More

    ಪ್ರಧಾನಿ ಮೋದಿಯನ್ನು ಶ್ರೇಷ್ಠ ವ್ಯಕ್ತಿಯೆಂದು ಮತ್ತೊಮ್ಮೆ ಬಣ್ಣಿಸಿದ ಅಮೆರಿಕ ಅಧಕ್ಷ ಟ್ರಂಪ್​

    ದಕ್ಷಿಣ ಕೆರೊಲಿನಾ: ಎರಡು ದಿನಗಳ ಭಾರತ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಸುಂದರ ನೆನಪುಗಳನ್ನು ಜತೆಗೆ ಕೊಂಡೊಯ್ದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು “ಶ್ರೇಷ್ಠ ವ್ಯಕ್ತಿ” ಎಂದು ಶ್ಲಾಘಿಸಿದರು.

    ಆಗ್ನೇಯ ಅಮೆರಿಕದ ದಕ್ಷಿಣ ಕೆರೊಲಿನಾದಲ್ಲಿ ಶನಿವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು ಇತ್ತೀಚಿನ ಭಾರತ ಭೇಟಿ ತುಂಬಾ ಉಪಯುಕ್ತವಾಗಿತ್ತು ಎಂದು ಬಣ್ಣಿಸಿದರು. ಅಹಮದಾಬಾದ್​ನ ಮೊಟೆರಾ ಸ್ಟೇಡಿಯಂನಲ್ಲಿ ನಡೆದ ನಮಸ್ತೆ ಟ್ರಂಪ್​ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷಕ್ಕಿಂತ ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಬಹುಶಃ ನಾನು ಎಂದಿಗೂ ಜನಸಮೂಹ ನೋಡಿ ಉತ್ಸುಕನಾಗುವುದಿಲ್ಲ ಎಂದರು.

    ನಾನು ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗಿದ್ದೆ. ಅವರೊಬ್ಬ ಶ್ರೇಷ್ಠ ವ್ಯಕ್ತಿ. ಭಾರತೀಯರು ಅವರನ್ನು ತುಂಬಾ ಪ್ರೀತಿಸುತ್ತಾರೆ. ಸಾಮಾನ್ಯವಾಗಿ ನಾನು ಜನಸಮೂಹದ ಎದುರು ಮಾತನಾಡುತ್ತಿರುತ್ತೇನೆ. ಮತ್ಯಾರು ಹೊಂದಿರದ ಜನಸಮೂಹವನ್ನು ನಾನು ಹೊಂದಿದ್ದೇನೆ ಎಂದು ಭಾವಿಸಿದ್ದೆ. ಆದರೆ, ಭಾರತದ ಭೇಟಿ ಅದನ್ನು ಹುಸಿ ಮಾಡಿತು ಎಂದು ಹೇಳಿದರು.

    ಭಾರತಕ್ಕೆ ಭೇಟಿ ನೀಡಿದ ಬಳಿಕ ಜನಸಮೂಹದ ಬಗ್ಗೆ ಬಹುಶಃ ಮತ್ತೆಂದಿಗೂ ನನಗೆ ಯಾವುದೇ ಉತ್ಸಾಹ ಇರುವುದಿಲ್ಲವೆಂದು ಅನಿಸುತ್ತಿದೆ. ಭಾರತದಲ್ಲಿ 1.5 ಬಿಲಿಯನ್​ ಜನರಿದ್ದಾರೆ. ನಾವಿಲ್ಲಿ 350 ಮಂದಿ ಮಾತ್ರ ಸಮಾವೇಶದಲ್ಲಿ ಸೇರಿದ್ದೇವೆ. ಆದರೂ ನಾವು ಅತ್ಯುತ್ತಮವಾದುದ್ದನ್ನೇ ಮಾಡುತ್ತಿದ್ದೇವೆ. ನಾನು ಈ ಜನಸಮೂಹವನ್ನೂ ಇಷ್ಟಪಡುತ್ತೇನೆ. ಹಾಗೆಯೇ ಭಾರತದ ಜನಸಮೂಹವನ್ನೂ ಕೂಡ ಇಷ್ಟಪಡುತ್ತೇನೆ. ಭಾರತೀಯರು ತುಂಬಾ ಪ್ರೀತಿಯುಳ್ಳವರಾಗಿದ್ದಾರೆ. ಅವರು ಒಳ್ಳೆಯ ನಾಯಕನನ್ನು ಹೊಂದಿದ್ದಾರೆ. ನಮ್ಮ ದೇಶದ ಜನರ ಮೇಲೆಯೂ ಅವರಿಗೆ ತುಂಬಾ ಪ್ರೀತಿ ಇದೆ. ಹೀಗಾಗಿ ಭಾರತ ಭೇಟಿ ಉಪಯುಕ್ತವಾಗಿತ್ತು ಎಂದು ಬಣ್ಣಿಸಿದರು.

    ಅಂದಹಾಗೆ ಎರಡು ದಿನಗಳ ಪ್ರವಾಸ ನಿಮಿತ್ತ ಫೆ. 24ರ ಬೆಳಗ್ಗೆ ಅಹಮದಾಬಾದ್​ಗೆ ಬಂದಿಳಿದ ಟ್ರಂಪ್​ ದಂಪತಿ, ಅದ್ಧೂರಿ ರೋಡ್​ ಶೋ ಮೂಲಕ ಸಬರಮತಿ ಆಶ್ರಮ ಭೇಟಿ ನೀಡಿದರು. ಬಳಿಕ ವಿಶ್ವದ ಬಹುದೊಡ್ಡ ಮೊಟೆರಾ ಕ್ರಿಕೆಟ್​ ಕ್ರೀಡಾಂಗಣದಲ್ಲಿ “ನಮಸ್ತೆ ಟ್ರಂಪ್​” ಕಾರ್ಯಕ್ರಮದಲ್ಲಿ ಭಾಗಿಯಾದರು. ಬಳಿಕ ಅಹಮದಾಬಾದ್​ನಿಂದ ಆಗ್ರಾಗೆ ತೆರಳಿದ ಟ್ರಂಪ್​ ದಂಪತಿ ತಾಜ್​ ಮಹಲ್​ ವೀಕ್ಷಣೆ ಮಾಡಿದ ನಂತರ ದೆಹಲಿಗೆ ಆಗಮಿಸಿ, ಅಲ್ಲಿಯೇ ತಂಗಿದರು.

    ಫೆ. 25ರ ಬೆಳಗ್ಗೆ ಟ್ರಂಪ್​ ಗೌರವಾರ್ಥ ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ನಡೆಯಿತು. ಬಳಿಕ ರಾಜ್​ಘಾಟ್​ಗೆ ಟ್ರಂಪ್ ದಂಪತಿ ಭೇಟಿ ನೀಡಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದರು. ಬಳಿಕ ದೆಹಲಿಯ ಹೈದರಾಬಾದ್ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯಿತು. ಬಳಿಕ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

    ಇದರ ನಡುವೆ ದೆಹಲಿಯ ಸರ್ಕಾರಿ ಶಾಲೆಯೊಂದಕ್ಕೆ ಮೆಲನಿಯಾ ಟ್ರಂಪ್​ ಭೇಟಿ ನೀಡಿದರು. ಮಧ್ಯಾಹ್ನ ಅಮೆರಿಕ ರಾಯಭಾರ ಕಚೇರಿಯಲ್ಲಿ ಸಿಇಒಗಳ ದುಂಡುಮೇಜಿನ ಸಭೆ ನಡೆಯಿತು. ಬಳಿಕ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರನ್ನು ಭೇಟಿ ಮಾಡಿದ ಟ್ರಂಪ್​ ಔತಣಕೂಟದಲ್ಲಿ ಪಾಲ್ಗೊಂಡರು. ಬಳಿಕ ರಾತ್ರಿ 10:30ಕ್ಕೆ ಟ್ರಂಪ್ ದಂಪತಿ​ ಅಮೆರಿಕಗೆ ಪ್ರಯಾಣ ಬೆಳೆಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts