ಲಾಕ್​ಡೌನ್​ನಲ್ಲಿ ಶ್ರೀಗಂಧ ಮರ ಲೂಟಿ; ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ದಂಧೆ, ಲಕ್ಷಾಂತರ ರೂ. ಮೌಲ್ಯದ ವೃಕ್ಷಗಳು ಬಲಿ

page 7 1
Published on

ಚಾಮರಾಜನಗರ: ಲಾಕ್​ಡೌನ್​ನ ನಿಶ್ಯಬ್ದತೆ, ಜನ-ವಾಹನ ಸಂಚಾರದ ವಿರಳತೆಯನ್ನು ಲಾಭಕ್ಕೆ ಬಳಸಿಕೊಳ್ಳುತ್ತಿರುವ ಮರಗಳ್ಳರು ಲಕ್ಷಾಂತರ ರೂ. ಬೆಲೆ ಬಾಳುವ ಶ್ರೀಗಂಧದ ಮರಗಳ ಬುಡಕ್ಕೆ ಕೊಡಲಿ ಇಡುತ್ತಿದ್ದಾರೆ. ಸದ್ಯದಲ್ಲೇ ಹುಲಿ ಸಂರಕ್ಷಿತಾರಣ್ಯ ಪ್ರದೇಶವೆಂದು ಘೋಷಣೆಯಾಗಲಿರುವ, ರಾಜ್ಯದ ಹೆಸರಾಂತ ವನ್ಯಜೀವಿಧಾಮಗಳಲ್ಲಿ ಒಂದಾದ ಮಲೆ ಮಹದೇಶ್ವರ ವನ್ಯಜೀವಿಧಾಮದ ಸಂಪತ್ತನ್ನು ದಂಧೆಕೋರರು ನುಣ್ಣಗೆ ಲೂಟಿ ಮಾಡಲಿಳಿದಿರುವುದು ವಿಜಯವಾಣಿ ನಡೆಸಿರುವ ರಿಯಾಲಿಟಿ ಚೆಕ್​ನಲ್ಲಿ ಬಟಾಬಯಲಾಗಿದೆ.

ಶ್ರೀಗಂಧದ ಮಾರಣಹೋಮ: ಪಶ್ಚಿಮಘಟ್ಟಗಳ ಭಾಗದಿಂದ ಪೂರ್ವಘಟ್ಟಗಳ ಕಡೆಗೆ ಹರಡಿಕೊಂಡಿರುವ, ಸಮುದ್ರಮಟ್ಟದಿಂದ ಸುಮಾರು 4 ಸಾವಿರ ಅಡಿ ಎತ್ತರದಲ್ಲಿರುವ ಶ್ರೀಮಲೆ ಮಹದೇಶ್ವರ ಬೆಟ್ಟದಲ್ಲಿ ಸಹಸ್ರಾರು ಪ್ರಭೇದದ ಗಿಡ-ಮರಗಳು, ವನ್ಯಜೀವಿಗಳಿವೆ. ಜತೆಗೆ ಸಹಸ್ರಾರು ಅಮೂಲ್ಯ ಶ್ರೀಗಂಧದ ಮರಗಳು ಸಮೃದ್ಧವಾಗಿ ಬೆಳೆದಿವೆ. ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹಗಲು-ರಾತ್ರಿ ಎನ್ನದೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಭಕ್ತರ ದರ್ಶನಕ್ಕೆ ನಿರ್ಬಂಧ ವಿಧಿಸಿರುವುದರಿಂದ ತಿಂಗಳಿನಿಂದ ಜನ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಪರಿಣಾಮ ಅರಣ್ಯದೊಳಗಿರಲಿ, ಬೆಟ್ಟದ ಮುಖ್ಯರಸ್ತೆಗಳ ಬದಿಯಲ್ಲೇ ಶ್ರೀಗಂಧದ ಮರಗಳು ಮಂಗ ಮಾಯವಾಗುತ್ತಿವೆ.

ತಾಳುಬೆಟ್ಟದಿಂದ ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಕ್ಕೆ ತೆರಳುವಾಗ ಸಿಗುವ 27 ತಿರುವುಗಳಲ್ಲಿ 1ನೇ ತಿರುವಿನ ಮುಖ್ಯರಸ್ತೆಯ ಬಲಬದಿಗೆ ಒಂದು ಶ್ರೀಗಂಧದ ಮರ ಕತ್ತರಿಸಲಾಗಿದೆ. ಸಮೀಪದಲ್ಲೇ ಇರುವ ಮತ್ತೊಂದು ಮರವೂ ಕಳ್ಳರ ಪಾಲಾಗಿದೆ. ಇನ್ನೊಂದು ಮರ ಕತ್ತರಿಸಿ ತೆಗೆದುಕೊಂಡು ಹೋಗಲಾಗದೆ ಅಲ್ಲೇ ಬಿಡಲಾಗಿದೆ. 3ನೇ ತಿರುವಿನಲ್ಲಿ ಹೊಸ ಮತ್ತು ಹಳೆಯ ಎರಡು ಮರಗಳನ್ನು ಕಡಿಯಲಾಗಿದೆ. 5ನೇ ತಿರುವಿನ ರಸ್ತೆಯ ಎಡ ಹಾಗೂ ಬಲಬದಿಯಲ್ಲಿ 2 ಮರ, 7 ಮತ್ತು 8ನೇ ತಿರುವಿನಲ್ಲಿ ಬೆಳೆದಿದ್ದ ಬೃಹತ್ ಮರವನ್ನು ಬೇರುಮಟ್ಟಕ್ಕೆ ಕತ್ತರಿಸಿ ಮಣ್ಣು ಮುಚ್ಚಲಾಗಿದೆ. ರಂಗಸ್ವಾಮಿ ಒಡ್ಡಿನ ಶನೇಶ್ವರ ಸ್ವಾಮಿ ದೇವಸ್ಥಾನದಿಂದ ಹಾಲೆರು ಹಳ್ಳದವರೆಗೆ 5ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದೆ. ಹೀಗೆ ರಸ್ತೆ ಬದಿಯಲ್ಲಿ ಬೆಳೆದಿರುವ ಶ್ರೀಗಂಧದ ಮರಗಳೇ ಮಂಗ ಮಾಯವಾಗುತ್ತಿದ್ದರೆ ಇನ್ನು ಅರಣ್ಯ ಪ್ರದೇಶದೊಳಗಿನ ಮರಗಳ ಸ್ಥಿತಿ ಏನಾಗಿರಬಹುದು ಎಂಬುದು ಯಕ್ಷಪ್ರಶ್ನೆ.

ಅವಶೇಷಗಳೇ ಸಾಕ್ಷ್ಯ: ಮಲೆ ಮಹದೇಶ್ವರ ವನ್ಯಜೀವಧಾಮದಲ್ಲಿ ಅಲ್ಲಲ್ಲಿ ಕಡಿದಿರುವ ಶ್ರೀಗಂಧದ ಮರಗಳ ಅವಶೇಷಗಳು ಸಾಕ್ಷ್ಯವಾಗಿವೆ. ಹಚ್ಚಹಸಿರಿನಿಂದ, ಸುಗಂಧ ಬೀರಬೇಕಾದ ಮರಗಳ ಬುಡವನ್ನು ಕೊಯ್ಯಲಾಗಿದೆ. ಮರವೊಂದನ್ನು ದಿನಬಿಟ್ಟು ದಿನ ಕದಿಯುವ ಕೆಲಸ ನಡೆಯುತ್ತಿದೆ. ಮರವನ್ನು ಬಹುಪಾಲು ಕತ್ತರಿಸಿದ ನಂತರ ನೆಲಕ್ಕುರುಳಿಸದೆ ಹಾಗೆ ಬಿಟ್ಟು ಗಾಳಿ, ಮಳೆಗೆ ತಾನಾಗಿಯೇ ಕೆಳಗೆ ಬಿದ್ದ ನಂತರ ಖದೀಮರು ಸಾಗಿಸುತ್ತಿದ್ದಾರೆ. ಹೀಗಾಗಿ ಅನೇಕ ಕಡೆ ಗರಗಸದಿಂದ ಕೊಯ್ದ ಮರಗಳ ಬುಡ ಮತ್ತು ನೆಲಕ್ಕುರಳಿದ ಮರಗಳು ಕಾಣಸಿಗುತ್ತಿವೆ. ಜೀವ ಕಳೆದುಕೊಂಡ ಶ್ರೀಗಂಧದ ಮರಗಳ ರೆಂಬೆ, ಕೊಂಬೆಗಳು ಅರಣ್ಯದಲ್ಲಿ ಒಣಗುತ್ತಿವೆೆ.

ಬುಡಗಳನ್ನು ಕಲ್ಲು-ಮಣ್ಣಿನಿಂದ ಮುಚ್ಚುವ ಕಳ್ಳರು: ಶ್ರೀಗಂಧದ ಮರಗಳನ್ನು ಕಡಿದು ಯಾರಿಗೂ ಗೊತ್ತಾಗಬಾರದೆಂದು ಅದರ ಬುಡವನ್ನು ಕಲ್ಲು, ಮಣ್ಣಿನಿಂದ ಮುಚ್ಚಲಾಗುತ್ತಿದೆ. ಕತ್ತರಿಸಿದ ಮರಗಳ ಬುಡವನ್ನು ಗಮನಿಸಿದರೆ ಈ ಕೃತ್ಯ 20 ದಿನಗಳಿಂದೀಚೆಗೆ ನಡೆದಿದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಯುತ್ತದೆ. ಮರಗಳ್ಳತನದ ಹಿಂದೆ ದೊಡ್ಡ ತಂಡವೇ ಇರುವಂತೆ ಕಾಣುತ್ತದೆ. ಈ ಮಧ್ಯೆ ಕತ್ತರಿಸಿದ ಶ್ರೀಗಂಧದ ಮರಗಳ ಸಾಗಣೆ ಹೇಗೆ ನಡೆಯುತ್ತಿದೆ ಎನ್ನುವುದೇ ಉತ್ತರ ಸಿಗದ ಪ್ರಶ್ನೆಯಾಗಿದೆ. ಇಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ಇದಕ್ಕೆ ಕೈಜೋಡಿಸಿದ್ದಾರೆಯೇ ಎಂಬ ಅನುಮಾನದ ಘಾಟೂ ಹೊರಬರುತ್ತಿದೆ.

| ಕಿರಣ್ ಮಾದರಹಳ್ಳಿ

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಮರಗಳನ್ನು ಕತ್ತರಿಸಿರುವುದರ ಕುರಿತು ಮಾಹಿತಿಯನ್ನು ಪಡೆದು ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. | ಪುನಟಿ ಶ್ರೀಧರ್ ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ, ಅರಣ್ಯ ಇಲಾಖೆ ರಾಜ್ಯದ ಎಲ್ಲ ಮೃಗಾಲಯ ಹಾಗೂ ಅಭಯಾರಣ್ಯಗಳಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅರಣ್ಯದಲ್ಲಿ ಕಳ್ಳತನ ಹಾಗೂ ಬೇಟೆಯಾಡುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಬೇಟೆಯಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. | ಆನಂದ್ ಸಿಂಗ್ ಅರಣ್ಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net