More

    ಕನ್ನಡಾಭಿಮಾನಿಗಳ ಬಂಧನ-ಬಿಡುಗಡೆ

    ಬೆಳಗಾವಿ: ಕನ್ನಡ ರಾಜ್ಯೋತ್ಸವ ವಿರೋಧಿಸಿ ಎಂಇಎಸ್ ನಡೆಸುತ್ತಿದ್ದ ಪ್ರತಿಭಟನಾ ಸಭೆ ತಡೆಯಲು ಯತ್ನಿಸಿದ ಕನ್ನಡಾಭಿಮಾನಿಗಳನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ. ನಗರದ ಮರಾಠಾ ಮಂದಿರದಲ್ಲಿ ಎಂಇಎಸ್ ಪ್ರತಿಭಟನಾ ಸಭೆ ನಡೆಸುತ್ತಿರುವುದನ್ನು ಖಂಡಿಸಿ, ಕನ್ನಡ ಧ್ವಜ ಹಿಡಿದು ಅಲ್ಲಿಗೆ ನುಗ್ಗಲು ಕನ್ನಡಪರ ಹೋರಾಟಗಾರರು ಯತ್ನಿಸಿದರು. ಎಂಇಎಸ್‌ಗೆ ಧಿಕ್ಕಾರ ಕೂಗಿ, ಸಭೆಗೆ ಅಡ್ಡಿಪಡಿಸಲು ಯತ್ನಿಸಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಕನ್ನಡಪರ ಹೋರಾಟಗಾರನ ಕೈಯಲ್ಲಿದ್ದ ಧ್ವಜ ಕಸಿದುಕೊಂಡು, ಅವರನ್ನು ಜೀಪ್‌ನಲ್ಲಿ ಕರೆದೊಯ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಎಂಇಎಸ್ ನಾಯಕಿ ರೇಣು ಕಿಲ್ಲೇಕರ, ಕನ್ನಡ ವಿರೋಧಿ ಘೋಷಣೆ ಕೂಗಿ ಪುಂಡಾಟಿಕೆ ಮೆರೆದರು.

    ಕನ್ನಡಿಗರ ಆಕ್ರೋಶ: ಎಂಇಎಸ್‌ನವರು ನಮ್ಮ ನಾಡಿನ ಕನ್ನಡ ರಾಜ್ಯೋತ್ಸವ ವಿರೋಧಿಸಿ ಪ್ರತಿಭಟನಾ ಸಭೆ ನಡೆಸುತ್ತಿದೆ. ಆದರೆ, ನಮಗೆ ಮೆರವಣಿಗೆಗೆ ಅವಕಾಶ ಕೊಟ್ಟಿಲ್ಲ. ಅವರಿಗೇಕೆ ಸಭೆ ನಡೆಸಲು ಅನುಮತಿ ನೀಡಿದ್ದೀರಿ ಎಂದು ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಎಂಇಎಸ್ ಸಭೆ ನಿಲ್ಲಿಸುವಂತೆ ಪೊಲೀಸರನ್ನು ಒತ್ತಾಯಿಸಿದರು. ಎಂಇಎಸ್ ಪುಂಡರಪರ ರಾಜ್ಯ ಸರ್ಕಾರ ನಿಂತಿದೆ ಎಂದು ಧಿಕ್ಕಾರ ಕೂಗಿದರು. ಹೋರಾಟಗಾರರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು. ಬಳಿಕ ಅವರನ್ನೆಲ್ಲ ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದರು.

    ನಾಡದ್ರೋಹಿ ಘೋಷಣೆ: ಪ್ರತಿವರ್ಷವೂ ಕನ್ನಡ ರಾಜ್ಯೋತ್ಸವದಂದು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಪದಾಧಿಕಾರಿಗಳು ಕರಾಳ ದಿನ ಆಚರಿಸುತ್ತಿದ್ದರು. ಆದರೆ, ಈ ಬಾರಿ ರಾಜ್ಯೋತ್ಸವದಂದು ಕರಾಳ ದಿನ ಆಚರಿಸಲು ಬೆಳಗಾವಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಎಂಇಎಸ್ ಕಾರ್ಯಕರ್ತರು ಕರಾಳ ದಿನದ ಬದಲು ನಗರದ ಮರಾಠಾ ಮಂಗಲ ಕಾರ್ಯಾಲಯದಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಂಡಿತು.

    ಸಭೆಯಲ್ಲಿ ಮಾತನಾಡಿದ ಪ್ರಮುಖರು, ನಾಡದ್ರೋಹಿ ಘೋಷಣೆ ಕೂಗಿದರು. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಆಗ್ರಹಿಸಿದರು. ‘ರಹೆಂಗೇ ತೋ ಮಹಾರಾಷ್ಟ್ರ ಮೇ, ನಹೀ ತೋ ಜೈಲ್ ಮೇ’ ಎಂದು ಘೋಷಣೆ ಕೂಗಿ ಉದ್ಧಟತನ ಪ್ರದರ್ಶಿಸಿದ್ದಾರೆ. ಸ್ಥಳದಲ್ಲಿ ಪೊಲೀಸರಿದ್ದರೂ ನಾಡದ್ರೋಹಿ ಸಭೆ ಮೊಟಕುಗೊಳಿಸಲು ಹಿಂದೇಟು ಹಾಕಿದ್ದರಿಂದ ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

    ಶಿವಸೇನೆ ಕಾರ್ಯಕರ್ತರ ವಾಗ್ವಾದ

    ಎಂಇಎಸ್‌ನ ಕರಾಳ ದಿನಕ್ಕೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದರಿಂದ ಪೊಲೀಸರ ಜತೆ ಎಂಇಎಸ್, ಶಿವಸೇನೆ ಕಾರ್ಯಕರ್ತರು ವಾಗ್ವಾದ ನಡೆಸಿದರು. ಕಪ್ಪು ಬಟ್ಟೆ ಧರಿಸಿ, ಕಪ್ಪು ಬಾವುಟ ಹಿಡಿದು ಪ್ರತಿಭಟನೆಗೆ ಮುಂದಾದರು. ಈ ವೇಳೆ ಪೊಲೀಸರು ಇವರನ್ನೂ ವಶಕ್ಕೆ ಪಡೆದು, ಎಚ್ಚರಿಕೆ ನೀಡಿ ಬಳಿಕ ಬಿಡುಗಡೆ ಮಾಡಿದರು.

    ಪೊಲೀಸರಿಂದ ಲಘು ಲಾಠಿ ಚಾರ್ಜ್

    ಚನ್ನಮ್ಮ ವೃತ್ತದಲ್ಲಿ ರಾಜ್ಯೋತ್ಸವ ನಿಮಿತ್ತ ಕುಣಿದು ಕುಪ್ಪಳಿಸುತ್ತಿದ್ದ ಯುವಕರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದರು. ಯುವಕರು ಬೈಕ್‌ಗಳಿಂದ ಕರ್ಕಶ ಸದ್ದು ಮಾಡುತ್ತ ವೃತ್ತ ಸುತ್ತು ಹಾಕುತ್ತಿದ್ದರು. ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಅಡೆ-ತಡೆಯಾಗಿತ್ತು. ಹೀಗಾಗಿ ಯುವಕರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದರಿಂದ ಹೆದರಿದ ಯುವಕರು ಅಲ್ಲಿಂದ ಕಾಲ್ಕಿತ್ತರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts