More

    ಉಡುಪಿಗೆ 2500 ರೆಮ್‌ಡೆಸಿವಿರ್ ಬೇಡಿಕೆ: ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ

    ಉಡುಪಿ: ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಪ್ರಸ್ತುತ ಜಿಲ್ಲೆಗೆ 250 ರೆಮ್‌ಡೆಸಿವಿರ್ ಇಂಜೆಕ್ಷನ್ ಬೇಡಿಕೆ ಇದೆ. ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಸೋಮವಾರ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
    ಉಡುಪಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಶಾಸಕರ ಹಾಗೂ ಅಧಿಕಾರಿಗಳ ಸಭೆ ನಡೆಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

    ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಸಹಿತ ಜಿಲ್ಲೆಯಲ್ಲಿ 2,44,300 ಮಂದಿಗೆ ವ್ಯಾಕ್ಸಿನೇಶನ್ ನೀಡಲಾಗಿದೆ. ಎರಡನೇ ಡೋಸ್ ಕೊರತೆಯಾಗುತ್ತಿದೆ. ರಾಜ್ಯ ಸರ್ಕಾರ ಹೆಚ್ಚುವರಿ ಲಸಿಕೆ ಖರೀದಿಗೆ ಮುಂದಾಗಿದ್ದು, ಎರಡು ವಾರದ ಒಳಗೆ ಕೊರತೆ ನೀಗಲಿದೆ. ಪ್ರತಿ ವಾರ ಸಭೆ ನಡೆಸಿ ಪ್ಲಾನಿಂಗ್‌ನಲ್ಲಿ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಐಎಂಎ ಜತೆ ಮಾತುಕತೆ ಮಾಡಲು ನಿರ್ಧರಿಸಲಾಗಿದೆ. ಜಿಲ್ಲೆಯ ಎಲ್ಲ ವೈದ್ಯರ ಬಳಕೆ ಮಾಡುವ ಬಗ್ಗೆ ಚಿಂತಿಸಬೇಕು. ಡಾಕ್ಟರ್, ತಾಂತ್ರಿಕ ಸಿಬ್ಬಂದಿ ನೇಮಕದ ಅಧಿಕಾರವನ್ನು ಸಂಪೂರ್ಣ ಡಿಸಿಗೆ ನೀಡಲಾಗಿದೆ ಎಂದರು.
    ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ವಿ.ಸುನೀಲ್ ಕುಮಾರ್, ಬಿ.ಎಂ.ಸುಕುಮಾರ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ.ಜಗದೀಶ್, ಸಿಇಒ ಡಾ.ನವೀನ್ ಭಟ್ ಉಪಸ್ಥಿತರಿದ್ದರು.

    ನೆಗೆಟಿವ್ ಇದ್ದವರಿಗೂ ಲಕ್ಷಣ: ಕೋವಿಡ್ ಸೋಂಕಿತರಿಗೆ ಆರ್‌ಟಿ-ಪಿಸಿಆರ್‌ನಲ್ಲಿ ನೆಗೆಟಿವ್ ವರದಿ ಇದ್ದರೂ ಕೆಲವರಿಗೆ ಉಸಿರಾಟ ಸಮಸ್ಯೆ ಕಂಡುಬರುತ್ತಿದೆ. ಇದಕ್ಕಾಗಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಹೆಚ್ಚಿನ ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚುವರಿ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಮಣಿಪಾಲ ಕೆಎಂಸಿಯಲ್ಲಿ 40 ಐಸಿಯು ಬೆಡ್‌ಗಳನ್ನು 60ಕ್ಕೆ ಹೆಚ್ಚುವಂತೆ ಸೂಚನೆ ನೀಡಲಾಗಿದೆ. ಜಿಲ್ಲಾಸ್ಪತ್ರೆ, ಇತರೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಬೆಡ್‌ಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು.

    ಅಗತ್ಯವಿದ್ದಲ್ಲಿ ಟಿಎಂಎ ಪೈ ಕೋವಿಡ್ ಆಸ್ಪತ್ರೆ: ಸೋಂಕಿತರ ಚಿಕಿತ್ಸೆ ಮತ್ತು ಆರೈಕೆಗಾಗಿ ದಿನಗಳಲ್ಲಿ ಪ್ರತಿ ತಾಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸೋಂಕು ಹೆಚ್ಚಾಗಿ ಚಿಕಿತ್ಸೆಗೆ ಆಸ್ಪತ್ರೆಯ ಅವಶ್ಯಕತೆ ಬಿದ್ದಲ್ಲಿ ಡಾ. ಟಿಎಂಎ ಪೈ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡುಗೊಳಿಸುವುದಕ್ಕೆ ಸಂಸ್ಥೆ ಒಪ್ಪಿಗೆ ನೀಡಿದೆ. ಅದೇ ರೀತಿ ಆದರ್ಶ ಆಸ್ಪತ್ರೆ ಸಹಿತ ಖಾಸಗಿ ಆಸ್ಪತ್ರೆಗಳಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

    ಆಕ್ಸಿಜನ್ ಕೊರತೆ ಇಲ್ಲ: ಜಿಲ್ಲೆಗೆ ನಾಲ್ಕರಿಂದ ಆರು ಟನ್ ಆಕ್ಸಿಜನ್ ಅವಶ್ಯಕತೆ ಇದ್ದು, ಸದ್ಯ ಉಡುಪಿಯಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ. ಬಳ್ಳಾರಿಯಿಂದ ಶೀಘ್ರ ಬೆಳಪು ಆಕ್ಸಿಜನ್ ಘಟಕಕ್ಕೆ ಟ್ಯಾಂಕರ್ ಮೂಲಕ ಆಕ್ಸಿಜನ್ ರವಾನೆಯಾಗಲಿದೆ ಎಂದು ಬೊಮ್ಮಾಯಿ ತಿಳಿಸಿದರು. ಜಿಲ್ಲೆಯಲ್ಲಿ 2,596 ಸಕ್ರಿಯ ಪ್ರಕರಣಗಳಿದ್ದು, 494 ಮಂದಿ ಆಸ್ಪತ್ರೆಯಲ್ಲಿ, 2,102 ಮಂದಿ ಹೋಂ ಐಸೋಲೇಶನ್‌ನಲ್ಲಿ ಇಡಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ 44 ಮಂದಿ ಹಾಗೂ 25 ಮಂದಿಗೆ ವೆಂಟಿಲೇಟರ್ ಚಿಕಿತ್ಸೆ ನೀಡಲಾಗುತ್ತಿದೆ. ಈಗಿನವರೆಗೆ 171 ಐಸಿಯು ಬೆಡ್ ಹಾಗೂ 79 ವೆಂಟಿಲೇಟರ್ ಬೆಡ್‌ಗಳು ನಮ್ಮಲ್ಲಿ ಲಭ್ಯವಿದೆ ಎಂದರು.

    ತಜ್ಞರ ಅಭಿಪ್ರಾಯ ಬಳಿಕ ನಿರ್ಧಾರ
    ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಪ್ರಸ್ತುತ ಜನತಾ ಕರ್ಫ್ಯೂ, ಕಠಿಣ ನಿರ್ಬಂಧ ವಿಧಿಸಲಾಗಿದ್ದು, ಇದರ ವಿಸ್ತರಣೆ ಬಗ್ಗೆ ತಜ್ಞರ ಅಭಿಪ್ರಾಯದ ಬಳಿಕ ತೀರ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದರು. 12 ದಿನದ ಬಳಿಕ ತಜ್ಞರ ಸಮಿತಿ ಸಭೆ ಸೇರಲಿದ್ದು, ಸ್ಥಿತಿಗತಿ ಪರಮರ್ಶಿಸಿ ತಜ್ಞರು ಅಭಿಪ್ರಾಯ ಮಂಡಿಸಬಹುದು ಎಂದರು.

    ಕೋವಿಡ್‌ನ 2ನೇ ಅಲೆ ಭಯಾನಕವಾಗಿದ್ದು, ಒಬ್ಬರಿಂದ ಹಲವರಿಗೆ ಸೋಂಕು ಹರಡುತ್ತಿದೆ. ಸರ್ಕಾರದ ಮಾರ್ಗಸೂಚಿ ಪಾಲಿಸಿ. ಸರ್ಕಾರ, ಜಿಲ್ಲಾಡಳಿತ ಜನತೆಯ ಜತೆಗಿದೆ. ಜನರ ಸಹಕಾರವಿದ್ದಾಗ ಮಾತ್ರ ಕರೊನಾ ತಡೆಯಲು ಸಾಧ್ಯವಾಗುತ್ತದೆ.
    ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts