More

    ಒಗ್ಗಟ್ಟಿನಿಂದ ಶ್ರಮಿಸಿದರೆ ಉತ್ತಮ ಫಲಿತಾಂಶ

    ಅರಕಲಗೂಡು: ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ನನ್ನ ಅವಧಿಯಲ್ಲಿ 16.5 ಸಾವಿರ ಕೋಟಿ ರೂ. ಅನುದಾನ ತಂದಿರುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.

    ಪಟ್ಟಣದಲ್ಲಿ ಪಪಂ ಮಾಜಿ ಅಧ್ಯಕ್ಷ ಮಂಜು ಶೆಟ್ಟಿಗೌಡ ಅವರ ಮನೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಸಂಸದರ ನಿಧಿ 3 ವರ್ಷ ಮಾತ್ರ ದೊರೆಯಿತು. ಇದರಲ್ಲಿ ಸ್ವಲ್ಪ ಹೆಚ್ಚಿನ ಪಾಲನ್ನು ನಮ್ಮ ಪಕ್ಷದ ಶಾಸಕರು ಇಲ್ಲದ ಕ್ಷೇತ್ರಗಳಿಗೆ ನೀಡಲಾಗಿದೆ. ಕಾರಣ ಅಲ್ಲಿ ನಮ್ಮ ಪಕ್ಷ ಹಾಗೂ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಿತ್ತು. ಅರಕಲಗೂಡು ತಾಲೂಕಿನ ಮತದಾರರು ನಮ್ಮ ತಾತ ಎಚ್.ಡಿ.ದೇವೇಗೌಡರು, ನಮ್ಮ ತಂದೆ ಎಚ್.ಡಿ.ರೇವಣ್ಣ ಸೇರಿದಂತೆ ನಮ್ಮ ಕುಟುಂಬದವರನ್ನು ಹಿಂದಿನಿಂದಲೂ ಬೆಂಬಲಿಸಿ ಆಶೀರ್ವದಿಸುತ್ತಾ ಬಂದಿದ್ದಾರೆ. ಈ ಬಾರಿ ಶಾಸಕ ಎ. ಮಂಜು ಅವರೂ ನಮ್ಮೊಂದಿಗೆ ಇರುವುದರಿಂದ ಇನ್ನೂ ಹೆಚ್ಚಿನ ಬೆಂಬಲ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ಪಡೆಯಲಾಗುವುದು. ಒಗ್ಗಟ್ಟಿನಿಂದ ಶ್ರಮಿಸಿದಾಗ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಈ ಬಾರಿಯ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ದೇವೇಗೌಡರು ಹಾಗೂ ಪ್ರಧಾನಿ ಮೋದಿ ಅವರ ಕೈ ಬಲಪಡಿಸುವ ಹಿನ್ನೆಲೆಯಲ್ಲಿ ಅತ್ಯಂತ ಹೆಚ್ಚಿನ ಬಹುಮತದಲ್ಲಿ ಮೈತ್ರಿ ಅಭ್ಯರ್ಥಿಯ ಗೆಲುವು ಸಾಧ್ಯವಾಗಬೇಕಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಶಾಸಕ ಎ. ಮಂಜು ಮಾತನಾಡಿ, ದೇವೇಗೌಡರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಒಲವಿದೆ. ಮೈತ್ರಿ ಪಕ್ಷದ ಅಭ್ಯರ್ಥಿ ಗೆಲುವಷ್ಟೇ ನಮಗೆ ಮುಖ್ಯವಾಗಿದ್ದು, ಯಾವುದೇ ವದಂತಿಗಳಿಗೆ ಕಿವಿಗೊಡದೆ ಅಭ್ಯರ್ಥಿ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸುವಂತೆ ಮನವಿ ಮಾಡಿದರು.
    ಕಳೆದ ಎರಡು-ಮೂರು ದಿನಗಳಿಂದ ಮೈತ್ರಿ ಕುರಿತು ಸಲ್ಲದ ವದಂತಿಗಳನ್ನು ಹರಡಿಸುತ್ತಿದ್ದು ಇದರಲ್ಲಿ ಯಾವುದೇ ಹುರುಳಿಲ್ಲ. ನಾವು ಕೇಳಿದಷ್ಟು ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ. ಯಾವುದೇ ಅಸಮಾಧಾನವೂ ಇಲ್ಲ. ರಾಜ್ಯದಲ್ಲಿ ಮೈತ್ರಿ ಪಕ್ಷದ 24 ರಿಂದ 25 ಅಭ್ಯರ್ಥಿಗಳ ಗೆಲುವು ಖಚಿತವಾಗಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

    ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿಗಾಗಿ ಯಾರನ್ನೂ ಬೇಕಾದರೂ ಸಂಪರ್ಕಿಸಿ. ಇದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ನನ್ನ ನೇತೃತ್ವದಲ್ಲೇ ಚುನಾವಣೆ ನಡೆಯಬೇಕು. ಹೊಳೆನರಸೀಪುರ ತಾಲೂಕಿಗಿಂತಲೂ ಹೆಚ್ಚಿನ ಬಹುಮತವನ್ನು ನನ್ನ ತಾಲೂಕಿನಲ್ಲಿ ಕೊಡಿಸುತ್ತೇನೆ ಎಂದು ಭರವಸೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದ್ದು ಎಚ್.ಡಿ. ದೇವೇಗೌಡರು ಭಾಗವಹಿಸಲಿದ್ದಾರೆ ಎಂದರು. ಮುಖಂಡರಾದ ನರಸೇಗೌಡ, ಹಿರಿಯಣ್ಣಯ್ಯ, ರಾಜೇಗೌಡ, ಗಾಂಧಿನಗರ ದಿವಾಕರ್, ಎಂ.ಎಸ್. ಯೋಗೇಶ್, ಹನುಮೇಗೌಡ, ಮಂಜುಶೆಟ್ಟಿಗೌಡ, ಹೂವಣ್ಣ, ಕೀರ್ತಿರಾಜ್, ಅಲೀಂ ಅಹಮದ್, ಸತೀಶ್, ಪಾಪಣ್ಣ, ಸಣ್ಣಸ್ವಾಮಿ ಚೌಡೇಗೌಡ, ಎಚ್.ಸಿ. ವೆಂಕಟೇಶ್ ಇತರರಿದ್ದರು.


    ಬಿಜೆಪಿ ಕಾರ್ಯಕರ್ತರು, ಮುಖಂಡರ ವಿಶ್ವಾಸ ಪಡೆಯುವೆ
    ಅರಕಲಗೂಡು: ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಒಟ್ಟಿಗೆ ಕರೆದೊಯ್ಯುವ ಕಾರ್ಯ ನಡೆಯುತ್ತಿದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೆ ಹಲವು ಬಿಜೆಪಿ ಮುಖಂಡರ ಜತೆ ಚರ್ಚಿಸಿದ್ದು, ನಮ್ಮ ಪಕ್ಷದಿಂದಲೂ ಆದೇಶ ಬಂದಿದೆ. ಚುನಾವಣೆಯಲ್ಲಿ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಅಪಸ್ವರವಿದೆ ಎಂಬುದು ಕೇವಲ ವದಂತಿ ಮಾತ್ರ ಎಂದರು.
    ಪೂರ್ವಭಾವಿಯಾಗಿ ಆಯಾ ಪಕ್ಷದ ಮುಖಂಡರು ಕಾರ್ಯಕರ್ತರ ಸಭೆ ನಡೆಸಿ ಚರ್ಚೆ ನಡೆಸಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಕಾರ್ಯ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಒಟ್ಟಿಗೆ ಸಭೆ ನಡೆಸಿ ಚರ್ಚೆ ನಡೆಸುವುದಾಗಿ ಹೇಳಿದರು.
    ಮಾಜಿ ಶಾಸಕರಾದ ಪ್ರೀತಂಗೌಡ, ಎ.ಟಿ.ರಾಮಸ್ವಾಮಿ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿ ಬೆಂಬಲ ಕೋರುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts