More

    ಮಿಶ್ರ ಬೆಳೆಯಾದ ಗಾಂಜಾ!

    ಬೆಳಗಾವಿ: ರಾಜ್ಯದಲ್ಲಿ ಸೆಲೆಬ್ರಿಟಿಗಳ ಡ್ರಗ್ಸ ರಾದ್ಧಾಂತ ಸದ್ದು ಮಾಡುತ್ತಿದ್ದರೆ, ಇತ್ತ ಬೆಳಗಾವಿ ಜಿಲ್ಲೆಯ ವಿವಿಧೆಡೆ ಬೆಳೆಗಳ ಮಧ್ಯೆ ಅಕ್ರಮ ಗಾಂಜಾ ಬೆಳೆದಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಒಂದೇ ವಾರದಲ್ಲಿ ಹಲವು ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ.

    ನಗರ ಪ್ರದೇಶಗಳಲ್ಲಿ ಅಲ್ಲಲ್ಲಿ ಮಾರಾಟಗಾರರ ಬಳಿ ಪತ್ತೆಯಾಗುತ್ತಿದ್ದ ಗಾಂಜಾ ಈಗ ರೈತರ ಹೊಲಗಳಿಗೂ ಕಾಲಿಟ್ಟಿರುವುದು ಆತಂಕ ಮೂಡಿಸಿದೆ. ಕೆಲ ರೈತರು ಕೃಷಿ ಜಮೀನಿನ ಬೆಳೆಗಳ ಮಧ್ಯೆ ನೂರಾರು ಕೆಜಿ ಗಾಂಜಾ ಗಿಡ ಬೆಳೆಯುತ್ತಿದ್ದಾರೆ. ಕೃಷಿ ಉತ್ಪನ್ನ ಸಾಗಿಸುವ ಗೂಡ್ಸ್ ವಾಹನ, ಟ್ರಾೃಕ್ಟರ್‌ಗಳಲ್ಲಿ ಗಾಂಜಾ ಕೂಡ ಗುಪ್ತವಾಗಿ ಸಾಗಣೆ ಆಗುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

    ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ರಾಯಬಾಗ, ಮೂಡಲಗಿ, ಗೋಕಾಕ ಸೇರಿ ವಿವಿಧ ತಾಲೂಕಿನ ವ್ಯಾಪ್ತಿಯ ಕೃಷ್ಣಾ, ಘಟಪ್ರಭಾ ನದಿ ದಡದ ಹಾಗೂ ನೀರಾವರಿ ಪ್ರದೇಶದ ಕಬ್ಬು, ಮೆಕ್ಕೆಜೋಳ, ತರಕಾರಿ ಬೆಳೆಗಳ ಮಧ್ಯೆ ಗಾಂಜಾ ಬೆಳೆದಿರುವುದು ಪೊಲೀಸರ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದೆ. ಅಲ್ಲದೆ ಕೆಲ ರೈತರು ಮತ್ತು ಕೂಲಿ ಕಾರ್ಮಿಕರು ಗಾಂಜಾವನ್ನೇ ತಮ್ಮ ಆದಾಯದ ಮೂಲ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ.

    ಬೆಂಗಳೂರಿನಲ್ಲಿ ಡ್ರಗ್ಸ ಪ್ರಕರಣ ಬೆಳೆಕಿಗೆ ಬಂದ ಬಳಿಕ ಬೆಳಗಾವಿ ಜಿಲ್ಲಾ ಪೊಲೀಸರು ನಡೆಸಿ ಒಂದೇ ವಾರದಲ್ಲಿ ಸುಮಾರು 4.5 ಲಕ್ಷ ರೂ. ಮೌಲ್ಯದ 210 ಕೆಜಿಗೂ ಹೆಚ್ಚು ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಗಳಿಗೆ ಸಂಬಂಧಿಸಿ 24 ಜನರನ್ನು ವಶಕ್ಕೆ ಪಡೆದಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿರುವ ಕೆಲ ಕಾರ್ಮಿಕರು ಜಮೀನು ಮಾಲೀಕರಿಗೆ ಗೊತ್ತಿಲ್ಲದಂತೆ ಗಾಂಜಾ ಬೆಳೆಯುತ್ತಿದ್ದಾರೆ. ಅಲ್ಲದೆ ಗಾಂಜಾ ಎಲೆ ಒಣಗಿಸಿ, ಗಿಡದಲ್ಲಿ ಎಣ್ಣೆ ತೆಗೆದು ಮಾರಾಟ ಮಾಡುತ್ತಿದ್ದಾರೆ. ಗಾಂಜಾ ಖರೀದಿಸಲು ನಗರ ಪ್ರದೇಶಗಳಿಂದ ಜನರು ಬರುತ್ತಿದ್ದಾರೆ. ಡ್ರಗ್ ನಿರ್ಮೂಲನೆಗೆ ಪಣತೊಟ್ಟಿರುವ ಪೊಲೀಸರು ಗಾಂಜಾ ಕುಳಗಳನ್ನೂ ಹೆಡೆಮುರಿ ಕಟ್ಟುತ್ತಿದ್ದಾರೆ.

    ಬೆಳಗಾವಿ ಜಿಲ್ಲೆಯ ನೀರಾವರಿ ಪ್ರದೇಶಗಳಲ್ಲಿ ಕಬ್ಬು ಸೇರಿ ಇನ್ನಿತರ ಬೆಳೆ ಮಧ್ಯೆ ಕೆಲ ರೈತರು ಗಾಂಜಾ ಬೆಳೆದಿರುವುದು ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದೆ. ಗಾಂಜಾ ಬೆಳೆಯುವುದು, ಮಾರಾಟ ಮಾಡುವುದು ಕಾನೂನುಬಾಹಿರ. ಆದರೆ, ಕೆಲವರು ಗಾಂಜಾವನ್ನು ವಾಣಿಜ್ಯ ಬೆಳೆಯನ್ನಾಗಿಸಿಕೊಂಡಿದ್ದಾರೆ. ಗಾಂಜಾ ಸಂಪೂರ್ಣ ನಿರ್ಮೂಲನೆ ಮಾಡಲು ಆಯಾ ಪೊಲೀಸ್ ಠಾಣೆಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ.
    | ಲಕ್ಷ್ಮಣ ನಿಂಬರಗಿ, ಎಸ್‌ಪಿ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts