More

    ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ: ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಅಸಮಾಧಾನ

    ಮಂಡ್ಯ: ಮೇಲುಕೋಟೆ ಕ್ಷೇತ್ರದ ನಾರಾಯಣಪುರದಲ್ಲಿ ಮತದಾನ ನಡೆಯುವ ವೇಳೆ ನಾನು ಯಾರ ಮೇಲೆಯೂ ಹಲ್ಲೆ ನಡೆಸಿಲ್ಲ. ವ್ಯಕ್ತಿಯೊಬ್ಬರ ಮೇಲೆ ಕೆ.ಆರ್.ಪೇಟೆ ತಾಲೂಕು ಮರುವನಹಳ್ಳಿ ಗ್ರಾಮದ ರೌಡಿಶೀಟರ್ ರಘು ಎಂಬಾತ ಹಲ್ಲೆ ಮಾಡುತ್ತಿದ್ದನು. ಆ ಸಂದರ್ಭ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಲಾಯಿತು. ಆದರೆ ಇದನ್ನೇ ರೈತ ಸಂಘ ವಿಡಿಯೋ ಮೂಲಕ ತಪ್ಪಾಗಿ ಬಿಂಬಿಸುವ ಯತ್ನ ಮಾಡಿದೆ ಎಂದು ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಅಸಮಾಧಾನ ವ್ಯಕ್ತಪಡಿಸಿದರು.
    ನಾನು ನಾರಾಯಣಪುರ ಗ್ರಾಮದ ಬೂತ್ ಬಳಿ ಹೋದಾಗ ಮಹಿಳೆಯೊಬ್ಬರು ನನ್ನ ಮಗನನ್ನು ಹೊಡೆಯುತ್ತಿದ್ದಾರೆ ಎಂದು ಹೇಳಿದರು. ಆ ಸಮಯದಲ್ಲಿ ನಾನು ಮತ್ತು ನನ್ನ ಅಂಗರಕ್ಷಕ ರಮೇಶ್ ಅವರು ಮಧ್ಯೆ ಪ್ರವೇಶಿಸಿ ರೌಡಿಶೀಟರ್‌ನನ್ನು ಹಿಡಿದು ಪೊಲೀಸರಿಗೊಪ್ಪಿಸಿದೆವು. ಇದನ್ನೇ ರೈತ ಸಂಘದ ಕಾರ್ಯಕರ್ತರು ಹಾಗೂ ಕೆಲ ಮಾಧ್ಯಮಗಳು ವಿಡಿಯೋ ಮಾಡಿ ತಪ್ಪಾಗಿ ಬಿಂಬಿಸಿವೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
    ರೌಡಿಶೀಟರ್ ರಘುನನ್ನು ಗಡಿಪಾರು ಮಾಡಿ ಎಂದು ಪೊಲೀಸ್ ಇಲಾಖೆಗೆ ಹಿಂದೆಯೇ ತಿಳಿಸಿದ್ದೆ. ಆದರೂ ಗಡಿಪಾರು ಮಾಡಿಲ್ಲ. ರೈತ ಸಂಘ ಹಾಗೂ ದರ್ಶನ್ ಪುಟ್ಟಣ್ಣಯ್ಯ ಅವರು ಇಂತಹ ರೌಡಿಗಳನ್ನು ಮುಂದಿಟ್ಟುಕೊಂಡು ಚುನಾವಣೆ ನಡೆಸಿದ್ದಾರೆ. ಅವರ ತಂದೆ ಮತ್ತು ನಾನು ಹಲವು ಚುನಾವಣೆಗಳನ್ನು ಎದುರಿಸಿದ್ದೇವೆ. ಇಬ್ಬರೂ ಚುನಾವಣೆಗಳನ್ನು ಸ್ಫೂರ್ತಿಯಾಗಿ ನಡೆಸಿ ಸೋತರೂ-ಗೆದ್ದರೂ ಅನ್ಯೋನ್ಯವಾಗಿದ್ದೆವು. ಆದರೆ, ದರ್ಶನ್ ಅವರು ಇಂತಹ ವ್ಯಕ್ತಿಗಳ ಸಹವಾಸ ಏಕೆ ಮಾಡಿದ್ದಾರೋ ಗೊತ್ತಿಲ್ಲ. ವಿದ್ಯಾವಂತರು ಹಾಗೂ ವಿದೇಶದಲ್ಲಿ ಉದ್ಯಮ ಮಾಡುತ್ತಿದ್ದವರಿಗೆ ಇದು ಗೊತ್ತಾಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಜನತೆ ಮೇ.10ರಂದೇ ಫಲಿತಾಂಶ ಬರೆದಾಗಿದೆ. 13ರಂದು ಅದು ಹೊರಬೀಳಲಿದೆ. ಸೋತರು-ಗೆದ್ದರೂ ನಾವೆಲ್ಲ ಒಗ್ಗಟ್ಟಾಗಿ ಇರಬೇಕು. ನಾವು ಬೆಂಕಿ ಹಚ್ಚಿದರೆ ಜನತೆ ಕಷ್ಟಪಡಬೇಕಾಗುತ್ತದೆಯೇ ಹೊರತು ನಾವಲ್ಲ. ಇದನ್ನರಿತು ದರ್ಶನ್ ಪುಟ್ಟಣ್ಣಯ್ಯ ಅವರು ಕೆಟ್ಟ ವ್ಯಕ್ತಿಗಳನ್ನು ದೂರ ಇಡುವುದು ಸೂಕ್ತ ಎಂದು ಸಲಹೆ ನೀಡಿದರು.
    ಚಿನಕುರಳಿಯಲ್ಲೂ ಸುಳ್ಳು ಸುದ್ದಿ: ಇನ್ನು ಚಿನಕುರಳಿ ಗ್ರಾಮದ ಮತಗಟ್ಟೆಯ ಬಳಿ ಸಂಜೆ 5.30ರ ಸುಮಾರಿಗೆ ಆಗಮಿಸಿದ ದರ್ಶನ್ ಪುಟ್ಟಣ್ಣಯ್ಯ ಮತದಾನ ಮುಗಿದ ಒಂದು ಗಂಟೆಯವರೆಗೂ ಸಹ ಮತಗಟ್ಟೆಯ ಮುಂಭಾಗದಲ್ಲಿಯೇ ಕುಳಿತುಕೊಂಡಿದ್ದಾರೆ. ಅಷ್ಟರಲ್ಲಿ ರೈತಸಂಘದ ಕಾರ್ಯಕರ್ತರು ಚಿನಕುರಳಿ ಗ್ರಾಮದಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಜೆಡಿಎಸ್‌ನವರು ಹಿಡಿದು ಕೂರಿಸಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಿ ತಾಲೂಕಿನ ವಿವಿಧ ಗ್ರಾಮಗಳಿಂದ ಚಿನಕುರಳಿ ಗ್ರಾಮಕ್ಕೆ ನೂರಾರು ರೈತಸಂಘದ ಕಾರ್ಯಕರ್ತರನ್ನು ಕರೆಸಿಕೊಂಡಿದ್ದಾರೆ. ಮಾತ್ರವಲ್ಲದೆ ನಮ್ಮ ವಿರುದ್ಧ ಘೋಷಣೆ ಕೂಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಜೆಡಿಎಸ್ ಕಾರ್ಯಕರ್ತರು ಪಕ್ಷದ ಟವಲ್‌ನ್ನು ಗಾಳಿಯಲ್ಲಿ ಬೀಸಿ ಘೋಷಣೆ ಮೊಳಗಿಸಿದ್ದಾರೆ ಎಂದು ವಿವರಿಸಿದರು.
    ಘಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಪೊಲೀಸರು ಎರಡು ಗುಂಪುಗಳ ಮೇಲೆ ಲಾಠಿ ಬೀಸಿದ್ದಾರೆ. ಸ್ಥಳದಲ್ಲಿಯೇ ಇದ್ದ ನನ್ನ ಅಣ್ಣನ ಮಕ್ಕಳಾದ ಸಿ.ಶಿವಕುಮಾರ್, ಸಿ.ಅಶೋಕ್ ಅವರು ನಮ್ಮ ಕಾರ್ಯಕರ್ತರನ್ನು ಸಮಾಧಾನ ಮಾಡಿದ್ದಾರೆ. ಬಳಿಕ ದರ್ಶನ್ ಪುಟ್ಟಣ್ಣಯ್ಯ ಸ್ಥಳದಿಂದ ತೆರಳಿದ್ದಾರೆ. ಸೋಲಿನ ಭೀತಿಯಿಂದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರು ಗ್ರಾಮದಲ್ಲಿ ಗಲಭೆ ಸೃಷ್ಟಿಸಿ ಅಶಾಂತಿ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದಲೇ ರೈತಸಂಘದ ಕಾರ್ಯಕರ್ತರನ್ನು ಚಿನಕುರಳಿಗೆ ಕರೆಸಿ ಗಲಾಟೆ ನಡೆಸಿರಬಹುದು ಎಂದು ದೂರಿದರು.
    ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಶಿವಳ್ಳಿ ಜೆಡಿಎಸ್ ಮುಖಂಡ ಅಣ್ಣೇಗೌಡ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts