More

    ಮಾತೆ ಮಾಣಿಕೇಶ್ವರಿ ಅಂತಿಮ ದರ್ಶನಕ್ಕೆ ಭಕ್ತಸಾಗರ; ಎಲ್ಲರ ಕಣ್ಣಲ್ಲೂ ಕಂಬನಿ, ಅಮ್ಮಾ… ಅಮ್ಮಾ… ಎಂಬ ಉದ್ಗಾರ 

    ಸೇಡಂ:  ಅದು ಚಿಕ್ಕ ಬೆಟ್ಟವಾದರೂ ಶನಿವಾರ ರಾತ್ರಿಯಿಂದಲೇ ಭಕ್ತರಿಂದ ತುಂಬಿ ಹೋಗಿತ್ತು. ಭಜನೆ, ಮಂತ್ರಪಠಣದ ಮಧ್ಯೆ ಎಲ್ಲರ ಕಣ್ಣಲ್ಲೂ ಕಂಬನಿ, ಅಮ್ಮಾ…ಅಮ್ಮಾ… ಎಂಬ ಉದ್ಗಾರ ಕೇಳಿ ಬರುತ್ತಿತ್ತು. ಈ ದೃಶ್ಯ ಕಂಡು ಬಂದಿದ್ದು ಯಾನಾಗುಂದಿ ಬೆಟ್ಟದಲ್ಲಿ.

    ಮಾತೆ ಮಾಣಿಕೇಶ್ವರಿ ಶನಿವಾರ ರಾತ್ರಿ ದೇಹತ್ಯಾಗ ಮಾಡಿದ ವಿಷಯ ಅರಿಯುತ್ತಲೇ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹೀಗೆ ಅನೇಕ ರಾಜ್ಯಗಳಿಂದ ಸಾವಿರಾರು ಭಕ್ತರು ಯಾನಾಗುಂದಿಗೆ ಬಂದು ಅಮ್ಮನ ಅಂತಿಮ ದರ್ಶನ ಪಡೆದರು. ಭಾನುವಾರ ಬಿರುಬಿಸಿಲು ಲೆಕ್ಕಿಸದೆ ಸಾವಿರಾರು ಮಂದಿ ಸರದಿಯಲ್ಲಿ ನಿಂತು ಅಂತಿಮ ನಮನ ಸಲ್ಲಿಸಿದರು.

    ಭಾನುವಾರ ನಸುಕಿನ ಜಾವ ಗುಹೆಯಲ್ಲಿ ಅಮ್ಮನವರ ಪಾರ್ಥಿವ ಶರೀರಕ್ಕೆ ಕ್ಷೀರಾಭಿಷೇಕ ಮಾಡಿದ ಅರ್ಚಕರು, ಬೆಳಗ್ಗೆ 8 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಮಠದ ಆವರಣದಲ್ಲಿ ಟ್ರಸ್ಟ್​ನಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

    ಸಚಿವ ಪ್ರಭು ಚವ್ಹಾಣ್ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿ, ಲಕ್ಷಾಂತರ ಭಕ್ತರ ಆರಾಧ್ಯ ದೇವತೆಯಾಗಿದ್ದ ಅಮ್ಮನವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಹಿಂದು ಸಂಪ್ರದಾಯದಂತೆ ನೆರವೇರಿಸುವುದಾಗಿ ಪ್ರಕಟಿಸಿದರು. ಅಮ್ಮನವರ ದರ್ಶನಕ್ಕೆ ತೊಂದರೆಯಾಗದಂತೆ 2000ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್​ನಲ್ಲಿ ತೊಡಗಿದ್ದಾರೆ.

    ಮೊಳಗಿದ ಓಂ ನಮಃ ಶಿವಾಯ: ಭಕ್ತರ ಆರಾಧ್ಯ ದೇವತೆ, ಯಾನಾಗುಂದಿ ಗಿರಿ ನಿವಾಸಿ ಮಾತೆ ಮಾಣಿಕೇಶ್ವರಿ ಅವರ ಅಂತಿಮ ದರ್ಶನ ಪಡೆಯಲು ಜನಸಾಗರ ಹರಿದು ಬರುತ್ತಿದ್ದು, ಸೋಮವಾರ ಮಧ್ಯಾಹ್ನ 3ಕ್ಕೆ ವಿಧಿ ವಿಧಾನ ನಡೆಯಲಿದೆ. ಎಲ್ಲೆಡೆ ಓಂ ನಮಃ ಶಿವಾಯ ಘೊಷಣೆ ಮೊಳಗುತ್ತಿದೆ. ಸೋಮವಾರ ಮಧ್ಯಾಹ್ನದವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಿರುವುದರಿಂದ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಲಕ್ಷದ ಗಡಿ ದಾಟಬಹುದು ಎನ್ನಲಾಗಿದೆ.

    ಅಹಿಂಸಾ ತತ್ವ ಸಾರುತ್ತಿದ್ದ ಮಾತಾಜಿ: ದರ್ಶನಕ್ಕೆ ಬರುವ ಭಕ್ತರಿಗೆ ಮಾತಾಜಿ ಮೊದಲು ಹೇಳುತಿದ್ದದ್ದು ಅಹಿಂಸಾ ತತ್ವ. ‘ಪ್ರಾಣಿ ಬಲಿ ಯಾವುದೇ ಕಾರಣಕ್ಕೂ ಮಾಡಬಾರದು. ಪ್ರಾಣಿ ಹಿಂಸೆ ದೊಡ್ಡ ಅಪರಾಧ. ಪ್ರಾಣಿಗಳಿಗೆ ಮಾತು ಬರುವುದಿಲ್ಲ. ಮನಷ್ಯನಾದರೆ ಏನಾದರೂ ಹೇಳಬಲ್ಲ. ಆದರೆ ರಾಸುಗಳ ಪರಿಸ್ಥಿತಿ ಯಾರು ಕೇಳಬೇಕು? ಎನ್ನುತ್ತಿದ್ದರು ಮಾತಾಜಿ. ಕೆಲ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದ ಪ್ರಾಣಿಬಲಿ ತಡೆಗೆ ತಮ್ಮ ಅನುಯಾಯಿಗಳನ್ನು ಕಳುಹಿಸಿಕೊಡುತ್ತಿರುವುದನ್ನು ಭಕ್ತರು ಸ್ಮರಿಸಿಕೊಳ್ಳುತ್ತಾರೆ.

    ಪ್ರವಾಸಿ ತಾಣ ಮಾಡಲು ಒತ್ತಡ

    ಯಾನಾಗುಂದಿ ಮಾತಾ ಮಾಣಿಕೇಶ್ವರಿ ಮಠದಲ್ಲಿ ಕೋಟಿ ಲಿಂಗ ಸ್ಥಾಪನೆ ಆಗಬೇಕೆಂಬ ಅಮ್ಮನವರ ಆಸೆ ಈಡೇರಿಸಲು ಸರ್ಕಾರದಿಂದಲೇ ಲಿಂಗಗಳ ಸ್ಥಾಪಿಸುವುದರ ಜತೆಗೆ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಅಂತಿಮ ದರ್ಶನದ ಬಳಿಕ ಮಾಜಿ ಸಚಿವರಾದ ಬಾಬುರಾವ ಚಿಂಚನಸೂರ ಮತ್ತು ಮಾಲೀಕಯ್ಯ ಗುತ್ತೇದಾರ್ ತಿಳಿಸಿದರು. ಶಾಸಕರಾದ ರಾಜಕುಮಾರ ಪಾಟೀಲ್ ತೆಲ್ಕೂರ, ಬಿ.ಜಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಅಮರೇಗೌಡ ಬಯ್ಯಾಪುರ, ನಾಗನಗೌಡ ಕಂದಕೂರ, ಬಸವರಾಜ ಮತ್ತಿಮೂಡ, ಮಾಜಿ ಸಚಿವ ರಾದ ಡಾ.ಶರಣಪ್ರಕಾಶ ಪಾಟೀಲ್, ಡಾ.ಎ.ಬಿ. ಮಾಲಕರಡ್ಡಿ, ಮಾಜಿ ಎಂಎಲ್​ಸಿ ಅಲ್ಲಮಪ್ರಭು ಪಾಟೀಲ್, ಜಿಲ್ಲಾಧಿಕಾರಿ ಬಿ.ಶರತ್, ಸಹಾಯಕ ಆಯುಕ್ತ ರಮೇಶ ಕೋಲಾರ ಮತ್ತಿತರರು ಅಂತಿಮ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts