More

    ಹೋದ ಜೀವ ತರಲು ಆಗದು ; ಹೆತ್ತವರ ದುಃಖಕ್ಕೆ ಮರುಗಿದ ಸಚಿವ ಬಿ.ಸಿ.ನಾಗೇಶ್ ; ಮೃತ ಚಂದನ್ ಕುಟುಂಬಕ್ಕೆ 1 ಲಕ್ಷ ರೂ., ಪರಿಹಾರ ಚೆಕ್

    ತುಮಕೂರು : ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಸ್ತಂಭ ನಿಲ್ಲಿಸುವಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟ ಬಾಲಕನ ಮನೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

    ಕೋರಾ ಹೋಬಳಿ ಕರೀಕೆರೆ ಗ್ರಾಮಕ್ಕೆ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿದ ನಾಗೇಶ್ ಅವರು, ಮೃತ ಬಾಲಕ ಚಂದನ್ ಪಾಲಕರಿಗೆ 1 ಲಕ್ಷ ರೂ., ಪರಿಹಾರ ಚೆಕ್ ನೀಡಿದರು. ಈ ಸಂದರ್ಭದಲ್ಲಿ ಕಣ್ಣೀರಿಟ್ಟ ಚಂದನ್ ಅಜ್ಜಿ ಲಕ್ಷ್ಮೀದೇವಮ್ಮ ಅವರನ್ನು ಸಂತೈಸಲು ಪ್ರಯತ್ನಿಸಿದಾಗ ಹೆತ್ತವರ ದುಃಖದ ಕಟ್ಟೆ ಒಡೆಯುತ್ತಿದ್ದಂತೆ ಸಚಿವರ ಕಣ್ಣಾಲಿಗಳು ಒದ್ದೆಯಾದವು.

    ಮಗನನ್ನು ತಂದ್ಕೊಡೊಕೆ ಆಗೋಲ್ಲ: ಏನೇ ಪರಿಹಾರ ಕೊಟ್ಟರೂ, ಅವರ ಮಗನ ಜೀವ ತಂದುಕೊಡಲಿಕ್ಕೆ ಸಾಧ್ಯವಿಲ್ಲ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ನೋವು ನುಂಗಿಕೊಳ್ಳುವ ಶಕ್ತಿಯನ್ನು ಭಗವಂತ ಕೊಡಲಿ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಇನ್ನೂ ಹೆಚ್ಚಿನ ಪರಿಹಾರ ಹಾಗೂ ಬಾಲಕನ ತಾಯಿಗೆ ಜೀವನೋಪಾಯಕ್ಕೆ ಯಾವುದಾದರೂ ಕೆಲಸ ಕೊಡಿಸಲು ಪ್ರಯತ್ನಿಸುವುದಾಗಿ ನಾಗೇಶ್ ಭರವಸೆಯಿತ್ತರು.

    ಶಾಲೆ ಆವರಣಕ್ಕೂ ಭೇಟಿ ನೀಡಿ, ಶಾಲೆಗೆ ಮೊದಲು ಕಾಂಪೌಂಡ್ ನಿರ್ಮಿಸುವಂತೆ ಸೂಚಿಸಿದರು. ವಿದ್ಯುತ್ ತಂತಿ ಸ್ಥಳಾಂತರಿಸುವಂತೆ ಬೆಸ್ಕಾಂಗೆ ಹಲವು ಬಾರಿ ಮನವಿ ನೀಡಿದ್ದರೂ ನಿರ್ಲಕ್ಷೃವಹಿಸಿದ್ದು ಮಗುವಿನ ಪ್ರಾಣ ಹೋಗಲು ಕಾರಣವಾಗಿದೆ ಎಂದು ಗ್ರಾಮಸ್ಥರು ಸಚಿವರ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.

    ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಡಾ.ಸಿ.ಎಂ.ರಾಜೇಶ್‌ಗೌಡ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅರಕೆರೆ ರವೀಶ್, ಡಿಡಿಪಿಐ ಸಿ.ನಂಜಯ್ಯ, ಬಿಇಒ ಹನುಮಾನಾಯ್ಕ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

    ಗಾಯಾಳುಗಳ ಆರೋಗ್ಯ ವಿಚಾರಣೆ : ವಿದ್ಯುತ್ ಅವಘಡದಲ್ಲಿ ಗಾಯಗೊಂಡು ಶ್ರೀದೇವಿ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಾಂಕ್ ಹಾಗೂ ಪವನ್ ಆರೋಗ್ಯವನ್ನು ಸಚಿವ ನಾಗೇಶ್ ವಿಚಾರಿಸಿ, ಅಗತ್ಯವಿರುವ ಎಲ್ಲ ಚಿಕಿತ್ಸಾ ವೆಚ್ಚವನ್ನು ಇಲಾಖೆಯೇ ಭರಿಸಲಿದೆ ಎಂದು ತಿಳಿಸಿದರು. ಶ್ರೀದೇವಿ ಶಿಕ್ಷಣ ಸಮೂಹದ ಡಾ.ಎಂ.ಆರ್.ಹುಲಿನಾಯ್ಕರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ಸಿ.ನಂಜಯ್ಯ ಇದ್ದರು.

    ವಿದ್ಯುತ್ ತಂತಿ ಸ್ಥಳಾಂತರಿಸಲು ಕ್ರಮ: ಜಿಲ್ಲೆಯಲ್ಲಿ 508 ಶಾಲೆಗಳ ಮೇಲೆ ವಿದ್ಯುತ್ ತಂತಿ ಹಾದುಹೋಗಿರುವ ಮಾಹಿತಿ ನನಗೆ ತಿಳಿದಿದ್ದು, ಈ ಬಗ್ಗೆ ಬಾಲಕ ಸಾವನ್ನಪ್ಪಿದ ಘಟನೆ ನಡೆದ ತಕ್ಷಣವೇ ಇಂಧನ ಸಚಿವರು ಸೇರಿ ಪ್ರಧಾನ ಕಾರ್ಯದರ್ಶಿಗಳು, ಎಂಡಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದೇನೆ. ಈ ತರಹದ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಲಾಗುವುದು. ಶಾಲೆಗಳ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಸ್ಥಳಾಂತರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದರು.

    ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಬಾಲಕ ಚಂದನ್‌ನನ್ನು ಆತನ ಅಜ್ಜಿ ಕಷ್ಟಪಟ್ಟು ಸಾಕಿ ಸಲುಹಿದ್ದರು. ತಂದೆಯ ಮುಖವನ್ನೂ ನೋಡದೇ ಇದ್ದ ಬಾಲಕ ಈ ಅನಾಹುತಕ್ಕೆ ಬಲಿಯಾಗಿರುವುದು ದುಃಖ ತಂದಿದೆ. ಅಜ್ಜಿ, ಅಮ್ಮನ ದುಃಖ ನೀಗಿಸುವ ಶಕ್ತಿಯಿಲ್ಲ. ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ವ್ಯವಸ್ಥೆ ಮಾಡುತ್ತೇನೆ.
    ಬಿ.ಸಿ.ನಾಗೇಶ್ ಶಿಕ್ಷಣ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts