More

    ದುಂಡಳ್ಳಿ ಗ್ರಾಪಂ ಸಭೆ ಬಹಿಷ್ಕರಿಸಿದ ಸದಸ್ಯರು

    • ಮಡಿಕೇರಿ: ಶನಿವಾರಸಂತೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸಾಮಾನ್ಯ ಸಭೆ ಅಧ್ಯಕ್ಷೆ ಸತ್ಯವತಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ಸಭೆ ಪ್ರಾರಂಭದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
    • ಇತ್ತೀಚೆಗೆ ನಡೆದ ಗ್ರಾ.ಪಂ.ಯ ಗ್ರಾಮಸಭೆಯಲ್ಲಿ ಗ್ರಾಮಸ್ಥರು ದುಂಡಳ್ಳಿ ವ್ಯಾಪ್ತಿಯ ಹಕ್ಕುಪತ್ರ ವಿತರಣೆಗೆ ಸಂಬಂಧಪಟ್ಟಂತೆ ಗ್ರಾ.ಪಂ.ಯು ಅರಣ್ಯ ಹಕ್ಕು ಸಮಿತಿ ರಚಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಸದಸ್ಯ ದೇವರಾಜ್ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ಆಯಿಷ ಬಾನು, ಅರಣ್ಯ ಹಕ್ಕು ಸಮಿತಿ ರಚಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
    • ಅರಣ್ಯ ಹಕ್ಕು ಸಮಿತಿ ರಚನೆಗೊಂಡ ನಂತರ ನಿಯೋಗ ಹಕ್ಕು ಪತ್ರ ವಿತರಣೆ ಕುರಿತಾಗಿ ಅರಣ್ಯ ಸಚಿವರಿಗೆ ಮನವಿ ಪತ್ರ ನೀಡಿ ಬರುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಗ್ರಾ.ಪಂ.ಅನುದಾನದ ಕೊರತೆಯಿಂದ ಅಭಿವೃದ್ಧಿ ಕುಂಠಿತಗೊಳ್ಳುತ್ತಿದೆ ಎಂದು ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಪೂರ್ಣಿಮಾ ಕಿರಣ್ ಹೇಳಿದರು. ಗ್ರಾಮಗಳಲ್ಲಿ ಎಲ್‌ಇಡಿ ಮತ್ತು ಸೋಲಾರ್ ದೀಪವನ್ನು ಅಳವಡಿಸುವ ಅಗತ್ಯ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.
    • ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ಅಮೃತ ಗ್ರಾಮ ಯೋಜನೆಯಿಂದ ಬಂದಿದ್ದ ಹಣ ಎಲ್ಲಿ ಹೋಯಿತು ಎಂದು ಸದಸ್ಯ ದೇವರಾಜ್ ಪ್ರಶ್ನಿಸಿದರು. ಈ ಕುರಿತು ತನಿಖೆಯಾಗಬೇಕೆಂದು ಉಳಿದ ಸದಸ್ಯರು ಧ್ವನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಹಿಂದಿನ ಅಧ್ಯಕ್ಷೆ ಪೂರ್ಣಿಮಾ ಕಿರಣ್, ಅಮೃತ ಗ್ರಾಮ ಯೋಜನೆಯಿಂದ ಬಂದ ಹಣವನ್ನು ನೀರುಗಂಟಿ ಉದ್ಯೋಗಿಗಳ ವೇತನಕ್ಕೆ ಬಳಕೆಯಾಗಿತು. ಅಷ್ಟೆ ಅಲ್ಲದೆ ಬಳಕೆ ಮಾಡಿದ ಪ್ರತಿಯೊಂದು ವೆಚ್ಚಕ್ಕೆ ಸಂಬಂಧಿಸಿದ ಪ್ರತಿಯೊಂದು ದಾಖಲಾತಿಗಳು ಇವೆ. ಆದರೂ ಆರೋಪ ಮಾಡುತ್ತಿದ್ದೀರಿ, ಈ ಸಂಬಂಧ ತನಿಖೆ ನಡೆಸಿ ಎಂದು ಪ್ರತಿಕ್ರಿಯಿಸಿದರು.
    • ವೈಯಕ್ತಿಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಹಿರಿಯ ಸದಸ್ಯ ಡಿ.ಬಿ.ಬೋಜಪ್ಪ ಅವರು ಉಪಾಧ್ಯಕ್ಷೆ ಗೋಪಿಕಾ, ಸದಸ್ಯರಾದ ನಿತಿನ್, ಪೂರ್ಣಿಮಾ ಕಿರಣ್ , ಮನುಕುಮಾರ್ ಜತೆ ವಾಗ್ವಾದಕ್ಕಿಳಿದರು. ಇದರಿಂದ ಸಭೆಯಲ್ಲಿ ಗೊಂದಲ ಉಂಟಾಯಿತು. ಪಿಡಿಒ ಆಯಿಷಾ ಬಾನು ಎಲ್ಲರನ್ನೂ ಸಮಾಧಾನ ಪಡಿಸಿದರು. ವಾಗ್ವಾದ ನಿಲ್ಲಲಿಲ್ಲ. ಕೊನೆಗೆ ಈ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts