More

    ಶಾಸಕ ಎಸ್.ಅಂಗಾರ ತೀವ್ರ ಅಸ್ವಸ್ಥ

    ಮಂಗಳೂರು/ಕಡಬ: ಸುಳ್ಯ ಶಾಸಕ ಎಸ್.ಅಂಗಾರ ದಿಢೀರ್ ಅಸ್ವಸ್ಥರಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ಶುಕ್ರವಾರ ಬೆಳಗ್ಗೆ ಕಡಬದಲ್ಲಿ ಕರೊನಾ ಮುನ್ನೆಚ್ಚರಿಕೆ ಸಂಬಂಧಿಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿದ ಶಾಸಕರು ಬಳಿಕ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸಭಾಂಗಣದಲ್ಲಿ ಪಡಿತರ ವಿತರಣಾ ವ್ಯವಸ್ಥೆ ಕುರಿತು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ತೀವ್ರ ಬಳಲಿದಂತೆ ಕಂಡುಬಂದ ದಿಢೀರ್ ಅಸ್ವಸ್ಥಗೊಂಡರು. ತಕ್ಷಣ ಸರ್ಕಾರಿ ವೈದ್ಯರನ್ನು ಅಲ್ಲಿಗೆ ಕರೆಸಿ ಪರೀಕ್ಷೆಗೆ ಒಳಪಡಿಸಲಾಯಿತು. ರಕ್ತದ ಒತ್ತಡ ತೀರ ಕಡಿಮೆಯಾಗಿರುವುದು ಕಂಡುಬಂತು. ತಕ್ಷಣ ಮಂಗಳೂರಿನ ತಜ್ಞ ವೈದ್ಯರನ್ನು ಸಂಪರ್ಕಿಸಲಾಯಿತು. ಪುತ್ತೂರಿನಲ್ಲಿ ತುರ್ತು ಚಿಕಿತ್ಸೆ ನೀಡಿ ಮಂಗಳೂರಿಗೆ ಕರೆ ತರುವಂತೆ ವೈದ್ಯರು ಸಲಹೆ ನೀಡಿದರು.

    ಸ್ಥಳೀಯ ಬಿಜೆಪಿ ನಾಯಕರಾದ ಕೃಷ್ಣ ಶೆಟ್ಟಿ, ರಮೇಶ ಕಲ್ಪುರೆ ಮುಂತಾದವರು ಶಾಸಕರನ್ನು ಪುತ್ತೂರಿಗೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಿದರು. ಬಳಿಕ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದರು. ಅರೆ ಪ್ರಜ್ಞಾವಸ್ಥೆಯಲಿದ್ದ ಶಾಸಕರಿಗೆ ಹೃದಯಾಘಾತವಾಗಿದೆ ಎಂದು ಶಂಕಿಸಲಾಗಿತ್ತು. ಆದರೆ ಹೃದಯಕ್ಕೆ ಸಂಬಂಧಿಸಿ ಯಾವುದೇ ಸಮಸ್ಯೆ ಇಲ್ಲ. ಉದರಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಅಸ್ವಸ್ಥತೆ ಉಂಟಾಗಿದೆ. ರಕ್ತದೊತ್ತಡ ನಿಧಾನಕ್ಕೆ ಸಹಜ ಸ್ಥಿತಿಗೆ ಬರುತ್ತಿದೆ. ಯಾವುದೆ ರೀತಿಯ ಆತಂಕ ಇಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

    ಆರೋಗ್ಯ ವಿಚಾರಿಸಿದ ಸಿಎಂ: ಅಂಗಾರ ಅವರು ಅಸ್ವಸ್ಥರಾದ ಸುದ್ದಿ ತಿಳಿದ ತಕ್ಷಣ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಸಂಬಂಧಿಸಿ ಸಿದ್ಧತೆ ನಡೆಸಲು ಸೂಚಿಸಿದರು. ಶಾಸಕರಾದ ಸಂಜೀವ ಮಠಂದೂರು, ವೇದವ್ಯಾಸ ಕಾಮತ್ ಜತೆಗಿದ್ದರು. ಮಾಹಿತಿ ದೊರೆತ ತಕ್ಷಣ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಥಳೀಯ ಬಿಜೆಪಿ ನಾಯಕರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ವೈದ್ಯಕೀಯ ವರದಿಗಳನ್ನು ತಕ್ಷಣ ಮುಖ್ಯಮಂತ್ರಿ ಕಚೇರಿಗೆ ಕಳುಹಿಸುವಂತೆ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts