More

    ಸ್ಮಾರಕಗಳ ದತ್ತು ಪ್ರಕ್ರಿಯೆಗೆ ಚಾಲನೆ ; ಯೋಜನೆ ಯಶಸ್ಸಿಗೆ ಕೈಜೋಡಿಸಲು ಸಚಿವ ಎಚ್.ಕೆ.ಪಾಟೀಲ ಮನವಿ

    ಬೆಂಗಳೂರು: ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆಯ ಮಹತ್ವಾಕಾಂಕ್ಷಿ ಸ್ಮಾರಕ ದತ್ತು ಯೋಜನೆ ಯಶಸ್ಸಿಗಾಗಿ ಸಚಿವ ಎಚ್.ಕೆ. ಪಾಟೀಲ ಜಾಗತಿಕ ಸಮೂಹವನ್ನು ಸೆಳೆಯುವ ಸಲುವಾಗಿ ಅಂತರಾಷ್ಟ್ರೀಯ ಮಟ್ಟದ ಸಭೆ ನಡೆಸಿದರು.

    ಸೆಪ್ಟೆಂಬರ್ 25 ರಂದು ಸ್ಮಾರಕಗಳ ದತ್ತು ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು. ಈ ಯೋಜನೆ ಯಶಸ್ಸಿಗೆ ಅನುವಾಗುವಂತೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಆನಿವಾಸಿ ಭಾರತೀಯ ಕನ್ನಡಿಗರೊಂದಿಗೆ ಮಹತ್ವದ ಸಮಾಲೋಚನಾ ಸಭೆ ನಡೆಸಿದರು.
    ಅಮೆರಿಕ ವಿವಿಧ ಬೃಹತ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಸಂಸ್ಥೆಗಳ ಮಾಲೀಕರಾಗಿರುವ ಆನಿವಾಸಿ ಭಾರತೀಯ ಕನ್ನಡಿಗರೊಂದಿಗೆ ಜೂಮ್ ಮೂಲಕ ಅಂತರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಮಾತನಾಡಿದ ಸಚಿವ ಪಾಟೀಲ, ರಾಜ್ಯದ ಸ್ಮಾರಕ ದತ್ತು ಯೋಜನೆ ಉದ್ದೇಶವನ್ನು ವಿವರಿಸಿ, ಈ ಯೋಜನೆ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದರು.

    ರಾಜ್ಯದ ಪ್ರವಾಸೀ ಕೇಂದ್ರಗಳಲ್ಲಿ ಮತ್ತಷ್ಟು ಮೂಲಸೌಕರ್ಯ ಒದಗಿಸುವತ್ತ ರಾಜ್ಯ ಸರ್ಕಾರ ಚಿತ್ತಹರಿಸಿದೆ. ರಾಜ್ಯದ ಬಗ್ಗೆ ಪ್ರೀತಿ ಅಭಿಮಾನ ಉಳ್ಳಂತಹವರು ಈ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಕೋರಿದರು.

    ಜಾಗತಿಕ ಪ್ರವಾಸಿಗರ ಸಂಖ್ಯೆ ಹೆಚ್ಚಳ ನಿರೀಕ್ಷೆ

    ರಾಜ್ಯದ ಇನ್ನೂ ಮೂರು ಪ್ರವಾಸಿ ತಾಣಗಳನ್ನು ಯೂನೆಸ್ಕೋ ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಿ ಪ್ರ್ರಕಟಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು, ಬೇಲೂರು, ಹಳೆ ಬೀಡು ಮತ್ತು ಸೋಮನಾಥಪುರ ದೇಗುಲಕ್ಕೆ ಪ್ರವಾಸಿಗರು ಅದರಲ್ಲೂ ಜಾಗತಿಕ ಪ್ರವಾಸಿಗರ ಹರಿವು ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಸ್ಮಾರಕ ದತ್ತು ಯೋಜನೆಗೆ ಯಶಸ್ಸು ದೊರಕಲಿದೆ ಎಂದು ಆನಿವಾಸಿ ಭಾರತೀಯರಿಗೆ ಅದರಲ್ಲೂ ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಿಗೆ ಭರವಸೆ ನೀಡಿದರು.

    ಉದ್ಯಮಿಗಳಿಂದ ಯೋಜನೆಗೆ ಹರ್ಷ

    ಸಭೆಯಲ್ಲಿ ವಿದೇಶಗಳಿಂದ ಪಾಲ್ಗೊಂಡಿದ್ದ ಉದ್ಯಮಿಗಳು ರಾಜ್ಯದ ಸ್ಮಾರಕ ದತ್ತು ಯೋಜನೆ ಬಗ್ಗೆ ಹರ್ಷ ವ್ಯಕ್ತಪಡಿಸಿದರಲ್ಲದೆ, ತಮ್ಮ ಸಹಕಾರದ ಜತೆಗೆ ತಾವು ಪ್ರತಿನಿಧಿಸುತ್ತಿರುವ ಇತರೆ ಖಾಸಗಿ ಸಂಸ್ಥೆಗಳು ಮತ್ತು ಪ್ರವಾಸೋದ್ಯಮ ಕ್ಷೇತ್ರದ ಮುಂಚೂಣಿ ಸಂಸ್ಥೆಗಳೊಂದಿಗೆ ಚರ್ಚೆ ನಡೆಸುವ ಮೂಲಕ ಯೋಜನೆ ಯಶಸ್ಸಿಗೆ ಸಾಥ್ ನೀಡುವುದಾಗಿ ಪ್ರಕಟಿಸಿದರು.
    ಅಕ್ಸೆಲ್ ವೆಂಚರ್ ಸಂಸ್ಥೆಯ ಪಾಲುದಾರ ಮತ್ತು ಕಲ್ಕಿ ಫೌಂಡೇಶನ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಅಮೆರಿಕದ ವಿವಿಧ ರಾಯಭಾರಿಗಳು ಮತ್ತು ರಾಜ್ಯದ ಪರವಾಗಿ ಪ್ರವಾಸೋದ್ಯಮ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಪುರಾತತ್ವ ಇಲಾಖೆ ಆಯುಕ್ತರಾದ ದೇವರಾಜ್ ಸೇರಿದಂತೆ ಅಧಿಕಾರಿಗಳ ತಂಡ ಸಭೆಯಲ್ಲಿ ಭಾಗವಹಿಸಿತ್ತು.

    ಇತಿಹಾಸ ತಿಳಿದರೆ ಇತಿಹಾಸ ಸೃಷ್ಟಿಸಬಹುದು. ಇತಿಹಾಸವನ್ನು ಹೇಳುವ ನಮ್ಮ ಸ್ಮಾರಕಗಳು ಅದ್ಭುತ ಮೌಲ್ಯಗಳಿರುವಂತಹವು. ನಮ್ಮ ಪರಂಪರೆ ಸಾರುವ ಈ ಸ್ಮಾರಕಗಳು ನಮ್ಮತನದ ಜತೆಗೆ ನಮ್ಮೆಲ್ಲರ ಅಭಿಮಾನ- ಗರ್ವದ ಪ್ರತೀಕ. ಈ ಸ್ಮಾರಕಗಳನ್ನು ದತ್ತು ಪಡೆಯಲು ನಮ್ಮವರಾದವರು ಮುಂದೆ ಬರಬೇಕು.
    -ಎಚ್.ಕೆ.ಪಾಟೀಲ, ಪ್ರವಾಸೋದ್ಯಮ ಸಚಿವ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts