More

    ಮತ್ತಾವು ಸೇತುವೆ ಕನಸು ಮರೀಚಿಕೆ

    ನರೇಂದ್ರ ಎಸ್. ಮರಸಣಿಗೆ ಹೆಬ್ರಿ
    ಕಳೆದ 40 ವರ್ಷಗಳಿಂದ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ನಕ್ಸಲ್ ಪೀಡಿತ ಮತ್ತಾವು ಭಾಗದ ಜನರ ಬೇಡಿಕೆಯಾಗಿರುವ ಸೇತುವೆ ಕನಸು ಇನ್ನೂ ನನಸಾಗಿಲ್ಲ. ಮಳೆಗಾಲದಲ್ಲಿ 6 ತಿಂಗಳು ಸಂಪರ್ಕಕ್ಕೆ ಕೃತಕ ಕಾಲು ಸಂಕವೇ ಆಧಾರ. ಇದರಲ್ಲಿ ಸಂಚರಿಸುವುದೇ ಸವಾಲು. ಸ್ವಲ್ಪ ಎಡವಿದರೂ ಹೊಳೆಪಾಲಾಗುವ ಅಪಾಯವಿದೆ.
    ಮತ್ತಾವಿನಲ್ಲಿ ಮಲೆಕುಡಿಯ ಕುಟುಂಬದ 25 ಕುಟುಂಬಗಳ 70ರಿಂದ 80 ಮಂದಿ ವಾಸಿಸುತ್ತಿದ್ದಾರೆ. ಬಹುತೇಕರು ಕೂಲಿ ಕಾರ್ಮಿಕರು. ಈ ಭಾಗದ ಜನರು ಕಾರ್ಕಳ, ಹೆಬ್ರಿ, ಮುನಿಯಾಲು ಹಾಗೂ ಕಬ್ಬಿನಾಲೆ ಸಂಪರ್ಕಿಸಬೇಕಾದರೆ ಮತ್ತಾವು ಹೊಳೆ ದಾಟುವುದು ಅನಿವಾರ್ಯ. ಮಳೆಗಾಲದಲ್ಲಿ ಸಂಪರ್ಕಕ್ಕಾಗಿ ಸ್ಥಳೀಯರೇ ಸೇರಿ ಕೃತಕ ಕಾಲು ಸಂಕ ನಿರ್ಮಿಸುತ್ತಾರೆ. ಕೆಲವೊಮ್ಮೆ ವಿಪರೀತ ಮಳೆಗೆ ಕಾಲುಸಂಕ ಕೊಚ್ಚಿಹೋಗುತ್ತದೆ. ಇಲ್ಲಿನ ಜನರು ಮಳೆಗಾಲ ಆರಂಭಕ್ಕೆ ಮುನ್ನ ಬೈಕುಗಳನ್ನು ಹಳ್ಳ ದಾಟಿಸಿ ಅಲ್ಲೇ ನಿಲ್ಲಿಸುತ್ತಾರೆ.
    ಅಗತ್ಯ ವಸ್ತುಗಳ ದಾಸ್ತಾನು: ಮತ್ತಾವು ಕಾಲುಸಂಕದಿಂದ ಐದು ಕಿಲೋಮೀಟರ್ ದೂರದಲ್ಲಿ ಕೆಲವು ಮನೆಗಳಿವೆ. ಮಳೆಗಾಲದಲ್ಲಿ ವಾಹನದ ಸಂಪರ್ಕವಿಲ್ಲದೆ ಅಕ್ಕಿ, ಬೇಳೆ ಕಾಳು ಸಹಿತ ಅಗತ್ಯವಸ್ತುಗಳನ್ನು ಮೊದಲೇ ದಾಸ್ತಾನು ಮಾಡಬೇಕಾಗುತ್ತದೆ. ಇಲ್ಲಿ ಗರ್ಭಿಣಿಯರು, ವೃದ್ಧರನ್ನು ಹಾಗೂ ಆರೋಗ್ಯದ ಸಮಸ್ಯೆ ಎದುರಿಸುವವರನ್ನು ಹೊತ್ತುಕೊಂಡೆ ಸಾಗಬೇಕಾಗಿದೆ.
    ಕಾಡು ಉತ್ಪತ್ತಿಯೇ ಆಧಾರ: ಕಾಡು ಉತ್ಪತ್ತಿಯಾದ ಗೊರೆಕಾಯಿ, ರಾಮಪತ್ರೆ, ಸೀಗೆ, ಹುಳಿ, ಜೇನು, ದಾಲ್ಚಿನ್ನಿ ಹಾಗೂ ಇನ್ನಿತರ ಸಾಂಬಾರು ಪದಾರ್ಥಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿರುವ ಮಲೆಕುಡಿಯ ಜನಾಂಗದ ಕುಟುಂಬದವರಿಗೆ ವಿಶೇಷ ಸೌಲಭ್ಯ ಒದಗಿಸಬೇಕು. ಕಾಡು ಉತ್ಪತ್ತಿ ಖರೀದಿ ಕೇಂದ್ರ ಹಾಗೂ ಲ್ಯಾಂಪ್ಸ್ ಸೊಸೈಟಿಯನ್ನು ಕಬ್ಬಿನಾಲೆಯಲ್ಲಿ ಸ್ಥಾಪಿಸಬೇಕಾಗಿದೆ.

    ಕಾಲುಸಂಕಕ್ಕೆ ಹೆದರಿ ಹಾಸ್ಟೆಲ್ ಸೇರ್ಪಡೆ !: ಮಕ್ಕಳನ್ನು ಕಾಲುಸಂಕದಲ್ಲಿ ಶಾಲೆಗೆ ಕಳುಹಿಸುವುದೇ ಹೆತ್ತವರಿಗೆ ಸಾಹಸ. ಮಳೆ ಜೋರಾದರೆ ಕಾಲುಸಂಕವೂ ನೀರುಪಾಲಾಗುತ್ತದೆ. ಆದ್ದರಿಂದ ಹೆಚ್ಚಿನ ಪಾಲಕರು ಮಕ್ಕಳನ್ನು ದೂರದ ಹೆಬ್ರಿ ಮತ್ತು ಕಾರ್ಕಳದ ಹಾಸ್ಟೆಲ್‌ಗೆ ಸೇರ್ಪಡೆಗೊಳಿಸಿದ್ದಾರೆ. ಪ್ರಸ್ತುತ 15ರಿಂದ 20 ಮಕ್ಕಳು ಮುನಿಯಾಲು, ಹೆಬ್ರಿಗೆ ಶಾಲೆಗೆ ಹೋಗುತ್ತಿದ್ದಾರೆ. ಬೆಳಗ್ಗೆ ಮತ್ತು ಸಾಯಂಕಾಲ ಪಾಲಕರು ಮಕ್ಕಳನು ್ನಕಾಲುಸಂಕ ದಾಟಿಸಿ ಬರಬೇಕು.
    ಸಂಬಂಧ ಕುದುರಿಸುವುದೇ ಸವಾಲು: ಮಲೆಕುಡಿಯರು ಬಹುತೇಕರು ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದು, ಈಗ ಆಧುನಿಕತೆಗೆ ತಕ್ಕಂತೆ ಜೀವನ ಶೈಲಿ ಬದಲಾಗಿದೆ. ಆದರೆ ಮೂಲಸೌಕರ್ಯ ಕೊರತೆಯಿರುವ ಇಲ್ಲಿನ ಯುವಕ – ಯುವತಿಯರಿಗೆ ವೈವಾಹಿಕ ಸಂಬಂಧ ಬೆಸೆಯುವುದೇ ಕಷ್ಟವಾಗಿದೆ. ಜತೆಗೆ ಕಾಡು ಪ್ರಾಣಿಗಳ ಹಾವಳಿಯೂ ಇದೆ. ಇಲ್ಲಿನ ಜನರು ಬೆಳೆದ ಬೆಳೆಗಳನ್ನು ಜಿಂಕೆ, ಕಾಡೆಮ್ಮೆ ಹಂದಿ, ಕರಡಿಗಳು ನಾಶಪಡಿಸುತ್ತವೆ. ಸೇತುವೆ ಇಲ್ಲದೆ ಕಳೆದ ವರ್ಷ ಕರಡಿ ಘಾಸಿಗೊಳಿಸಿದವರನ್ನು ಆಸ್ಪತ್ರೆಗೆ ಸೇರಿಸಲು ಹರಸಾಹಸಪಡಬೇಕಾಗಿತ್ತು.

    ನಕ್ಸಲ್ ಬಾಂಬ್ ದಾಳಿಗೆ 16 ವರ್ಷ: ಮತ್ತಾವು ಸೇತುವೆ ನಿರ್ಮಾಣಕ್ಕೆ ನಕ್ಸಲರು ಪರೋಕ್ಷವಾಗಿ ಜನರಲ್ಲಿ ಕುಮ್ಮಕ್ಕು ನೀಡಿದ್ದರು. ಇದಕ್ಕಾಗಿ 2005ರ ಜುಲೈ 28ರಂದು ಮತ್ತಾವು ಸಮೀಪದಲ್ಲಿ ನೆಲಬಾಂಬ್ ಸ್ಫೋಟಸಿದ್ದರು. ಈ ದುರ್ಘಟನೆಯಲ್ಲಿ ಹಲವು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆ ದೇಶದ ಗಮನ ಸೆಳೆದಿತ್ತು. ಇಂದಿಗೆ(ಜುಲೈ 28) ನಕ್ಸಲ್ ದಾಳಿ ನಡೆದು 16 ವರ್ಷ ಕಳೆದರೂ ಮೂಲ ಸೌಕರ್ಯ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ.


    ಇದು ದಶಕಗಳ ಕಥೆ. ನನ್ನ ಸ್ವಂತ ತಂಗಿ ಹತ್ತು ವರ್ಷಗಳ ಹಿಂದೆ ಹುಲ್ಲು ತರಲು ಹೋದಾಗ ಬಂಡೆಕಲ್ಲು ಮೇಲೆ ಜಾರಿಬಿದ್ದು ಘಾಸಿಗೊಂಡಿದ್ದಳು. ಮಳೆಗಾಲದಲ್ಲಿ ಸೇತುವೆ ಇಲ್ಲದ ಕಾರಣ ಕೃತಕ ಕಾಲು ಸಂಕದಲ್ಲಿ ಆಕೆಯನ್ನು ಹೊತ್ತುಕೊಂಡು ಆಸ್ಪತ್ರೆಗೆ ದಾಖಲಿಸಿದರೂ ಉಳಿಸಿಕೊಳ್ಳಲಾಗಲಿಲ್ಲ. ಸರಿಯಾದ ಸೇತುವೆ ಸಂಪರ್ಕವಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ.
    | ನಾರಾಯಣಗೌಡ ಮತ್ತಾವು ಗ್ರಾಮಸ್ಥ

    ಮತ್ತಾವು ಸೇತುವೆ ನಿರ್ಮಾಣಕ್ಕೆ ಎರಡು ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಬರುವುದರಿಂದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಅರಣ್ಯ ಇಲಾಖೆಯ ತಾಂತ್ರಿಕ ಕಾರಣಗಳಿಂದ ಕಾಮಗಾರಿ ಆರಂಭಿಸಲು ಸಾಧ್ಯವಾಗುತ್ತಿಲ್ಲ. ಮತ್ತೆ ಸರ್ಕಾರವನ್ನು ಎಚ್ಚರಿಸಿ ಸಮಸ್ಯೆ ಬಗೆಹರಿಸಲಾಗುವುದು.
    | ಸುನೀಲ್ ಕುಮಾರ್ ಶಾಸಕ ಕಾರ್ಕಳ
     
    ನಮ್ಮ ಕಡೆಯಿಂದ ಎಲ್ಲ ಪ್ರಕ್ರಿಯೆಗಳು ಮುಗಿದಿದ್ದು, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ವೈಲ್ಡ್ಲೈಫ್ ಕ್ಲಿಯರೆನ್ಸ್‌ನ ಪ್ರಕ್ರಿಯೆ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಅನುಮೋದನೆ ಆಗಬೇಕಾಗಿದೆ. ಬಳಿಕ ಸೇತುವೆ ನಿರ್ಮಾಣಕ್ಕೆ ಯಾವುದೇ ತೊಡಕುಗಳು ಉಂಟಾಗುವುದಿಲ್ಲ.
    | ರುಥ್ರೇನ್ ಡಿಸಿಎಫ್ ಕುದುರೆಮುಖ ವನ್ಯಜೀವಿ ವಿಭಾಗ
     

    ಕಬ್ಬಿನಾಲೆ ಮತ್ತಾವು ಹೊಳೆಗೆ ಸೇತುವೆ ನಿರ್ಮಿಸಲು ಮೂರು ದಶಕಗಳಿಂದ ಹೋರಾಡುತ್ತಿದ್ದೇವೆ. ಇನ್ನೂ ಬೇಡಿಕೆ ಫಲಿಸಲಿಲ್ಲ. ಈ ವಿಚಾರದಲ್ಲಿ ಜನಪ್ರತಿನಿಧಿ, ಅಧಿಕಾರಿಗಳ ನಡುವಿನ ಸಮನ್ವಯತೆ ಕೊರತೆ ಎದ್ದು ಕಾಣುತ್ತದೆ. ಕಾನೂನುಗಳೇನಿದ್ದರೂ ಅಗತ್ಯಕ್ಕನುಗುಣವಾಗಿ ಸಂಬಂಧಿತರು ಸ್ಪಂದಿಸುವ ಅಗತ್ಯವಿದೆ.
    | ಕಬ್ಬಿನಾಲೆ ಶ್ರೀಕರ ಭಾರದ್ವಾಜ್ ಸಾಮಾಜಿಕ ಕಾರ್ಯಕರ್ತ

    ಮತ್ತಾವು ಸೇತುವೆ ನಮ್ಮ ಸಮುದಾಯದ ಬಹುಕಾಲದ ಬೇಡಿಕೆಯಾಗಿದೆ. ಇದಕ್ಕಾಗಿ ಮಲೆಕುಡಿಯ ಸಂಘದ ವತಿಯಿಂದಲೂ ನಾವೆಲ್ಲ ಹೋರಾಟ ನಡೆಸಿದ್ದೇವೆ. ಕಾಲುಸಂಕದಲ್ಲಿ ಸಂಚರಿಸುವುದು ಅಪಾಯಕಾರಿಯಾಗಿರುವುದರಿಂದ ಶೀಘ್ರ ನಮ್ಮ ಬೇಡಿಕೆ ಈಡೇರಿಸಬೇಕು.
    | ಸತೀಶ್ ಗೌಡ ಪಾರಿಕಲ್ಲು, ಗ್ರಾಪಂ ಸದಸ್ಯ ಮುದ್ರಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts