More

    ಮಾಸ್ಟರ್ ಪ್ಲಾೃನ್ ಜಾರಿಗೆ ಸಿದ್ಧತೆ

    ಉಗರಗೋಳ: ಸವದತ್ತಿ ಯಲ್ಲಮ್ಮ ದೇವಸ್ಥಾನ ಹಾಗೂ ಯಲ್ಲಮ್ಮ ಗುಡ್ಡದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್‌ಪ್ಲಾೃನ್ ರೂಪಿಸಲಾಗುತ್ತಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

    ಸಮೀಪದ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಅತ್ಯಂತ ಪ್ರಸಿದ್ಧ ಧಾರ್ಮಿಕ ಸ್ಥಳವಾಗಿರುವ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಪ್ರತಿ ವರ್ಷ ಕೋಟ್ಯಂತರ ಜನರು ಭೇಟಿ ನೀಡುತ್ತಾರೆ. ಜಾತ್ರೆ ಸಂದರ್ಭದಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಒದಗಿಸುವುದರ ಜತೆಗೆ ಲಕ್ಷಾಂತರ ಜನರಿಗೆ ಸುಗಮ ದರ್ಶನಕ್ಕೆ ಅನುಕೂಲವಾಗುವಂತೆ ಮಾಸ್ಟರ್ ಪ್ಲ್ಯಾನ್ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

    ದೇವಿ ದರ್ಶನಕ್ಕಾಗಿ ನಾಲ್ಕೈದು ಗಂಟೆಗಳ ಕಾಲ ಸರತಿ ನಿಲ್ಲುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಕುಡಿಯುವ ನೀರು, ನೆರಳು, ಶೌಚಗೃಹ ವ್ಯವಸ್ಥೆ ಮತ್ತಿತರ ಮೂಲಸೌಕರ್ಯ ಒದಗಿಸಬೇಕಾಗುತ್ತದೆ. ಮುಜರಾಯಿ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಮುಜರಾಯಿ ಇಲಾಖೆಗೆ ಸಂಬಂಧಿಸಿದಂತೆ ಲಭ್ಯವಿರುವ 87 ಎಕರೆ ಪ್ರದೇಶದಲ್ಲಿ ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಹಂತಹಂತವಾಗಿ ಅನುಷ್ಠಾನಗೊಳಿಸಬಹುದಾದ ಸಮಗ್ರ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

    ದೇವಸ್ಥಾನವು ಪ್ರತಿವರ್ಷ ಕೋಟ್ಯಂತರ ರೂ.ಆದಾಯ ಹೊಂದಿದೆ. ಈ ಆದಾಯದಲ್ಲಿ ದೇವಸ್ಥಾನ ನಿರ್ವಹಣೆ ಬಳಿಕ ಉಳಿಯುವ ಹಣವನ್ನು ಪ್ಲ್ಯಾನ್ ಅನುಷ್ಠಾನಕ್ಕೆ ಬಳಸಬಹುದಾಗಿದೆ. ಅದಲ್ಲದೆ ಸರ್ಕಾರದಿಂದಲೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು. ಪ್ರವಾಸೋದ್ಯಮ ಇಲಾಖೆಯ ವತಿಯಿಂದಲೂ ಪ್ರತ್ಯೇಕ ಯೋಜನೆ ರೂಪಿಸುವ ಮೂಲಕ ಒಟ್ಟಾರೆ ಸವದತ್ತಿ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

    ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಯಲ್ಲಮ್ಮದೇವಿ ದೇವಸ್ಥಾನದ ಒಳಹೋಗಲು ಒಂದು ದ್ವಾರ ಮಾತ್ರ ತೆರೆಯಲಾಗಿದೆ. ಆದರೆ, ಗುಡ್ಡಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದರಿಂದ ನಾಲ್ಕೂ ದ್ವಾರಗಳನ್ನು ತೆರೆದು ಅನುಕೂಲ ಕಲ್ಪಿಸಬೇಕು. ಭಕ್ತರು ಸುಲಭವಾಗಿ ದರ್ಶನ ಪಡೆಯಲು ಅನುಕೂಲವಾಗುವಂತೆ ದೇವಸ್ಥಾನದ ಎರಡೂ ಕಡೆ ಕಾಲುಸೇತುವೆ ನಿರ್ಮಿಸಬೇಕು. ಭಕ್ತರ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಮೂಲಸೌಕರ್ಯ ಒದಗಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

    ಮುಜರಾಯಿ ಇಲಾಖೆಯ ಆಯುಕ್ತ ಬಸವರಾಜೇಂದ್ರ, ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ.ಬಿ.ಮಹೇಶ, ಮಾಜಿ ಶಾಸಕ ಆರ್.ಎಸ್.ಪಾಟೀಲ, ಮಲ್ಲು ಜಕಾತಿ, ವೈ.ವೈ.ಕಾಳಪ್ಪನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts