More

    ಮನೆಗಳಿಗೆ ಶೀಘ್ರದಲ್ಲಿಯೇ ಬರಲಿದೆ ಶುದ್ಧ ನೀರು : ಶಾಸಕ ಜ್ಯೋತಿಗಣೇಶ್

    ತುಮಕೂರು: 200ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ 24/7 ನೀರು ಪೂರೈಕೆ ಯೋಜನೆಗೆ ಶೀಘ್ರದಲ್ಲಿಯೇ ಚಾಲನೆ ಸಿಗಲಿದ್ದು, ನೀರು ಶೇಖರಣೆಗೆ ಕ್ರಮವಹಿಸಲಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

    ಬುಧವಾರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ನೀರು ಪೂರೈಸಲು 44 ಒವರ್‌ಹೆಡ್ ಟ್ಯಾಂಕ್‌ಗಳ ನಿರ್ಮಾಣವಾಗಿದ್ದು, ಎಲ್ಲರಿಗೂ ಸಕಾಲದಲ್ಲಿಯೂ ಶುದ್ಧನೀರು ಪೂರೈಕೆಯಾಗಿದೆ ಎಂದರು.

    ಮನೆಗಳಿಗೆ ಶುದ್ಧ ನೀರು ಬರಲಿದ್ದು, ಶುದ್ಧ ನೀರಿನ ಘಟಕಗಳ ಅವಶ್ಯಕತೆ ಇರುವುದಿಲ್ಲ, ಒಂದು ಸಾವಿರ ಲೀಟರ್‌ಗೆ 8 ರೂ. ನಿಗದಿಯಾಗಬಹುದು, ಸೆಮಿ ಕಮರ್ಷಿಯಲ್, ಕಮರ್ಷಿಯಲ್ಗೆ ಇದರ ಮೂರು ಪಟ್ಟು ವಿಧಿಸಬಹುದು ಎಂದರು. ನಗರ ನೀರು ಸರಬರಾಜು ಸಂರ್ಪೂಣ ಬುಗುಡನಹಳ್ಳಿ ಕೆರೆಯ ನೀರು ಅವಲಂಬಿಸಲಿದೆ, ಹೆಬ್ಬಾಕ ಕೆರೆಯಲ್ಲಿ ಕೈಗಾರಿಕಾ ಉದ್ದೇಶಕ್ಕೆ ನೀಡುತ್ತೇವೆ, ತುಮಕೂರು ಅಮಾನಿಕೆರೆಯಲ್ಲಿ ನಾಲ್ಕು ಕಂಪಾರ್ಟ್ ಮೆಂಟ್‌ನಲ್ಲಿ ನೀರು ಶೇಖರಣೆಗೆ ಕಾಮಗಾರಿ ನಡೆಯುತ್ತಿದೆ ಎಂದರು.

    ನಗರದಲ್ಲಿ ಆಸ್ತಿಯ ಭೌಗೋಳಿಕ ಮಾಹಿತಿ ಆಧಾರಿತಿ ಆಸ್ತಿ ಮಾಹಿತಿ ವ್ಯವಸ್ಥೆ ಜಾರಿಯಾಗಿದ್ದು, ಎಲ್ಲ ವಾಣಿಜ್ಯ ಕಟ್ಟಡಗಳು ತೆರಿಗೆಯ ವ್ಯಾಪ್ತಿಗೆ ಬರಲಿದೆ. ಪಾಲಿಕೆಗೆ ಆದಾಯ ಹೆಚ್ಚಿಸುವ ಅವಶ್ಯಕತೆಯಿದ್ದು, ರಾಜ್ಯಾದ್ಯಂತ ಇದು ಜಾರಿಯಾಗಿದೆ ಎಂದರು.

    ಸರ್ವೇಗೆ ಸರ್ಕಾರ ಒಪ್ಪಿಗೆ ನೀಡಿದ್ದು, ಎಲ್ಲರ ಆಸ್ತಿಯೂ ನಿಖರವಾಗಿ ತಿಳಿಯಲಿದೆ, ಪಾಲಿಕೆಗೂ ಆದಾಯ ಬರಲಿದೆ. ನಗರವಾಸಿಗಳು ಅಸಮಧಾನಗೊಂಡರೂ ಪಾರದರ್ಶಕ ಆಡಳಿತದ ಕಾರಣಕ್ಕೆ ಇದು ಅನಿವಾರ್ಯ ಎಂದರು. ನಗರ ವ್ಯಾಪ್ತಿಯಲ್ಲಿ ಅಗತ್ಯವಿರುವ ಅಂಗನವಾಡಿ ಕಟ್ಟಡಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಿರ್ಮಿಸಲು ಒಪ್ಪಿಗೆ ನೀಡಿದ್ದು ಆಯಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆ ಆವರಣದಲ್ಲಿಯೇ ಕಟ್ಟಡ ನಿರ್ಮಾಣವಾಗಲಿದೆ ಎಂದರು.

    ಸರ್ಕಾರಿ ಮಹಿಳಾ ಪದವಿ ಕಾಲೇಜು ನಿರ್ಮಿಸಲು ಅಗತ್ಯ ಭೂಮಿಯನ್ನು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಹಳೆಯ ಕಟ್ಟಡದ ಜಾಗದಲ್ಲಿಯೇ ನೀಡಲು ಸಚಿವ ಸುರೇಶ್‌ಕುಮಾರ್ ಒಪ್ಪಿಗೆ ನೀಡಿದ್ದು, ಉನ್ನತ ಶಿಕ್ಷಣ ಇಲಾಖೆ ಸುಸಜ್ಜಿತ ಕಟ್ಟಡ
    ನಿರ್ಮಿಸಲಿದೆ ಎಂದರು.

    ಜೂನಿಯರ್ ಕಾಲೇಜು ಮೈದಾನದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಗ್ರಿಲ್ ಕಾಂಪೌಂಡ್ ನಿರ್ಮಾಣವಾಗಲಿದೆ, ಕ್ರೀಡಾ ಸಂಕೀರ್ಣದಲ್ಲಿ ವಾಲಿಬಾಲ್, ಖೋಖೋ, ಕಬ್ಬಡಿ, ಬ್ಯಾಡ್ಮಿಂಟನ್ ಕೋರ್ಟ್‌ಗಳು ತಲೆ ಎತ್ತಲಿವೆ ಎಂದರು.

    ನಗರದಲ್ಲಿ ಬಹುತೇಕ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದು ಸತ್ಯ, ಭವಿಷ್ಯದಲ್ಲಿ ಒತ್ತುವರಿದಾರರಿಗೆ ತೊಂದರೆಯಾಗಲಿದೆ. ನಗರದ ಅಭಿವೃದ್ಧಿಗೂ ಇದರಿಂದ ತೊಂದರೆಯಾಗಲಿದೆ, ಸಾರ್ವಜನಿಕ ಆಸ್ತಿ ರಕ್ಷಣೆ ನಮ್ಮೆಲ್ಲರ ಹೊಣೆ.
    ಜಿ.ಬಿ.ಜ್ಯೋತಿಗಣೇಶ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts