More

    ಗೋಡೆ ಮೇಲೆ ರಾಜಕೀಯ ಪ್ರೇರಿತ ಕರಪತ್ರ ಅಂಟಿಸುವಂತಿಲ್ಲ

    ಬಳ್ಳಾರಿ: ಬಳ್ಳಾರಿ ನಗರ-94 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಕಟ್ಟಡಗಳ ಗೋಡೆಗಳ ಮೇಲೆ ಬಣ್ಣಗಳಿಂದ ಬರೆಯುವಂತಿಲ್ಲ ಮತ್ತು ರಾಜಕೀಯ ಕುರಿತಾದ ಕರಪತ್ರ ಅಂಟಿಸುವಂತಿಲ್ಲ. ಇದಕ್ಕೆ ಪ್ರತ್ಯೇಕ ಪರವಾನಗಿ ಪಡೆಯುವುದು ಕಡ್ಡಾಯ ಎಂದು ಮಹಾನಗರ ಪಾಲಿಕೆ ಆಯುಕ್ತ ಮತ್ತು ನಗರ ಕ್ಷೇತ್ರ ಚುನಾವಣಾಧಿಕಾರಿ ಎಸ್.ಎನ್.ರುದ್ರೇಶ್ ಅವರು ತಿಳಿಸಿದ್ದಾರೆ.

    ಬಳ್ಳಾರಿ ನಗರ-94 ವಿಧಾನಸಭೆ ಕ್ಷೇತ್ರದಲ್ಲಿ 234 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, 1,24,199 ಪುರುಷ ಮತದಾರರು, 1,31,157 ಮಹಿಳಾ ಮತದಾರರು ಮತ್ತು 29 ಲಿಂಗತ್ವ ಅಲ್ಪಸಂಖ್ಯಾತರು ಇದ್ದು, ಒಟ್ಟು 2,55,385 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಚುನಾವಣಾ ಆಯೋಗವು 80 ವರ್ಷ ಮೇಲ್ಪಟ್ಟ ವಯಸ್ಕರು ಮತ್ತು ಅಂಗವಿಕಲರು ಮತದಾನದಿಂದ ಹೊರಗುಳಿಯಬಾರದೆಂದು ಮನೆಯಿಂದಲೇ ಹಕ್ಕು ಚಲಾಯಿಸಲು ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ಹೊಸದಾಗಿ ನೋಂದಾಯಿಸಿಕೊಳ್ಳುವವರು ಹೆಚ್ಚಳವಾದರೆ ಮತ್ತು ಒಂದು ಮತಗಟ್ಟೆ ಕೇಂದ್ರದಲ್ಲಿ 1500ಕ್ಕಿಂತ ಹೆಚ್ಚಾದರೆ, ಹೆಚ್ಚುವರಿಯಾಗಿ ಮತದಾನ ಕೇಂದ್ರವನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ಚುನಾವಣಾ ಪ್ರಯುಕ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ನಗರದಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ನೋಡಿಕೊಳ್ಳಲು ಬಳ್ಳಾರಿ ನಗರ ಕ್ಷೇತ್ರದಲ್ಲಿ 7 ಕಡೆ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಕೊಳಗಲ್ ರಸ್ತೆಯ ವಿಮಾನ ನಿಲ್ದಾಣ ವೃತ್ತ, ಕಾಣೆಕಲ್ ರಸ್ತೆಯ ಆಂಧ್ರಾಳ್ ಬೈಪಾಸ್ ಹತ್ತಿರ, ಮೋಕಾ ರಸ್ತೆಯ ಕೆಇಬಿ ವೃತ್ತ ಹತ್ತಿರ, ತಾಳೂರು ರಸ್ತೆಯ ಮಹಾನಂದಿ ಕೊಟ್ಟಂ ಹತ್ತಿರ, ರೂಪನಗುಡಿ ರಸ್ತೆಯ ದುರ್ಗ ವೃತ್ತದ ಹತ್ತಿರ, ಸಿರುಗುಪ್ಪ ರಸ್ತೆಯ ಕ್ಲಾಸಿಕ್ ಫಂಕ್ಷನ್ ಹಾಲ್ ಹತ್ತಿರ, ಅನಂತಪುರ ರಸ್ತೆಯ ಬೈಪಾಸ್ ವೃತ್ತದ ಹತ್ತಿರ ಸ್ಥಾಪಿಸಲಾಗಿದೆ. ಯಾವುದೇ ವಾಹನಗಳಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಹಣ ಕಂಡುಬಂದಲ್ಲಿ ಅಂತಹ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

    ರಾಜಕೀಯ ಪಕ್ಷಗಳು ರಾತ್ರಿ 10ರ ಮೇಲೆ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಮತ್ತು ಚುನಾವಣಾ ಅಭ್ಯರ್ಥಿಯು 40 ಲಕ್ಷ ರೂ.ವರೆಗೆ ಚುನಾವಣಾ ಖರ್ಚು ವೆಚ್ಚ ಮಾಡಲು ಅವಕಾಶವಿರುತ್ತದೆ. ಪಕ್ಷಗಳು ಪ್ರಚಾರ ಮಾಡುವ ಮುಂಚಿತವಾಗಿ ವಾಹನಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಹೊಂದಿ ಪರವಾನಗಿ ಪಡೆದಿರಬೇಕು. ಚುನಾವಣೆ ಪ್ರಚಾರ ಮಾಡುವ ರಾಜಕೀಯ ಪಕ್ಷಗಳು ಕಡ್ಡಾಯವಾಗಿ ಪರವಾನಗಿ ಪಡೆಯಬೇಕು ಎಂದು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts