More

    ಅಟದ ಮೈದಾನಕ್ಕೆ ಪಕ್ಕಾ ಪೋಡಿ

    ಬಣಕಲ್: ಬಣಕಲ್ ಗ್ರಾಮದ ಸರ್ವೆ ನಂ 353 ಆಟದ ಮೈದಾನವನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಕ್ಕಾ ಪೋಡಿ ಬದಲಾಯಿಸುವಂತೆ ಒತ್ತಾಯಿಸಿ ಮಂಗಳವಾರ ಬಣಕಲ್ ಬಂದ್ ನಡೆಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

    ಮಂಗಳವಾರ ಬೆಳಗ್ಗೆಯಿಂದ ಸಂಜೆ 6 ಗಂಟೆಯವರೆಗೆ ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು ಮುಚ್ಚಿ ಬಂದ್​ಗೆ ಬೆಂಬಲ ನೀಡಿದರು. ಬೆಳಗ್ಗೆ 9 ಗಂಟೆಗೆ ಪೆಟ್ರೋಲ್ ಬಂಕ್​ನಿಂದ ಪ್ರತಿಭಟನಾ ಮೆರವಣಿಗೆ ಹೊರಟು ಮುಖ್ಯ ಬೀದಿಗಳಲ್ಲಿ ಸಾಗಿ ಆಟದ ಮೈದಾನದಲ್ಲಿ ಧರಣಿ ನಡೆಸಲಾಯಿತು.

    ಧರಣಿ ನಿರತ ಸ್ಥಳಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಎಂಎಲ್ಸಿ ಎಂ.ಕೆ.ಪ್ರಾಣೇಶ್, ಎಸ್ಪಿ ಎಚ್.ಎಂ.ಅಕ್ಷಯ್ ಭೇಟಿ ನೀಡಿ ಮಾತುಕತೆ ನಡೆಸಿದರು.

    ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, 1994 ರಲ್ಲಿ ಗ್ರಾಪಂನಿಂದ ಪೊಲೀಸ್ ಇಲಾಖೆಗೆ 2 ಎಕರೆ ಜಾಗ ನೀಡಲಾಗಿದೆ. ಆ ಜಾಗದಲ್ಲಿ ಪೊಲೀಸ್ ವಸತಿ ಗೃಹವನ್ನು ಹಲವು ವರ್ಷದ ಹಿಂದೆಯೇ ನಿರ್ವಿುಸಲಾಗಿದೆ. ಈ ಹಿಂದೆ ಕಟ್ಟಡ ನಿರ್ವಿುಸಿದ್ದ ಜಾಗವನ್ನೂ ಸೇರಿಸಿ ಪೋಡಿ ಮಾಡುವ ಬದಲು ಕಟ್ಟಡ ಇರುವ ಜಾಗ ಬಿಟ್ಟು ಹೊಸದಾಗಿ ಪಕ್ಕದ ಜಾಗ ಸೇರಿಸಿ ಪೋಡಿ ಮಾಡಲಾಗಿದೆ. ಈ ಜಾಗದಲ್ಲಿ ಆಟದ ಮೈದಾನವೂ ಸೇರಿದೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

    ಎಂಎಲ್ಸಿ ಎಂ.ಕೆ.ಪ್ರಾಣೇಶ್ ಮಾತನಾಡಿ, ಜ.20ರಂದು ಗೃಹ ಸಚಿವರು ಮತ್ತು ಐಜಿ ಅವರನ್ನು ಭೇಟಿ ನೀಡಿ ಸಾರ್ವಜನಿಕರ ಉಪಯೋಗಕ್ಕಾಗಿ ಕ್ರೀಡಾಂಗಣ ಉಳಿಸಿಕೊಳ್ಳಲು ಮಾತುಕತೆ ನಡೆಸಲಾಗುವುದು ಎಂದರು.

    ಎಸ್ಪಿ ಎಚ್.ಎಂ.ಅಕ್ಷಯ್ ಮಾತನಾಡಿ, ಆಟದ ಮೈದಾನದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು. ಪ್ರಸ್ತುತ ಆಟದ ಮೈದಾನದಲ್ಲಿ ಸಾರ್ವಜನಿಕರ ಬಳಕೆಗೆ ಯಾವುದೆ ನಿರ್ಬಂಧವಿಲ್ಲ ಎಂದು ಹೇಳಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಎಂ.ಕೆ.ಪ್ರಾಣೇಶ್, ನೀವು ಜಿಲ್ಲೆಯಲ್ಲಿ ಇರುವವರೆಗೆ ಸಾರ್ವಜನಿಕರ ಬಳಕೆಗೆ ಮೈದಾನ ಮುಕ್ತವಾಗಿರಬಹುದು. ನಂತರ ಬರುವ ಎಸ್ಪಿಗಳು ಸಾರ್ವಜನಿಕರಿಗೆ ಆಟದ ಮೈದಾನ ಬಳಕೆ ಅವಕಾಶ ನೀಡುತ್ತಾರೆ ಎಂಬ ಭರವಸೆ ಇಲ್ಲ. ಆದ್ದರಿಂದ ಆಟದ ಮೈದಾನದ ಪಕ್ಕಾ ಪೋಡಿ ಆದರೆ ಆಟದ ಮೈದಾನ ಸಾರ್ವಜನಿಕರ ಬಳಕೆಗೆ ಯಾವುದೆ ಸಮಸ್ಯೆಯಾಗುವುದಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts