹಾಗೂ ಹೊರಾಂಗಣದ ವಿಷಯದಲ್ಲಿ ಉತ್ತಮವಾದ ತರಬೇತಿ ಪಡೆದಿದ್ದೀರಿ. ಮುಂದೆ ಕರ್ತವ್ಯ ನಿರ್ವಹಿಸುವ ಸಂದರ್ಭ ಠಾಣೆಗೆ ಭೇಟಿ ನೀಡುವ ಎಲ್ಲರಿಗೂ ನಿಸ್ಪಕ್ಷಪಾತ ಸೇವೆ ಸಲ್ಲಿಸುತ್ತೀರೆಂಬ ವಿಶ್ವಾಸವಿದೆ ಎಂದರು.

    ತರಬೇತಿ ವೃತ್ತಿ ಜೀವನಕ್ಕೆ ಅಡಿಪಾಯವಾಗಿದೆ. ಮುಂದೆ ಇಲಾಖೆಗೆ ಸಂಬಂಧಪಟ್ಟ ಅಥವಾ ಇಷ್ಟವಿರುವ ವಿಷಯಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರೆ ಉನ್ನತಸ್ಥಾನಕ್ಕೇರಲು ಹೆಚ್ಚು ಸಹಕಾರಿಯಾಗುತ್ತದೆ ಎಂದರು.

    ತರಬೇತಿ ಶಾಲಾ ಪ್ರಾಚಾರ್ಯು ಎಸ್.ಎನ್.ಶ್ರುತಿ ತರಬೇತಿ ಕುರಿತ ವರದಿ ನೀಡಿದರು. ಪರೇಡ್ ಕಮಾಂಡೆಂಟ್ ಎಸ್.ವೈ.ಸಹದೇವ್, ಉಪ ಕಮಾಂಡೆಂಟ್ ಕೆ.ಎಸ್.ಚಿದಾನಂದ್ ಕವಾಯತು ನೇತೃತ್ವ ವಹಿಸಿದ್ದರು. ಎಆರ್​ಎಸೈ ಎಚ್.ಸಿ.ಶಿವಪ್ಪ, ನಾಗರಾಜ್ ತಂಡ ಬ್ಯಾಂಡ್ ವಾದನ ನುಡಿಸಿದರು.

    ಡಿವೈಎಸ್​ಪಿ ಡಿ.ಟಿ.ಪ್ರಭು, ವೃತ್ತನಿರೀಕ್ಷಕ ವಿನೋದ್ ಭಟ್, ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ, ನರೇಂದ್ರ ಪೈ, ವಕೀಲ ರಾಘವೇಂದ್ರ ರಾಯ್ಕರ್, ಹಾಲಮ್ಮ, ರಾಕೇಶ್ ಇದ್ದರು.

    ವಿವಿಧ ಜಿಲ್ಲೆಗಳ 67 ಪ್ರಶಿಕ್ಷಣಾರ್ಥಿಗಳು : ಬಾಗಲಕೋಟೆ, ಬೀದರ್, ಬಳ್ಳಾರಿ, ದಾವಣಗೆರೆ, ಬೆಂಗಳೂರು, ಚಿಕ್ಕಮಗಳೂರು, ರಾಯಚೂರು ಸೇರಿದಂತೆ ರಾಜ್ಯದ 20 ಜಿಲ್ಲೆಗಳ 67 ಪ್ರಶಿಕ್ಷಣಾರ್ಥಿಗಳು ನಾಲ್ಕು ತುಕಡಿಗಳಲ್ಲಿ ನಡೆಸಿಕೊಟ್ಟ ಪಥಸಂಚಲನದಲ್ಲಿ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದ ದೃಶ್ಯ ನೋಡುಗರ ಗಮನ ಸೆಳೆಯಿತು. ಕುರಿಗಾಹಿಗಳು, ಕೂಲಿ ಕಾರ್ವಿುಕರು, ರೈತರ ಮಕ್ಕಳು ಸಮವಸ್ತ್ರ ತೊಟ್ಟು ಪಥಸಂಚಲನದಲ್ಲಿ ಹೆಜ್ಜೆಹಾಕುತ್ತ ಶಿಸ್ತಿನಿಂದ ಸಾಗುತ್ತಿದ್ದರೆ, ಅವರ ಪಾಲಕರು, ಸಂಬಂಧಿಕರು ಪ್ರೇಕ್ಷಕರ ಸಾಲಿನಿಂದಲೇ ಮೊಬೈಲ್​ನಲ್ಲಿ ಚಿತ್ರೀಕರಿಸುತ್ತ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಸಂಭ್ರಮಿಸಿದರು.

    ಬಹುಮಾನ ವಿಜೇತರು: ಧಾರವಾಡ ಜಿಲ್ಲೆ ಅದರಗುಂಚಿ ಶಾಹಿನಾಭಾನು (ಬೆಸ್ಟ್ ಆಲ್​ರೌಂಡರ್). ಒಳಾಂಗಣ, ಹೊರಾಂಗಣ, ಫೈರಿಂಗ್ ವಿಭಾಗ: ರಾಯಚೂರು ಜಿಲ್ಲೆ ದೇವದುರ್ಗದ ಸುಮಂಗಲಾ, ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಭಾರತಿ, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಲಾವಣ್ಯ, ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಶ್ವೇತಾ, ಕಲಬುರಗಿ ಜಿಲ್ಲೆ ಚಿತ್ತಾಪುರದ ಲಕ್ಷ್ಮೀಗುತ್ತೇದಾರ, ಬೆಂಗಳೂರಿನ ಹೊಸಗುಡ್ಡದಹಳ್ಳಿ ನಾಗವೇಣಿ, ಹಾವೇರಿ ಜಿಲ್ಲೆ ಎತ್ತಿನಹಳ್ಳ ಜ್ಯೋತಿಕಲಾ

    ಕುರಿಗಾಹಿ ಕುಟುಂಬದ ಯುವತಿ ಆರಕ್ಷಕಿ: ನಾನು ಕುರಿಗಾಹಿ ಕುಟುಂಬದವನು. ಮಗಳನ್ನು ಸರ್ಕಾರಿ ಸೇವೆಗೆ ಕಳಿಸಬೇಕೆಂಬ ತುಡಿತವಿತ್ತು. ಮಗಳಿಗೆ ಜನರ ಸುರಕ್ಷತೆ ಕಾಯುವ ಕೆಲಸ ಸಿಕ್ಕಿದೆ ಎಂದು ಚಿಕ್ಕೋಡಿ ಮಲ್ಲಪ್ಪ ಹೆಮ್ಮೆಯಿಂದ ಹೇಳಿದರು. ಪಾಲಕರು ಕಷ್ಟಪಟ್ಟು ಕುರಿ ಕಾದು ಶಿಕ್ಷಣ ಕೊಡಿಸಿದ್ದಾರೆ. ಅವರ ಶ್ರಮ ವ್ಯರ್ಥವಾಗದಂತೆ ಪ್ರಾಮಾಣಿಕವಾಗಿ ಸಮಾಜಸೇವೆ ಸಲ್ಲಿಸಿ ಓದು ಮುಂದುವರಿಸಿ ಪಿಎಸ್​ಐ ಆಗಬೇಕೆಂಬ ಆಸೆಯಿದೆ ಎಂದು ಎಂ.ಎನ್.ಶಾಂತಾ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts