More

    ರಾಜಕೀಯ ಸಭೆಗೆ ಸುವಿಧಾ ತಂತ್ರಾಂಶ ಮೂಲಕ ಅನುಮತಿ

    ಉಡುಪಿ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಸಭೆ ಸಮಾರಂಭ ಸೇರಿದಂತೆ ಮತ್ತಿತರ ಚಟುವಟಿಕೆಗಳನ್ನು ನಡೆಸಲು ಸುವಿಧಾ ತಂತ್ರಾಂಶದ ಮೂಲಕ ಅನುಮತಿ ಪಡೆಯಬೇಕೆಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ತಿಳಿಸಿದರು .

    ಭಾನುವಾರ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪ್ರಿಂಟರ್​ ಮತ್ತು ಪಬ್ಲಿಷರ್ಸ್​ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.

    ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಸಾರ್ವಜನಿಕ ಸಭೆ, ಸಮಾರಂಭ, ರ್ಯಾಲಿ ನಡೆಸಲು, ಸಂಚಾರಿ ವಾಹನ, ಧ್ವನಿವರ್ಧಕ, ಹೆಲಿಕಾಪ್ಟರ್​ ಹಾಗೂ ಹೆಲಿಪ್ಯಾಡ್​ ಅನುಮತಿ ಸೇರಿದಂತೆ ಇನ್ನಿತರೆ ಕಾರ್ಯ ಚಟುವಟಿಕೆಗಳಿಗೆ ಸುವಿಧಾ ತಂತ್ರಾಂಶ ಮೂಲಕವೇ ಅನುಮತಿ ಪಡೆಯಬೇಕೆಂದರು.

    ಲೋಕಸಭೆ ಸಾರ್ವತ್ರಿಕ ಚುನಾವಣಾ ವೇಳಾಪಟ್ಟಿಯಂತೆ ಅಧಿಸೂಚನೆ ಹೊರಡಿಸಲಾಗುವುದು.
    ಲೋಕಸಭೆ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆಯನ್ನು ಚುನಾವಣಾ ಆಯೋಗ ಘೋಷಿಸಿದ್ದು , ಆಯೋಗ ಜಾರಿಗೊಳಿಸಿರುವ ನೀತಿ ಸಂಹಿತೆಗಳನ್ನು ರಾಜಕೀಯ ಪಕ್ಷಗಳು ತಪ್ಪದೇ ಪಾಲಿಸಬೇಕು. ಪಕ್ಷದ ಚಿನ್ಹೆಯ ವಾಹನ, ಫ್ಲೆಕ್ಸ್​ ಹಾಗೂ ಇನ್ನಿತರೆ ರಾಜಕೀಯ ಸಂಬಂಧ ಬ್ಯಾನರ್​ ಗಳಿದ್ದಲ್ಲಿ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕು. ರಾಜಕೀಯ ಪಕ್ಷದವರು ಯಾವುದೇ ಮೆರವಣಿಗೆ ಮಾಡುವುದಕ್ಕೆ, ರಾಜಕೀಯ ಪಕ್ಷಗಳ ಸಭೆ ಸಮಾರಂಭ ಆಯೋಜಿಸುವುದಕ್ಕೆ ಅನುಮತಿ ಪಡೆಯಬೇಕು ಎಂದರು.

    ಪ್ರಚಾರ ಕಾರ್ಯಕ್ಕೆ ಯಾವುದೇ ಧಾರ್ಮಿಕ ಸಂಸ್ಥೆ, ಸ್ಥಳಗಳನ್ನು ಬಳಸುವಂತಿಲ್ಲ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಬಾರದು. ಮದುವೆ, ಸಭೆ – ಸಮಾರಂಭಗಳಲ್ಲಿ ಮತ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಿದರು.

    ಚುನಾವಣೆಗೆ ಸಂಬಂಧಿಸಿದ ಕರಪತ್ರವನ್ನು ಮುದ್ರಿಸಿದ ಪ್ರಿಂಟಿಂಗ್​ ಪ್ರೆಸ್​ ಮಾಲೀಕರು ಡಿಕ್ಲರೇಶನನ್ನು ಮೂರು ದಿನಗಳ ಒಳಗೆ ಜಿಲ್ಲಾ ಎಂ.ಸಿ.ಎಂ.ಸಿ ಸಮಿತಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಕರಪತ್ರದಲ್ಲಿ ಮುದ್ರಕರ ಹೆಸರು, ಮುದ್ರಣದ ಸಂಖ್ಯೆಗಳನ್ನು ತಪ್ಪದೇ ನಮೂದಿಸಬೇಕು. ಮುದ್ರಣಕ್ಕೆ ತಗುಲುವ ವೆಚ್ಚವನ್ನು ಸಹ ನೀಡಬೇಕು ಎಂದರು.

    ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಕರಪತ್ರಗಳನ್ನು ಮುದ್ರಿಸುವುದು, ಜಾಹೀರಾತುಗಳನ್ನು ಪ್ರಚಾರ ಪಡಿಸುವುದು ಕಂಡುಬಂದರೆ ಆರ್​.ಪಿ ಕಾಯ್ದೆಯಡಿಯಲ್ಲಿ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಎಸ್ಪಿ ಕೆ. ಅರುಣ್​, ಎಡಿಸಿ ಮಮತಾದೇವಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಬಿ., ಶಿಕ್ಷಣಾಧಿಕಾರಿ ಅಶೋಕ್​ ಕಾಮತ್​ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts