More

    ಮೀನು ಸಾಗಣೆ ರೂಪದಲ್ಲಿ ಗಾಂಜಾ!ಖತರ‌್ನಾಕ್ ಗ್ಯಾಂಗ್ ಹೆಡೆಮುರಿ ಕಟ್ಟಿದ ಮಾಗಡಿ ಪೊಲೀಸರು

    ರಾಮನಗರ: ವಿಶಾಖಪಟ್ಟಣ ಆಂಧ್ರಪ್ರದೇಶದ ಪ್ರಮುಖ ಬಂದರು ನಗರಿ. ದಂಧೆಕೋರರಿಗೆ ಇದೇ ಪ್ಲಸ್ ಪಾಯಿಂಟ್ ಕೂಡ. ಮೀನು ಸಾಗಣೆ ಮಾಡುತ್ತಿದ್ದೇವೆ ಎಂದುಕೊಂಡೇ ಗಾಂಜಾ ಮಾರಾಟ ಜಾಲವನ್ನು ರಾಮನಗರದವರೆಗೂ ವಿಸ್ತರಿಸಿಕೊಂಡಿದ್ದ ಖತರ‌್ನಾಕ್ ಗ್ಯಾಂಗ್ ಅನ್ನು ಮಾಗಡಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

    ಸರ್ಕಾರ ಗಾಂಜಾ ಮಾರಾಟದ ವಿರುದ್ಧ ಸಮರ ಸಾರಿದ ಬೆನ್ನಲ್ಲೆ ಜಿಲ್ಲೆಯಲ್ಲಿಯೂ ದಂಧೆಕೋರರ ಬೆನ್ನಟ್ಟುವ ಕಾರ್ಯ ಆರಂಭಗೊಂಡಿದೆ. ಇದರ ಭಾಗವಾಗಿ ಮಾಗಡಿಯ ಮಂಚನಬೆಲೆ ಬಳಿ ಗಾಂಜಾ ಮಾರಾಟದ ಮಾಹಿತಿ ಪಡೆದ ತಾವರೆಕೆರೆ ಪೊಲೀಸರು ಶಿವರಾಜ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಪೂರೈಕೆ ಮೂಲದ ಮಾಹಿತಿ ಕೊಡುವ ಶಿವರಾಜ್, ನನ್ನನ್ನು ಬಿಟ್ಟು ಬಿಡಿ ಎಂದು ಬೇಡಿಕೊಳ್ಳುತ್ತಾನೆ. ಆದರೆ, ಹೊಸ ಯೋಜನೆ ರೂಪಿಸಿದ ವೃತ್ತ ನಿರೀಕ್ಷಕ ಬಿ.ಎಸ್.ಮಂಜುನಾಥ್ ಮತ್ತು ತಂಡ ಗಾಂಜಾ ಮೀನು ಹಿಡಿಯಲು ಶಿವರಾಜ್‌ನನ್ನೇ ಗಾಳವಾಗಿಸಿಕೊಂಡಿದೆ.

    ನಂಬದ ಕಿಂಗ್ ಪಿನ್: ಶಿವರಾಜ್‌ನಿಂದ ಜಾಲದ ಇಂಚಿಂಚು ಮಾಹಿತಿ ಪಡೆದ ತಂಡ ಆರೋಪಿಯನ್ನು ಹಿಡಿಯಲು ಗಾಂಜಾ ಪೂರೈಕೆ ಮೂಲಸ್ಥಾನ ಆಂಧ್ರ ಪ್ರದೇಶದ ವಿಶಾಖಪಟ್ಟಣಕ್ಕೆ ಹೋಗಿತ್ತು. ಆದರೆ, ಅಲ್ಲಿಗೆ ಹೋದ ಪೊಲೀಸರಿಗೆ ನಿರಾಸೆ ಕಾದಿತ್ತು. ಇವರನ್ನು ಕಾಣುತ್ತಿದ್ದಂತೆ ಗಾಂಜಾ ಪೂರೈಕೆದಾರ ಪಾಂಗಿ ಪ್ರಸಾದ್ ಎಂಬಾತ, ತಮಗೆ ಮಾಹಿತಿ ನೀಡದೆ ಬಂದಿದ್ದೀರಿ ನಿಮ್ಮ ಮೇಲೆ ನಂಬಿಕೆ ಇಲ್ಲ, ನಿಮಗೆ ಗಾಂಜಾ ಕೊಡುವುದಿಲ್ಲ ಎಂದಿದ್ದಾನೆ. ನಾವು ಪೊಲೀಸರು ಅನ್ನೋ ಗುಟ್ಟು ಬಿಟ್ಟು ಕೊಟ್ಟರೆ ಕೆಲಸ ಕೆಡುತ್ತದೆ ಎನ್ನುವ ಕಾರಣಕ್ಕೆ ಮೊದಲ ಪ್ರಯತ್ನದಲ್ಲಿ ಬರಿಗೈಲಿ ವಾಪಸಾಗಿದ್ದಾರೆ.
    ಧೃತಿಗಡೆದ ಮಾಗಡಿ ಪೊಲೀಸರು ಮತ್ತೊಂದು ಯೋಜನೆ ರೂಪಿಸಿ ಪೂರೈಕೆದಾರನ ವಿಶ್ವಾಸ ಗಳಿಸಲು ಆತನ ಬ್ಯಾಂಕ್ ಖಾತೆಗೆ ಹಣ ಹಾಕುವ ಮೂಲಕ ಕೊಡು ಕೊಳ್ಳುವಿಕೆಯ ಮಾತುಕತೆಗೆ ಇಳಿದರು. ಈ ವೇಳೆ ಗಾಂಜಾ ಖರೀದಿದಾರರ ಸೋಗಿನಲ್ಲಿದ್ದ ಪೊಲೀಸರನ್ನು ನಂಬಿದ ಪಾಂಗಿಪ್ರಸಾದ್ ಬರುವಂತೆ ಸೂಚನೆ ನೀಡಿದ್ದಾನೆ. ಆದರೆ, ಇದರಿಂದ ಅಪಾಯ ಅರಿತ ಪೊಲೀಸರು, ನಮ್ಮಲ್ಲಿ ಒಬ್ಬನಿಗೆ ಕರೊನಾ ಬಂದಿದೆ, ನೀವೇ ತಂದುಕೊಡಿ ಎಂದು ಮನವಿ ಮಾಡುತ್ತಾರೆ. ಹಿಂದು ಮುಂದು ನೋಡದ ಪಾಂಗೀಪ್ರಸಾದ್, ನೇರವಾಗಿ ಮಾಗಡಿಗೆ ಗಾಂಜಾ ತಂದುಕೊಡುವ ಭರವಸೆ ನೀಡುತ್ತಾನೆ. ಈ ಮೂಲಕ ನೇರವಾಗಿ ವಿಶಾಖಪಟ್ಟಣದ ಗಾಂಜಾ ಮೀನು 60 ಕೆಜಿ ಗಾಂಜಾದೊಂದಿಗೆ ಪೊಲೀಸರು ಬೀಸಿದ ಬಲೆಗೆ ಮಾಗಡಿಯಲ್ಲಿಯೇ ಬಿದ್ದಿದೆ.

    ಮೀನಿನೊಟ್ಟಿಗೆ ಗಾಂಜಾ: ವಿಶಾಖ ಪಟ್ಟಣದ ಆರ್ಕೂ ವ್ಯಾಲಿ ಎಂಬ ಪ್ರದೇಶದಲ್ಲಿ ಗಾಂಜಾ ಬೆಳೆಯಲಾಗುತ್ತದೆ. ಇಲ್ಲಿಂದ ಹಲವು ಕಡೆಗಳಿಗೆ ಗಾಂಜಾ ಪೂರೈಕೆ ಆಗುತ್ತದೆ. ಇದು ಬಂದರು ನಗರಿ ಆಗಿರುವುದರಿಂದ ಇಲ್ಲಿಂದ ಮೀನುಗಳು ಬೇರೆಡೆ ರವಾನೆ ಆಗುತ್ತವೆ. ಇದನ್ನೆ ಬಂಡವಾಳ ಮಾಡಿಕೊಂಡ ದಂಧೆ ಕೋರರು ಬಾಕ್ಸ್ ಗಳಲ್ಲಿ ಮೀನುಗಳನ್ನು ತುಂಬಿ, ಇವುಗಳ ಜತೆಗೆ ಗಾಂಜಾವನ್ನು ನಿಗದಿತ ಗುರಿಗೆ ತಲುಪಿಸುತ್ತಿದ್ದರು. ಯಾರೇ ಪರೀಶೀಲನೆ ಮಾಡಿದರೂ ಬಾಕ್ಸ್ ಮೇಲಿನ ಭಾಗದಲ್ಲಿ ಮೀನು ಕಾಣಿಸುತ್ತಿದ್ದರಿಂದ, ಅನುಮಾನವೂ ಬರುತ್ತಿರಲಿಲ್ಲ.

    ಪ್ರವಾಸಿಗರೇ ಟಾರ್ಗೆಟ್: ಚನ್ನಪಟ್ಟಣದ ಗಾಂಜಾ ಪೂರೈಕೆದಾರ ಪಾಂಗೀ ಪ್ರಸಾದ್ ಜತೆಗೆ, ಬೆಂಗಳೂರಿನ ಕುಪ್ಪ, ಶಿವರಾಜು, ಶಂಕರ್, ಮಂಜುನಾಥ್, ನವೀನ್, ಶರತ್ ಎಂಬುವವರನ್ನು ಬಂಧಿಸಲಾಗಿದೆ. ತಮಗೆ ಪೂರೈಕೆಯಾದ ಗಾಂಜಾವನ್ನು ಜಿಲ್ಲೆಯ ಸಾವನದುರ್ಗ, ಮಂಚನೆಬೆಲೆ, ತಿಪ್ಪಗೊಂಡನಹಳ್ಳಿ, ಬೆಂಗಳೂರಿನ ದೊಡ್ಡಾಲಹಳ್ಳಿ, ತಾವರೆಕೆರೆ ಸಮೀಪದ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಅದರಲ್ಲೂ ಪ್ರಮುಖವಾಗಿ ಇವರ ಟಾರ್ಗೆಟ್ ಈ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು. ಗಾಂಜಾ ಸೇದುವ ಸಲುವಾಗಿಯೇ ಬೆಂಗಳೂರಿನಿಂದ ವೀಕೆಂಡ್‌ಗಳಲ್ಲಿ ಇಲ್ಲಿಗೆ ಬರುತ್ತಿದ್ದವರಿಗೆ 100 ಗ್ರಾಂ ಗಾಂಜಾಕ್ಕೆ 600 ರೂ.ನಂತೆ ಮಾರಾಟ ಮಾಡುತ್ತಿದ್ದರು. ಇದರ ಜತೆಗೆ ಈ ಭಾಗದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೂ ಇಲ್ಲಿಂದಲೇ ಗಾಂಜಾ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಕರೊನಾ ಹಿನ್ನೆಲೆಯಲ್ಲಿ ಕಾಲೇಜುಗಳು ಬಂದ್ ಆಗಿರುವುದರಿಂದ ಇವರಿಗೆ ಮಾರಾಟ ಸಾಧ್ಯವಾಗಿರಲಿಲ್ಲ.

    ಗಾಂಜಾ ಸಾಗಿಸುತ್ತಿದ್ದವರ ಬಂಧನ: ಚನ್ನಪಟ್ಟಣ: ಗಾಂಜಾ ಸೊಪ್ಪು ಸಾಗಾಟ ಮಾಡುತ್ತಿದ್ದ ಐವರನ್ನು ಗ್ರಾಮಾಂತರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ತಾಲೂಕಿನ ಬ್ರಹ್ಮಣೀಪುರ ಕ್ರಾಸ್ ಬಳಿಯ ಆಂಜನೇಯ ದೇವಾಲಯದ ಬಳಿ ಗಾಂಜಾ ಸಾಗಾಟ ಮಾಡುತ್ತಿದ್ದ ಮಂದಿಯನ್ನು ಗ್ರಾಮಾಂತರ ಸಿಪಿಐ ಸಿ. ವಸಂತ್ ನೇತೃತ್ವದ ತಂಡ ಬಂಧಿಸಿ, 2 ಕೆಜಿ 150 ಗ್ರಾಂ ಗಾಂಜಾ, ಕಾರು ಹಾಗೂ ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ. ಗುರು, ವೆಂಕಟೇಶ್, ಉಮೇಶ, ಈಶ್ವರ್, ಅನಿಲ್ ಬಂಧಿತರು. ಈ ಐವರು ತಾಲೂಕಿನ ಯಲಚಿಪಾಳ್ಯ ಹಾಗೂ ಇನ್ನಿತ್ತರ ಮೂಲದವರಾಗಿದ್ದಾರೆ.

    ಗಾಂಜಾ ಮಾರಾಟ ತಡೆಯಲು ರಾಮನಗರ ಜಿಲ್ಲಾ ವ್ಯಾಪ್ತಿಯನ್ನು ಮೀರಿ ಹೊರಗಡೆಯೂ
    ದಾಳಿ ನಡೆಸುತ್ತಿದ್ದೇವೆ. ಗಾಂಜಾ ವಿರುದ್ಧದ ಹೋರಾಟದಲ್ಲಿ ನಮ್ಮ ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
    ಎಸ್.ಗಿರೀಶ್ , ಎಸ್‌ಪಿ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts