More

    ಭರತನಾಟ್ಯ ತ್ಯಜಿಸಿ ಕ್ರಿಕೆಟ್‌ಗೆ ಬಂದ ಮಿಥಾಲಿ ರಾಜ್ ಈಗ 10 ಸಾವಿರ ರನ್‌ಗಳ ರಾಣಿ!

    ಲಖನೌ: ಈ ಹುಡುಗಿಗೆ ಬಾಲ್ಯದಲ್ಲಿ ನೃತ್ಯಪಟುವಾಗುವ ಕನಸಿತ್ತು. ಹೀಗಾಗಿ ಭರತನಾಟ್ಯ ಕಲಿಯಲಾರಂಭಿಸಿದ್ದಳು. ಆದರೆ ಅಣ್ಣ ಕ್ರಿಕೆಟ್ ಆಡುವುದನ್ನು ನೋಡಿದ ಬಳಿಕ ಇದರತ್ತ ಆಕರ್ಷಣೆ ಹೆಚ್ಚಿತ್ತು. ಹೀಗಾಗಿ ಭರತ್ಯನಾಟ್ಯವನ್ನು ತ್ಯಜಿಸಿ ಅಣ್ಣನ ಜತೆಗೆ ಕ್ರಿಕೆಟ್ ತರಬೇತಿಗೆ ಸೇರಿದ ಈ ಹುಡುಗಿ, 1999ರಲ್ಲಿ 16ನೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಳು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ 2ನೇ ಮತ್ತು ಭಾರತದ ಮೊದಲ ಮಹಿಳೆ ಎಂಬ ಐತಿಹಾಸಿಕ ಸಾಧನೆ ಮೆರೆದಿದ್ದಾಳೆ. ಈ ಹುಡುಗಿಯೇ, ಭಾರತದ ಮಹಿಳೆಯರ ಏಕದಿನ ತಂಡದ ನಾಯಕಿ ಹಾಗೂ ಅನುಭವಿ ಬ್ಯಾಟುಗಾರ್ತಿ ಮಿಥಾಲಿ ರಾಜ್!

    38 ವರ್ಷದ ಮಿಥಾಲಿ ರಾಜ್ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಶುಕ್ರವಾರ ನಡೆದ 3ನೇ ಏಕದಿನ ಪಂದ್ಯದ ವೇಳೆ ಈ ಸಾಧನೆ ಮಾಡಿದರು. ಭಾರತೀಯ ಇನಿಂಗ್ಸ್‌ನ 28ನೇ ಓವರ್‌ನಲ್ಲಿ ಬೌಲರ್ ಆನ್ನೆ ಬೋಷ್ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಮಿಥಾಲಿ ಈ ಮೈಲಿಗಲ್ಲು ನೆಟ್ಟರು. ಆದರೆ ಮರು ಎಸೆತದಲ್ಲಿಯೇ ಮಿಥಾಲಿ ಔಟಾದರು. ಇಂಗ್ಲೆಂಡ್‌ನ ಚಾರ್ಲೋಟ್ ಎಡ್ವರ್ಡ್ಸ್ (10,273) ಈ ಸಾಧನೆ ಮಾಡಿರುವ ವಿಶ್ವದ ಮೊದಲ ಮಹಿಳೆಯಾಗಿದ್ದಾರೆ. ಇನಿಂಗ್ಸ್‌ನಲ್ಲಿ ಮಿಥಾಲಿ 50 ಎಸೆತಗಳಲ್ಲಿ 36 ರನ್ ಗಳಿಸಿದರು.

    ಇದನ್ನೂ ಓದಿ:  VIDEO| ಈ ಬೌಲಿಂಗ್ ಶೈಲಿ ನೋಡಿ; ಚೆಂಡಿನ ಬಗ್ಗೆ ಗೊತ್ತಿಲ್ಲ, ತಲೆಯಂತೂ ತಿರುಗುತ್ತದೆ!

    10 ಟೆಸ್ಟ್ ಪಂದ್ಯಗಳಲ್ಲಿ 51ರ ಸರಾಸರಿಯಲ್ಲಿ 663 ರನ್, 89 ಟಿ20 ಪಂದ್ಯಗಳಲ್ಲಿ 37.52ರ ಸರಾಸರಿಯಲ್ಲಿ 2,364 ರನ್ ಬಾರಿಸಿರುವ ಮಿಥಾಲಿ ಏಕದಿನ ಕ್ರಿಕೆಟ್‌ನಲ್ಲಿ 212 ಪಂದ್ಯಗಳಲ್ಲಿ 50.53ರ 6,974 ರನ್ ಗಳಿಸಿದ್ದಾರೆ. ಇದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಒಟ್ಟು 311 ಪಂದ್ಯಗಳ 291 ಇನಿಂಗ್ಸ್‌ಗಳಿಂದ 75 ಅರ್ಧಶತಕ ಮತ್ತು 8 ಶತಕಗಳ ಸಹಿತ 10,001 ರನ್ ಕಲೆಹಾಕಿದಂತಾಗಿದೆ. 1999ರ ಜೂನ್‌ನಲ್ಲಿ ಐರ್ಲೆಂಡ್ ವಿರುದ್ಧ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇನ್ನು 26 ರನ್ ಗಳಿಸಿದರೆ ಅವರು ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ 7 ಸಾವಿರ ರನ್ ಪೂರೈಸಿದ ಮೊದಲಿಗರೆನಿಸಲಿದ್ದಾರೆ.

    ‘ಎಂಥಾ ಚಾಂಪಿಯನ್ ಕ್ರಿಕೆಟರ್! ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಮಹಿಳೆಗೆ ಶಹಬ್ಬಾಸ್‌ಗಿರಿ’ ಎಂದು ಬಿಸಿಸಿಐ ಟ್ವೀಟಿಸಿದೆ. ಮಿಥಾಲಿ ಶೀಘ್ರದಲ್ಲಿಯೇ ಚಾರ್ಲೋಟ್ ಎಡ್ವರ್ಡ್ಸ್‌ರನ್ನೂ ಹಿಂದಿಕ್ಕಿ ಮಹಿಳೆಯರ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಸಾಧಕಿ ಎಂಬ ವಿಶ್ವದಾಖಲೆಯನ್ನೂ ನಿರ್ಮಿಸುವ ಅವಕಾಶ ಹೊಂದಿದ್ದಾರೆ.

    ಮಿಥಾಲಿ ಸಾಧನೆಗೆ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದು, ‘ಇದೇ ರೀತಿ ಬಲಿಷ್ಠವಾಗಿ ಮುನ್ನಡೆಯುತ್ತಿರಿ’ ಎಂದೂ ಹಾರೈಸಿದ್ದಾರೆ. ಇದಲ್ಲದೆ, ಚೆನ್ನೈ ಸೂಪರ್‌ಕಿಂಗ್ಸ್, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಸಹಿತ ಐಪಿಎಲ್ ಫ್ರಾಂಚೈಸಿಗಳು ಮತ್ತು ವಿವಿಎಸ್ ಲಕ್ಷ್ಮಣ್, ವಾಸಿಂ ಜಾಫರ್ ಸಹಿತ ಹಲವು ಮಾಜಿ ಕ್ರಿಕೆಟಿಗರಿಂದಲೂ ಮಿಥಾಲಿಗೆ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.

    ಜುಲೈ-ಅಕ್ಟೋಬರ್‌ನಲ್ಲಿ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿ

    VIDEO | ಶ್ರೀಲಂಕಾ ಬ್ಯಾಟ್ಸ್‌ಮನ್ ವಿರುದ್ಧ ನೀಡಿದ ಔಟ್ ತೀರ್ಪಿನ ಬಗ್ಗೆ ಬಿಸಿಬಿಸಿ ಚರ್ಚೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts