More

    ಕೆರೆ ಅಭಿವೃದ್ಧಿ ಹೆಸರಲ್ಲಿ ಅವ್ಯವಹಾರ

    ಚಿತ್ರದುರ್ಗ: ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ 300 ಕೆರೆಗಳನ್ನು ಅಭಿವೃದ್ಧಿ ಪಡಿಸಿದ್ದೇನೆ, ಸಾಕಷ್ಟು ಅನುದಾನ ತಂದಿದ್ದು, ಶ್ವೇತಪತ್ರ ಹೊರಡಿಸುವುದಾಗಿ ಕ್ಷೇತ್ರದ ಶಾಸಕರು ತಿಳಿಸಿದ್ದು, ಈವರೆಗೂ ಏಕೆ ಅದನ್ನು ಮಾಡಿಲ್ಲ ಎಂದು ಮಾಜಿ ಸಚಿವ ಎಚ್.ಆಂಜನೇಯ ಪ್ರಶ್ನಿಸಿದರು.

    ಶುಕ್ರವಾರ ಜಿಲ್ಲಾಧಿಕಾರಿಗೆ ಈ ಕುರಿತು ಮನವಿ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವ್ಯಾವ ಕೆರೆಗಳಿಗೆ ಸರ್ಕಾರ ಎಷ್ಟು ಅನುದಾನ ಬಿಡುಗಡೆ ಮಾಡಿದೆ. ಟೆಂಡರ್ ಯಾವಾಗ ಕರೆಯಲಾಗಿದೆ. ಕೆರೆಯ ಪ್ರದೇಶದಲ್ಲಿ ರಸ್ತೆ ನಿರ್ಮಿಸಲು ಅನುಮತಿ ಪಡೆಯಲಾಗಿದೆಯೇ ಎಂಬುದನ್ನು ಆರ್‌ಟಿಐನಲ್ಲಿ ಕೇಳಿದರೂ ನೀಡುತ್ತಿಲ್ಲ. ಆದ್ದರಿಂದ ಅವ್ಯವಹಾರ ನಡೆದಿರುವ ಕುರಿತು ಶಂಕೆ ವ್ಯಕ್ತವಾಗಿದೆ ಎಂದು ದೂರಿದರು.

    ಐದು ವರ್ಷಗಳಿಂದ ತುಂಡು ಗುತ್ತಿಗೆಗಳನ್ನು ತನ್ನ ಕಾರ್ಯಕರ್ತರಿಗೆ ನೀಡದ ಶಾಸಕರು ಈಗ ಏಕಾಏಕಿ ಆಮಿಷವೊಡ್ಡಿ 5 ಲಕ್ಷ ರೂ. ವರೆಗೂ ನೀಡಲು ಮುಂದಾಗಿದ್ದಾರೆ. ರಸ್ತೆಗಳ ಕಾಮಗಾರಿ ಕಳಪೆಯಾಗಿದೆ. ರಂಗಮಂದಿರ ನಿರ್ಮಾಣದಲ್ಲೂ ಅಕ್ರಮ ನಡೆದಿದೆ ಎಂದು ಆರೋಪಿಸಿದರು.

    ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಡಿಎಂಎಫ್ ಅನುದಾನ ಗಣಿ ಭಾದಿತ ಪ್ರದೇಶಗಳಿಗೆ ಬಳಕೆಯಾಗದೆ, ಕುಟುಂಬದವರಿಂದಲೇ ಕಾಮಗಾರಿ ಕೈಗೊಂಡು ಹೆಚ್ಚು ಬಿಲ್ ಮಾಡಿಕೊಂಡು ವಂಚಿಸಿದ್ದಾರೆ. ಈ ಅಕ್ರಮಗಳ ವಿರುದ್ಧ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

    ಅಭಿವೃದ್ಧಿ ಕೆಲಸಗಳಾಗದೆಯೆ ಶಾಸಕರಿಗೆ ಹೆದರಿಕೊಂಡು ಬಿಲ್ ಪಾಸ್ ಮಾಡುವ ಮೂಲಕ ಅಧಿಕಾರಿಗಳು ಅಕ್ರಮ ವ್ಯವಹಾರದಲ್ಲಿ ಶಾಮೀಲಾಗಿದ್ದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ವರ್ಷದೊಳಗೆ ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಹೇಳಿದರು.
    ಹೊಳಲ್ಕೆರೆಯಲ್ಲಿ ಈಚೆಗೆ ನಡೆದ ಫಲಾನುಭವಿಗಳ ಸಮಾವೇಶ, ಅಭಿವೃದ್ಧಿ ಕಾರ‌್ಯಗಳ ಶಂಕುಸ್ಥಾಪನೆ 2 ತಿಂಗಳ ಹಿಂದೆ ನಡೆಸಿದ್ದರೆ ಪ್ರಶ್ನಿಸುತ್ತಿರಲಿಲ್ಲ. ಆದರೆ, ಚುನಾವಣೆ

    ಹತ್ತಿರ ಇರುವಾಗ ಮಾಡಿದ್ದು, ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯಾಗಿದೆ. ಇದಕ್ಕಾಗಿ ತಾಲೂಕು ಆಡಳಿತವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಜನಪ್ರತಿನಿಧಿಗಳ ಕಾಯ್ದೆಗೆ ಧಕ್ಕೆಯಾಗದಂತೆ ಅಧಿಕಾರಿಗಳು ನಡೆದುಕೊಳ್ಳಬೇಕು. ಇಲ್ಲದಿದ್ದರೆ, ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು.

    ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಟಿ.ಹನುಮಂತಪ್ಪ, ವೀರಶೈವ ಮಹಸಭಾ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಯಾದವ ಸಮಾಜದ ಡಿ.ಕೆ.ಶಿವಮೂರ್ತಿ, ಜಿಪಂ ಉಪಾಧ್ಯಕ್ಷ ಎಸ್‌ಎಂಎಲ್ ತಿಪ್ಪೇಸ್ವಾಮಿ, ಮುಖಂಡರಾದ ಪ್ರಕಾಶ್, ಎಚ್.ಡಿ.ರಂಗಯ್ಯ, ಓಂಕಾರಸ್ವಾಮಿ, ನಟರಾಜ್ ಇತರರಿದ್ದರು.

     ಮನವಿ
    ಹೊಳಲ್ಕೆರೆ ಕ್ಷೇತ್ರದಲ್ಲಿ 5 ವರ್ಷದ ಅವಧಿಯಲ್ಲಾದ ಕಾಮಗಾರಿಗಳಲ್ಲಿನ ಅಕ್ರಮದ ಕುರಿತು ತನಿಖೆಯಾಗಬೇಕು ಎಂದು ಒತ್ತಾಯಿಸಿ ಚಿತ್ರದುರ್ಗ ಡಿಸಿ ದಿವ್ಯಾಪ್ರಭು ಅವರಿಗೆ ಮಾಜಿ ಸಚಿವ ಎಚ್.ಆಂಜನೇಯ ಶುಕ್ರವಾರ ಮನವಿ ಸಲ್ಲಿಸಿದರು. ಮಹಡಿ ಶಿವಮೂರ್ತಿ, ಎಸ್‌ಎಂಎಲ್ ತಿಪ್ಪೇಸ್ವಾಮಿ, ಡಿ.ಕೆ.ಶಿವಮೂರ್ತಿ, ಪ್ರಕಾಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts